ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2020: ಆರ್‌ಸಿಬಿ ಆಟಕ್ಕೆ ದಂಗಾದ ಕೋಲ್ಕತ್ತ

ಮೊದಲ ವಿಕೆಟ್‌ಗೆ 67 ರನ್‌ ಸೇರಿಸಿದ ಫಿಂಚ್‌–ದೇವದತ್ತ; ಎಡಿಬಿ–ಕೊಹ್ಲಿ ಶತಕದ ಜೊತೆಯಾಟ
Last Updated 13 ಅಕ್ಟೋಬರ್ 2020, 1:03 IST
ಅಕ್ಷರ ಗಾತ್ರ
ADVERTISEMENT
""

ಶಾರ್ಜಾ: ಸತತ ಎರಡು ಪಂದ್ಯಗಳಲ್ಲಿ ‘ಮ್ಯಾಜಿಕ್’ ಮಾಡಿ ಹ್ಯಾಟ್ರಿಕ್ ಜಯದ ಕನಸು ಹೊತ್ತಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೋಮವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಕ್ಕೆ ದಂಗಾಯಿತು. ಅಬ್ಬರದ ಬ್ಯಾಟಿಂಗ್ ನಂತರ ಮೊನಚಾದ ಬೌಲಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಕೋಲ್ಕತ್ತ ತಂಡವನ್ನು 82 ರನ್‌ಗಳಿಂದ ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

195 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೋಲ್ಕತ್ತದ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಕ್ರಿಸ್ ಮಾರಿಸ್ ಅವರ ವೇಗ ಹಾಗೂ ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ದಾಳಿಗೆ ಕಂಗಾಲಾದರು. ತಂಡ ಒಂಬತ್ತು ವಿಕೆಟ್ ಕಳೆದುಕೊಂಡು 112 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಆರಂಭಿಕ ಆಟಗಾರ ಶುಭಮನ್ ಗಿಲ್ (34; 25 ಎಸೆತ, 3 ಬೌಂಡರಿ, 1 ಸಿಕ್ಸರ್) ಅವರೊಬ್ಬರೇ ಸ್ವಲ್ಪ ಹೋರಾಟ ತೋರಿದರು. ಗಿಲ್ ಜೊತೆ ಆ್ಯಂಡ್ರೆ ರಸೆಲ್ ಮತ್ತು ರಾಹುಲ್ ತ್ರಿಪಾಠಿ ಮಾತ್ರ ಎರಡಂಕಿ ಮೊತ್ತ ದಾಟಿದರು. ಆರ್‌ಸಿಬಿ ಪರ ಬೌಲಿಂಗ್ ಮಾಡಿದ ಎಲ್ಲ ಆರು ಬೌಲರ್‌ಗಳು ಕೂಡ ವಿಕೆಟ್ ಗಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳ ಎದುರುಕಡಿಮೆ ಮೊತ್ತ ಗಳಿಸಿದರೂ ಕ್ರಮವಾಗಿ 10 ಮತ್ತು ಎರಡು ರನ್‌ಗಳಿಂದ ಜಯ ಸಾಧಿಸಿದ್ದ ಕೋಲ್ಕತ್ತ ಇಲ್ಲಿ ಆತ್ಮವಿಶ್ವಾಸದಿಂದಲೇ ಕಣಕ್ಕೆ ಇಳಿದಿತ್ತು. ಆದರೆ ಅದರ ಆಸೆಗೆ ಆರ್‌ಸಿಬಿಯ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಣ್ಣೀರು ಸುರಿದರು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ತಂಡದಆರಂಭಿಕ ಜೋಡಿ ಆ್ಯರನ್ ಫಿಂಚ್‌ ಮತ್ತು ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ರನ್‌ಗಳ ಮಹಲು ಕಟ್ಟಿದರು.

ಫಿಂಚ್ (47; 37 ಎ, 4 ಬೌಂ, 1 ಸಿ‌) ಮತ್ತು ಪಡಿಕ್ಕಲ್ (32; 23 ಎ, 4 ಬೌಂ, 1 ಸಿ) ಮೊದಲ ವಿಕೆಟ್‌ಗೆ 67 ರನ್ ಸೇರಿಸಿದರು. ನಂತರ ಕೊಹ್ಲಿ (ಔಟಾಗದೆ 33; 28ಎ 1 ಬೌಂ) ಮತ್ತು ಡಿವಿಲಿಯರ್ಸ್ (ಔಟಾಗದೆ 73; 33 ಎ, 5 ಬೌಂ, 6 ಸಿ) ಶತಕದ ಜೊತೆಯಾಟ ಆಡಿದರು. ಹೀಗಾಗಿ ತಂಡ 20 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 194 ರನ್ ಪೇರಿಸಿತು.

ನಿರಾಯಾಸವಾಗಿ ಬ್ಯಾಟ್ ಬೀಸಿದ ಫಿಂಚ್ ಮತ್ತು ದೇವದತ್ತ 7.4 ಓವರ್ ವರೆಗೆ ಕ್ರೀಸ್‌ನಲ್ಲಿದ್ದು ಸೊಗಸಾದ ಇನಿಂಗ್ಸ್ ಕಟ್ಟಿದರು. 32 ರನ್ ಗಳಿಸಿದ್ದಾಗ ದೇವದತ್ತ ಅವರು ರಸೆಲ್ ಎಸೆತದಲ್ಲಿ ಬೌಲ್ಡ್ ಆದರು.ಕೊಹ್ಲಿ ಜೊತೆ ಫಿಂಚ್ 27 ರನ್‌ಗಳ ಜೊತೆಯಾಟ ಆಡಿದರು. ಈ ಸಂದರ್ಭದಲ್ಲಿ ಫಿಂಚ್ ಅವರನ್ನು ಕರ್ನಾಟಕದ ಪ್ರಸಿದ್ಧ ಕೃಷ್ಣ ಬೌಲ್ಡ್ ಮಾಡಿದರು.

13ನೇ ಓವರ್‌ನಲ್ಲಿ ನಾಯಕನ ಜೊತೆಗೂಡಿದ ಡಿವಿಲಿಯರ್ಸ್ ಅಬ್ಬರಿಸಿದರು. ಅಂಗಣದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ಅವರು ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ರಂಜಿಸಿದರು. 46 ಎಸೆತಗಳಲ್ಲಿ ಇವರಿಬ್ಬರು 101 ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು 200ರ ಸಮೀಪ ತಲುಪಿಸಿದರು. ಈ ಆವೃತ್ತಿಯ ಮೂರನೇ ಅರ್ಧಶತಕ ಸಿಡಿಸಿದ ಡಿವಿಲಿಯರ್ಸ್ ಕೊನೆಯ 30 ಎಸೆತಗಳಲ್ಲಿ ಕೊಹ್ಲಿ ಜೊತೆ 83 ರನ್‌ ಕಲೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT