ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಆರಂಭವಷ್ಟೇ, ಸಾಧಿಸುವುದು ಬಹಳಷ್ಟಿದೆ: 404 ರನ್‌ ದಾಖಲೆ ಬರೆದ ಪ್ರಖರ್ ಮನದಾಳ

Published 19 ಜನವರಿ 2024, 21:16 IST
Last Updated 19 ಜನವರಿ 2024, 21:16 IST
ಅಕ್ಷರ ಗಾತ್ರ

ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಎಂಟು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕರ್ನಾಟಕ ತಂಡವು ಟ್ರೋಫಿ ಗೆದ್ದಿತು. ಶಿವಮೊಗ್ಗದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಜೇಯ 404 ರನ್ ಗಳಿಸಿದ ಪ್ರಖರ್ ಚತುರ್ವೇದಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಹಾದಿಯಲ್ಲಿ ಅವರು 25 ವರ್ಷಗಳ ಹಿಂದೆ ಯುವರಾಜ್ ಸಿಂಗ್ ಮಾಡಿದ್ದ ದಾಖಲೆಯನ್ನೂ ಮುರಿದರು. ಅಲ್ಲದೇ ಈ ಟೂರ್ನಿಯ ಇತಿಹಾಸದಲ್ಲಿ ನಾಲ್ಕುನೂರಕ್ಕಿಂತಲೂ ಹೆಚ್ಚು ರನ್

ಗಳಿಸಿದ ಎರಡನೇ ಆಟಗಾರನಾದರು

‘19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಲಭಿಸಲಿಲ್ಲ. ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ನನ್ನ ಸಾಧನೆ ಕಡಿಮೆ ಇತ್ತು. ಆದರೆ ಈ ವಿಶ್ವಕಪ್ ಟೂರ್ನಿಯಲ್ಲಿ ಆಡದಿದ್ದರೂ ದಿಗ್ಗಜರಾಗಿರುವ ಆಟಗಾರರು ಹಲವರಿದ್ದಾರೆ. ಮಹೇಂದ್ರಸಿಂಗ್ ಧೋನಿ ಅವರು ಉತ್ತಮ ಉದಾಹರಣೆ. ಆಗಿದ್ದು ಆಗಿಹೋಯಿತು. ಮುಂದಿನ ಗುರಿ ಸಾಧಿಸಬೇಕು ಎಂದು ನಿರ್ಧರಿಸಿದೆ. ಮತ್ತಷ್ಟು ಕಠಿಣ ಪರಿಶ್ರಮಪಟ್ಟೆ. ಈ ಸಾಧನೆ ಸಾಧ್ಯವಾಯಿತು’–

ಶಿವಮೊಗ್ಗದಲ್ಲಿ ಈಚೆಗೆ ನಡೆದ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮುಂಬೈ ಎದುರು ಅಜೇಯ 404 ರನ್‌ ಗಳಿಸಿ ದಾಖಲೆ ಮಾಡಿದ ಕರ್ನಾಟಕ ತಂಡದ ಪ್ರಖರ್ ಚತುರ್ವೇದಿ ನುಡಿಗಳಿವು. ಈ ಟೂರ್ನಿಯ ಎಂಟು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಟ್ರೋಫಿ ಜಯಿಸಲು ಅವರ ಆಟವೂ ಪ್ರಮುಖವಾಗಿತ್ತು.

ಮೂಲತಃ ಮಧ್ಯಪ್ರದೇಶದವರಾದ ಸಂಜಯಕುಮಾರ್ ಚತುರ್ವೇದಿ ಹಾಗೂ ರೂಪಾ ದಂಪತಿಯ ಮಗ ಪ್ರಖರ್. ಸಂಜಯಕುಮಾರ್ ಅವರು ಸಾಫ್ಟ್‌ವೇರ್ ಉದ್ಯಮಿ ಹಾಗೂ ರೂಪಾ ಅವರು ಡಿ.ಆರ್‌.ಡಿ.ಒದಲ್ಲಿ ತಾಂತ್ರಿಕ ಅಧಿಕಾರಿಯಾಗಿದ್ದಾರೆ. ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಟ್ಟ ಕುಟುಂಬದಲ್ಲಿ ಕ್ರಿಕೆಟಿಗರು ಇರಲಿಲ್ಲ. ಓದಿನಲ್ಲಿಯೂ ಉತ್ತಮವಾಗಿದ್ದ ಪ್ರಖರ್ ಕ್ರಿಕೆಟಿಗನಾಗುವತ್ತ ಒಲವು ತೋರಿದಾಗ ತಂದೆ, ತಾಯಿ ಪೂರ್ಣ ಬೆಂಬಲ ನೀಡಿದರು.

ಪ್ರಖರ್ ಈ ದಾಖಲೆಯ ಹಾದಿಯಲ್ಲಿ ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು 25 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನೂ ಮುರಿದರು. ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದ ಪ್ರಖರ್, ತಮ್ಮ ಇಲ್ಲಿಯವರೆಗಿನ ಪಯಣದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ಶಿವಮೊಗ್ಗದಲ್ಲಿ ಕ್ರೀಸ್‌ಗೆ ಬಂದಾಗಲೇ ನಿಮ್ಮ ಮನಸ್ಸಿನಲ್ಲಿ ದಾಖಲೆ ಮಾಡುವ ಗುರಿ ಇತ್ತಾ?

ಹಾಗೇನೂ ಇಲ್ಲ. ಆದರೆ 100, 200, 300 ರನ್‌ಗಳನ್ನು ಗಳಿಸುತ್ತಾ ಹೋದಂತೆ ಮತ್ತಷ್ಟು ಬ್ಯಾಟಿಂಗ್ ಮಾಡುವ ಛಲ ಮೂಡಿತು. ರನ್‌ಗಳ ಹಸಿವು ಹೆಚ್ಚಿತು. ಕೊನೆ ದಿನದಾಟದ ಊಟದ ವಿರಾಮದ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅವರ ದಾಖಲೆ ಮೀರುವ ಅವಕಾಶ ಇದೆ ಎಂದು ಕೆಲ ಸ್ನೇಹಿತರು ಮಾಹಿತಿ ನೀಡಿದರು. ಮುಂದೆ ನಡೆದಿದ್ದು ಇತಿಹಾಸ.

 ನೀವು ದಾಖಲೆ ಮಾಡಿದ ಪಿಚ್‌ ಹೇಗಿತ್ತು. ಮುಂಬೈ ಬೌಲಿಂಗ್ ದಾಳಿ ದುರ್ಬಲವಾಗಿತ್ತೇ?

ಪಿಚ್‌ ಉತ್ತಮವಾಗಿತ್ತು. ಇನ್ನು ಮುಂಬೈನ ಯಾವುದೇ ತಂಡವಿದ್ದರೂ ಅದು ಬಲಿಷ್ಠವೇ ಆಗಿರುತ್ತದೆ. ಉತ್ತಮ ವೇಗದ ಮತ್ತು ಸ್ಪಿನ್ ಬೌಲರ್‌ಗಳಿದ್ದರು. ಫೀಲ್ಡಿಂಗ್ ನಿಯೋಜನೆಯ ತಂತ್ರಕ್ಕೆ ಅನುಗುಣವಾಗಿ ಶಿಸ್ತಿನ ದಾಳಿ ನಡೆಸಿದರು. ಆದರೆ ಒಮ್ಮೆ ಕ್ರೀಸ್‌ನಲ್ಲಿ ಸೆಟ್ ಆದ ಮೇಲೆ ದೊಡ್ಡ ಮೊತ್ತ ಗಳಿಸಬೇಕು. ಕೇವಲ ಶತಕ, ದ್ವಿಶತಕಕ್ಕೆ ಯಾಕೆ ತೃಪ್ತರಾಗಬೇಕು. ಆಡುತ್ತಲೇ ಸಾಗಬೇಕೆಂಬುದು ನನ್ನ ಅಭಿಪ್ರಾಯ. ಈ ಟೂರ್ನಿಗೂ ಮುಂಚೆ ಇಲ್ಲಿಯೇ ನಡೆದಿದ್ದ ಅಂತರ ವಲಯ ಟೂರ್ನಿಯಲ್ಲಿ ದ್ವಿಶತಕ (224) ಗಳಿಸಿದ್ದೆ.

ನೀವು ಆಡಿದ ಕರ್ನಾಟಕ ತಂಡದ ಕೋಚ್ ಮತ್ತಿತರರ ಬೆಂಬಲ ಯಾವ ರೀತಿ ಇತ್ತು?

ಕೋಚ್ ಕೆ.ಬಿ. ಪವನ್ ಅವರ ಸಲಹೆಗಳು ನನಗೆ ಉಪಯುಕ್ತವಾದವು. ಟೂರ್ನಿಗೂ ಮುನ್ನ ಅವರು ಎರಡು ಸಲಹೆಗಳನ್ನು ಕೊಟ್ಟಿದ್ದರು. ಮೊದಲನೆಯದಾಗಿ; ನಾನು ಇನ್‌ಸ್ವಿಂಗ್ ಎಸೆತಗಳನ್ನು ಫ್ಲಿಕ್ ಮಾಡಲು ಪ್ರಯತ್ನಿಸಿ ಎಲ್‌ಬಿಡಬ್ಲ್ಯು ಆಗುತ್ತಿದ್ದೆ. ಅದನ್ನು ಗಮಿಸಿದ್ದ ಅವರು ಓಪನಿಂಗ್ ಮಾಡುವಾಗ ಫ್ಲಿಕ್ ಬೇಡ. ಆನ್‌ಡ್ರೈವ್ ಆಡಲು ಪ್ರಯತ್ನಿಸು ಎಂದಿದ್ದರು. ಎರಡನೆಯದಾಗಿ; ನಾನು ಮೂಲತಃ ಆಕ್ರಮಣಕಾರಿ ಶೈಲಿಯ ಬ್ಯಾಟರ್. ದೀರ್ಘ ಮಾದರಿಯಲ್ಲಿ ಶಾಂತಚಿತ್ತವಾಗಿ ಆಡುವುದನ್ನು ರೂಢಿಸಿಕೊಳ್ಳಲು ಹೇಳಿದರು. ಈ ಎರಡೂ ಸಲಹೆಗಳು ನನ್ನ ಯಶಸ್ಸಿಗೆ ಕಾರಣವಾದವು. ಇನ್ನು ಇಡೀ ತಂಡ ಮತ್ತು ನೆರವು ಸಿಬ್ಬಂದಿಯ ಬೆಂಬಲ ಬಹಳಷ್ಟಿದೆ. ದೀರ್ಘ ಇನಿಂಗ್ಸ್‌ ಆಡಲು ನೆರವಾದ ಫಿಸಿಯೊಗಳು ಹಾಗೂ ತಂಡಕ್ಕೆ ಅಯ್ಕೆ ಮಾಡಿದ ಸಮಿತಿಗೆ ಆಭಾರಿಯಾಗಿದ್ದೇನೆ.

ತಂಡದ ನಾಯಕನ ಸಹಕಾರ ಹೇಗಿತ್ತು?

ಧೀರಜ್ ಗೌಡ ನಿಜಕ್ಕೂ ಉತ್ತಮ ನಾಯಕ ಮತ್ತು ಅಮೋಘ ಆಟಗಾರ. ನನ್ನನ್ನು ಪ್ರತಿ ಹಂತದಲ್ಲಿಯೂ ಪ್ರೋತ್ಸಾಹಿಸಿದರು. ಅವರು ಬಲಗೈ ಮತ್ತು ಎಡಗೈ ಎರಡರಲ್ಲೂ ಬೌಲಿಂಗ್ ಮಾಡುತ್ತಾರೆ. ಹುಬ್ಬಳ್ಳಿಯಲ್ಲಿ ನಡೆದಿದ್ದ ಈ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮಧ್ಯಪ್ರದೇಶದ ಎದುರು ಧೀರಜ್ ಅಮೋಘ ಶತಕ ಹೊಡೆದಿದ್ದರು. ಆ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಸವಾಲಿನದ್ದಾಗಿದ್ದರೂ ಅವರು ಈ ಸಾಧನೆ ಮಾಡಿದ್ದರು.

ನಿಮಗೆ ಕ್ರಿಕೆಟ್ ಮೇಲೆ ಪ್ರೀತಿ ಆರಂಭವಾಗಿದ್ದು ಯಾವಾಗ? hero

ಎಂಟೂವರೆ ವರ್ಷದವನಿದ್ದಾಗ ಟಿ.ವಿಯಲ್ಲಿ ನಡೆಯುತ್ತಿದ್ದ ಪಂದ್ಯವೊಂದರಲ್ಲಿ ವೀರೇಂದ್ರ ಸೆಹ್ವಾಗ್ ಅವರ ಬ್ಯಾಟಿಂಗ್ ನೋಡಿ ಮನಸೋತೆ. ಅವರಂತೆ ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತಿದ್ದೆ. ಆಗ ಕೋಚ್ ರಂಜನ್ ಅವರ ಬಳಿ ನನ್ನನ್ನು ಅಪ್ಪ ಸೇರಿಸಿದರು. ಸುಮಾರು ನಾಲ್ಕು ವರ್ಷ ಅವರ ಬಳಿ ತರಬೇತಿ ಪಡೆದೆ. ನಂತರ ನನಗೆ ಉನ್ನತಮಟ್ಟದ ತರಬೇತಿಗಾಗಿ ರಂಜನ್ ಅವರೇ ಪ್ರಕಾಶ್ ಪಡುಕೋಣೆ–ರಾಹುಲ್‌ ದ್ರಾವಿಡ್ ಕ್ರೀಡಾ ಕೇಂದ್ರದಲ್ಲಿರುವ ಸಿಕ್ಸ್‌ ಕ್ರಿಕೆಟ್ ಅಕಾಡೆಮಿಗೆ ಕರೆದುಕೊಂಡು ಹೋದರು. ಅಲ್ಲಿ ಕೋಚ್ ಕಾರ್ತಿಕ್ ಜೆಶ್ವಂತ್ ಅವರ ಮಾರ್ಗದರ್ಶನ ಪಡೆಯುತ್ತಿದ್ದೇನೆ.

ನಿಮ್ಮನ್ನು ಪ್ರಭಾವಿಸಿದ ಕ್ರಿಕೆಟಿಗ ಯಾರು?

ನನ್ನನ್ನು ಅಪಾರವಾಗಿ ಪ್ರಭಾವಿಸಿದ ಆಟಗಾರ ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರು. ಆ ಕಾಲದಲ್ಲಿ ತೆಳುವಾದ ಬ್ಯಾಟ್‌ನಿಂದ ಅವರು 150 ಕಿ.ಮೀ ವೇಗದ ಎಸೆತಗಳನ್ನು ಸಲೀಸಾಗಿ ಸಿಕ್ಸರ್‌ಗೆ ಎತ್ತುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಹೆಲ್ಮೆಟ್ ಹಾಕುತ್ತಿರಲಿಲ್ಲ. ಬೌನ್ಸರ್‌ಗಳನ್ನು ಪುಲ್ ಮಾಡುತ್ತಿದ್ದರು. ಹೆಲ್ಮೆಟ್ ಇಲ್ಲದೇ ಆಡಲು ಅಪಾರ ಏಕಾಗ್ರತೆ ಮತ್ತು ಎದೆಗಾರಿಕೆ ಇರಬೇಕು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಆಟವೂ ನನಗಿಷ್ಟ.

 ಮುಂದಿನ ಗುರಿ ಏನು?

ಈ ದಾಖಲೆಯು ನನ್ನ ಮುಂದೆ ಇರುವ ಹಲವು ಗುರಿಗಳನ್ನು ಸಾಧಿಸಲು ಪ್ರೇರಣೆ. ಎಲ್ಲರಿಗೂ ಇರುವಂತೆ ನನಗೂ ಭಾರತ ತಂಡದಲ್ಲಿ ಆಡುವ ಗುರಿ ಇದೆ. ಅಲ್ಲದೇ ವೈಟ್‌ ಬಾಲ್ ಕ್ರಿಕೆಟ್ ಅಭ್ಯಾಸದತ್ತಲೂ ಈಗ ಗಮನ ಹರಿಸುತ್ತೇನೆ.

ಓದು ಮತ್ತು ಕ್ರಿಕೆಟ್ ನಡುವೆ ಸಮತೋಲನ ಹೇಗೆ ಸಾಧಿಸುತ್ತೀರಿ?

ನನ್ನ ಇಡೀ ದಿನದ ಬಹುತೇಕ ಸಮಯ ಕ್ರಿಕೆಟ್‌ಗೇ ಮೀಸಲು. ರಾತ್ರಿ ಸಿಗುವ ಒಂದೆರಡು ಗಂಟೆಗಳಲ್ಲಿ ಓದುತ್ತೇನೆ. ಈ ವರ್ಷ ಬಿ.ಎ. ಅರ್ಥಶಾಸ್ತ್ರ ಕೋರ್ಸ್‌ಗೆ ಸೇರಿಕೊಂಡಿದ್ದೇನೆ. ಮನೆಯಲ್ಲಿ ಅಪ್ಪ, ಅಮ್ಮ ಮತ್ತು ತಂಗಿ ಬಹಳಷ್ಟು ಪ್ರೋತ್ಸಾಹ ನೀಡುತ್ತಾರೆ. ನನಗಾಗಿ ವಿಶೇಷ ಆಹಾರ ಸಿದ್ಧಪಡಿಸಲು ಅಮ್ಮ ಬಹಳಷ್ಟು ಶ್ರಮಪಡುತ್ತಾರೆ.

ಯುವರಾಜ್ ಸಿಂಗ್‌ ಭೇಟಿಯ ಪುಳಕ

ಗುರುವಾರ ಬೆಂಗಳೂರಿಗೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ತಮ್ಮ ಹಳೆಯ ದಾಖಲೆ ಮುರಿದಿದ್ದ ಪ್ರಖರ್ ಅವರನ್ನು ಭೇಟಿಯಾದರು.

‘ಮೂರು ದಿನಗಳ ಹಿಂದಷ್ಟೇ ಅವರ ದಾಖಲೆ ಮುರಿದಿದ್ದೆ. ಅಷ್ಟರಲ್ಲಿಯೇ ಭೇಟಿಯಾಗುವ ಅವಕಾಶ ಸಿಕ್ಕಿತು. ಅವರು ಕರೆಸಿಕೊಂಡು ಆತ್ಮೀಯವಾಗಿ ಮಾತನಾಡಿದರು’ ಎಂದು ಪ್ರಖರ್ ಸಂತಸ ವ್ಯಕ್ತಪಡಿಸಿದರು.

‘ಯುವಿ ಅವರು ಟಿ20 ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ್ದು ನನ್ನ ಅಚ್ಚುಮೆಚ್ಚಿನ ಇನಿಂಗ್ಸ್. ಅವರನ್ನೇ ಭೇಟಿಯಾಗಿದ್ದು ಸಂತಸ ನೀಡಿತು’ ಎಂದರು.

‘ಆಗ 350 ರನ್ ಗಳಿಸಲೇ ನಾನು ಸುಸ್ತಾಗಿದ್ದೆ. ನೀನು ಅದ್ಹೇಗೆ 400 ರನ್ ದಾಟಿದೆ ಎಂದೂ ಯುವಿ ಕೇಳಿದರು. ಇಷ್ಟಕ್ಕೆ ನಿಲ್ಲಬೇಡ. ನಿರಂತರವಾಗಿ ಉತ್ತಮ ಇನಿಂಗ್ಸ್‌ಗಳನ್ನು ಆಡು ಎಂದೂ ಹಾರೈಸಿದರು’ ಎಂದು ಪ್ರಖರ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT