ಲಂಡನ್ : ಭಾರತದ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಮೆಟ್ರೊ ಬ್ಯಾಂಕ್ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 14 ರನ್ನಿಗೆ 5 ವಿಕೆಟ್ ಪಡೆದು ನಾರ್ತಾಂಪ್ಟನ್‌ಶೈರ್ ಸ್ಟೀಲ್‌ಬ್ಯಾಕ್ಸ್ ತಂಡಕ್ಕೆ ತಮ್ಮ ಪದಾರ್ಪಣೆಯನ್ನು ಅಮೋಘವಾಗಿ ಆಚರಿಸಿದರು. ಈ ತಂಡ ಬುಧವಾರ ಕೆಂಟ್ ಸ್ಪಿಟ್‌ಫೈರ್ಸ್ ತಂಡದ ಮೇಲೆ 9 ವಿಕೆಟ್‌ಗಳ ಸುಲಭ ಜಯಪಡೆಯಲು ಅವರ ಬೌಲಿಂಗ್ ನೆರವಾಯಿತು.
34 ವರ್ಷ ವಯಸ್ಸಿನ ಚಾಹಲ್ ಅವರು ಪದಾರ್ಪಣೆ ವಿಷಯವನ್ನು ನಾರ್ತಾಂಪ್ಟ್ಸ್ ತಂಡ ಒಂದು ಗಂಟೆ ಮೊದಲಷ್ಟೇ ಪ್ರಕಟಿಸಿತು.
ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಚಾಹಲ್, 10 ಓವರುಗಳ ಬಿಗಿ ದಾಳಿಯಲ್ಲಿ 14 ರನ್‌ಅಷ್ಟೇ ಕೊಟ್ಟು ಅರ್ಧದಷ್ಟು ವಿಕೆಟ್‌ಗಳನ್ನು ಪಡೆದರು. ಕೆಂಟ್ 35.1 ಓವರುಗಳಲ್ಲಿ 82 ರನ್‌ಗಳಿಗೆ ಉರುಳಿತು. ಚಾಹಲ್ ಕಳೆದ ವರ್ಷ ಕೆಂಟ್ ತಂಡಕ್ಕೆ ಆಡಿದ್ದರೆನ್ನುವುದು ವಿಶೇಷ.
ಈ ಮೊತ್ತದ ಬೆನ್ನಟ್ಟಿದ ನಾರ್ತಾಂಪ್ಟನ್ ಶೈರ್ 14 ಓವರುಗಳಲ್ಲಿ 1 ವಿಕೆಟ್‌ಗೆ 86 ರನ್ ಗಳಿಸಿತು.
ಈ ಟೂರ್ನಿಯಲ್ಲಿ ಇದು ನಾರ್ತಾಂಪ್ಟ್ಸ್ ತಂಡಕ್ಕೆ ಕೊನೆಯ ಪಂದ್ಯವಾಗಿದ್ದು, ಇದು ಮೊದಲ ಗೆಲುವು ಎನಿಸಿತು. ಈ ಹಿಂದಿನ ಆರು ಪಂದ್ಯಗಳಲ್ಲಿ ಅದು ಸೋಲನುಭವಿಸಿದ್ದು, 9 ತಂಡಗಳ ‘ಎ’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆಯಿತು. ಕ್ವಾರ್ಟರ್‌ಫೈನಲ್ ಅವಕಾಶವೂ ಕೈತಪ್ಪಿತು.
ಚಾಹಲ್ ಅವರು ಈ ವನ್–ಡೇ ಕಪ್ ಟೂರ್ನಿಯ ನಂತರ, ಕೌಂಟಿ ಚಾಂಪಿಯನ್‌ಷಿಪ್ ಎರಡನೇ ಡಿವಿಷನ್‌ನಲ್ಲೂ ನಾರ್ತಾಂಪ್ಟ್ಸ್ ಪರ ಆಡಲಿದ್ದಾರೆ.