ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ದಾಖಲೆಯ ಬೌಲಿಂಗ್: ದೀಪಕ್ ಚಾಹರ್‌ಗೆ ರ‍್ಯಾಂಕಿಂಗ್‌ನಲ್ಲಿ ಭಾರಿ ಬಡ್ತಿ

Last Updated 11 ನವೆಂಬರ್ 2019, 19:41 IST
ಅಕ್ಷರ ಗಾತ್ರ

ದುಬೈ: ಬಾಂಗ್ಲಾದೇಶ ವಿರುದ್ಧದ 3ನೇ ಮತ್ತು ಅಂತಿಮ ಟ್ವೆಂಟಿ–20 ಪಂದ್ಯದಲ್ಲಿ ವಿಶ್ವ ದಾಖಲೆಯ ಬೌಲಿಂಗ್ ಪ್ರದರ್ಶನ ನೀಡಿದ ಮಧ್ಯಮ ವೇಗಿ ದೀಪಕ್ ಚಾಹರ್ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರಿ ಬಡ್ತಿ ಪಡೆದಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ 88 ಸ್ಥಾನಗಳ ಏರಿಕೆ ಕಂಡಿರುವ ಅವರು ಈಗ 42ನೇ ರ‍್ಯಾಂಕ್ ಹೊಂದಿದ್ದಾರೆ.

ಭಾನುವಾರ ನಾಗಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಚಾಹರ್ 3.2 ಓವರ್‌ಗಳಲ್ಲಿ 7 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಗರಿಷ್ಠ ಸಾಧನೆಯಾಗಿದೆ. ಚುಟುಕು ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್‌ ಎಂಬ ದಾಖಲೆಯನ್ನೂ ಅವರು ತಮ್ಮದಾಗಿಸಿಕೊಂಡರು. ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ 30 ರನ್‌ಗಳ ಜಯ ಸಾಧಿಸಿ 2–1ರಲ್ಲಿ ಸರಣಿ ಗೆದ್ದುಕೊಂಡಿತ್ತು.

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಭಾರತದ ಆಟಗಾರರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಅವರದು 7ನೇ ಸ್ಥಾನ. ಭಾನುವಾರ ಅರ್ಧಶತಕ ಗಳಿಸಿದ ಕೆ.ಎಲ್‌.ರಾಹುಲ್ ಒಂದು ಸ್ಥಾನದ ಏರಿಕೆ ಕಂಡಿದ್ದು 8ನೇ ಸ್ಥಾನದಲ್ಲಿದ್ದಾರೆ.

ಅಫ್ಗಾನಿಸ್ತಾನದ ಮೊಹಮ್ಮದ್ ನಬಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿ ಅಗ್ರ ಸ್ಥಾನಕ್ಕೇರಿದ್ದಾರೆ. 11 ಸ್ಥಾನಗಳ ಏರಿಕೆ ಕಂಡಿರುವ ಒಮನ್‌ನ ಜೀಶನ್‌ ಮಕ್ಸೂದ್ 6ನೇ ಸ್ಥಾನಕ್ಕೇರಿದ್ದಾರೆ. ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ 270 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನದಲ್ಲೇ ಉಳಿದಿದ್ದು ಕೇವಲ ಒಂದು ಪಾಯಿಂಟ್ ಹಿಂದೆ ಉಳಿದಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT