ಬೆಂಗಳೂರು: ಸಚಿನ್ ಧಾಸ್ ಅವರ ಭರ್ಜರಿ ಶತಕ ಮತ್ತು ನಿಖಿಲ್ ನಾಯ್ಕ್ ಅವರ ಅಜೇಯ ಅರ್ಧಶತಕದ ಬಲದಿಂದ ಮಹಾರಾಷ್ಟ್ರ ತಂಡವು ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನ ಮೊದಲ ದಿನವಾದ ಗುರುವಾರ ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್ ವಿರುದ್ಧ 89 ಓವರ್‌ಗಳಲ್ಲಿ 6 ವಿಕೆಟ್‌ಗೆ 320 ರನ್ ಕಲೆಹಾಕಿದೆ.
ಇಲ್ಲಿನ ಆಲೂರು (1) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸಚಿನ್ ಸೊಗಸಾದ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಅವರು 170 ಎಸೆತಗಳಲ್ಲಿ 102 ರನ್ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ನಿಖಿಲ್ 106 ಎಸೆತಗಳಲ್ಲಿ ಔಟಾಗದೇ 64 ರನ್ ಗಳಿಸಿದ್ದಾರೆ. ಮುರ್ತಾಜಾ ಟ್ರಂಕ್ವಾಲಾ 48, ಅಂಕಿತ್ ಬವಾನೆ 42 ಅವರೂ ಉಪಯುಕ್ತ ಕಾಣಿಕೆ ನೀಡಿದರು. ಕರ್ನಾಟಕದ ಅಭಿಲಾಷ್ ಮತ್ತು ಶಿಖರ್ ಶೆಟ್ಟಿ ತಲಾ ಎರಡು ವಿಕೆಟ್ ಪಡೆದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಹರ್ಷ ಗಾವ್ಲಿ (ಔಟಾಗದೇ 121) ಅವರ ಶತಕದ ನೆರವಿನಿಂದ ಮಧ್ಯಪ್ರದೇಶ ತಂಡವು 90 ಓವರ್‌ಗಳಲ್ಲಿ 5 ವಿಕೆಟ್‌ಗೆ 259 ರನ್ ಗಳಿಸಿದೆ. ಬರೋಡಾ ಕ್ರಿಕೆಟ್ ಸಂಸ್ಥೆಯ ಅತೀತ್ ಸೇಠ್ ಎರಡು ವಿಕೆಟ್ ಪಡೆದು ಮಿಂಚಿದರು.