ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ಪ್ರಮುಖರನ್ನು ಉಳಿಸಿಕೊಂಡ ಆರ್‌ಸಿಬಿ

ಡ್ವೇನ್‌ ಬ್ರಾವೊ ಕೈಬಿಟ್ಟ ಚೆನ್ನೈ ಸೂಪರ್‌ ಕಿಂಗ್ಸ್‌
Last Updated 15 ನವೆಂಬರ್ 2022, 16:08 IST
ಅಕ್ಷರ ಗಾತ್ರ

ಬೆಂಗಳೂರು: ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಫಾಫ್‌ ಡುಪ್ಲೆಸಿ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (ಆರ್‌ಸಿಬಿ) ನಿರೀಕ್ಷೆಯಂತೆಯೇ ತನ್ನಲ್ಲಿ ಉಳಿಸಿಕೊಂಡಿದೆ.

ವಿದೇಶಿ ಆಟಗಾರರಲ್ಲಿ ಮ್ಯಾಕ್ಸ್‌ವೆಲ್‌ ಮತ್ತು ಡುಪ್ಲೆಸಿ ಅಲ್ಲದೆ ಶ್ರೀಲಂಕಾದ ಆಲ್‌ರೌಂಡರ್‌ ವಣಿಂದು ಹಸರಂಗ, ಆಸ್ಟ್ರೇಲಿಯಾದ ವೇಗಿ ಜೋಶ್‌ ಹ್ಯಾಜೆಲ್‌ವುಡ್‌, ನ್ಯೂಜಿಲೆಂಡ್‌ನ ವಿಕೆಟ್‌ಕೀಪರ್‌ ಬ್ಯಾಟರ್‌ ಫಿನ್‌ ಅಲೆನ್‌ ಮತ್ತು ಇಂಗ್ಲೆಂಡ್‌ನ ಆಲ್‌ರೌಂಡರ್ ಡೇವಿಡ್‌ ವಿಲಿ ಅವರನ್ನೂ ಉಳಿಸಿಕೊಂಡಿದೆ.

ಭಾರತದ ಆಟಗಾರರಾದ ದಿನೇಶ್‌ ಕಾರ್ತಿಕ್‌, ಮೊಹಮ್ಮದ್‌ ಸಿರಾಜ್‌ ಮತ್ತು ಹರ್ಷಲ್‌ ಪಟೇಲ್‌ ಅವರನ್ನು ಉಳಿಸಿಕೊಳ್ಳಲು ತೀರ್ಮಾನಿಸಿದೆ. ಕರ್ನಾಟಕದ ಇಬ್ಬರು ಆಟಗಾರರಾದ ಲವನೀತ್ ಸಿಸೋಡಿಯಾ ಮತ್ತು ಅನೀಶ್ವರ್‌ ಗೌತಮ್‌ ಸೇರಿದಂತೆ ಐವರು ಆಟಗಾರರನ್ನು ಆರ್‌ಸಿಬಿ ಕೈಬಿಟ್ಟಿದೆ.

ಡಿ.23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮಿನಿ ಹರಾಜಿಗೆ ಮುನ್ನ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ನೀಡಲು ಮಂಗಳವಾರ ಕೊನೆಯ ದಿನವಾಗಿತ್ತು. ಮಿನಿ ಹರಾಜಿನಲ್ಲಿ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಲು ಆರ್‌ಸಿಬಿ ಬಳಿ ಈಗ ₹ 8.75 ಕೋಟಿ ಉಳಿದುಕೊಂಡಿದೆ.

ಬ್ರಾವೊ ಕೈಬಿಟ್ಟ ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಡ್ವೇನ್‌ ಬ್ರಾವೊ ಅವರನ್ನು ಕೈಬಿಟ್ಟಿದೆ. ಇದರೊಂದಿಗೆ ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ತಂಡದ ಜತೆಗೆ ಹೊಂದಿದ್ದ 11 ವರ್ಷಗಳ ನಂಟು ಕೊನೆಗೊಂಡಿದೆ. ರಾಬಿನ್‌ ಉತ್ತಪ್ಪ ಮತ್ತು ಇಂಗ್ಲೆಂಡ್‌ನ ಕ್ರಿಸ್‌ ಜೋರ್ಡನ್‌ ಅವರನ್ನೂ ತಂಡ ಹರಾಜಿಗೆ ಬಿಟ್ಟುಕೊಟ್ಟಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಮತ್ತು ನಿಕೊಲಸ್‌ ಪೂರನ್‌ ಒಳಗೊಂಡಂತೆ 12 ಆಟಗಾರರನ್ನು ಕೈಬಿಡಲು ತೀರ್ಮಾನಿಸಿದೆ. ಈ ತಂಡ ಅತಿಹೆಚ್ಚು ಅಂದರೆ ₹ 42.25 ಕೋಟಿ ಮೊತ್ತದೊಂದಿಗೆ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.

ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸ್‌, ಕಳೆದ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ್ದ ಕರ್ನಾಟಕದ ಆರಂಭಿಕ ಬ್ಯಾಟರ್‌ ಮಯಂಕ್‌ ಅಗರವಾಲ್‌ ಅವರನ್ನು ಕೈಬಿಟ್ಟಿದೆ. ಪಂಜಾಬ್‌ ಕಿಂಗ್ಸ್‌ ₹32.2 ಕೋಟಿ ಮತ್ತು ಲಖನೌ ಸೂಪರ್‌ ಜೈಂಟ್ಸ್‌ ಹರಾಜಿನಲ್ಲಿ ₹ 23.35 ಕೋಟಿ ಖರ್ಚು ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT