ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಿರುದ್ಧ ಸಮರ: ನೆರವಿನ ಹಸ್ತ ಚಾಚಿದ ಕ್ರೀಡಾಪಟುಗಳು

ಸಂಕಷ್ಟಕ್ಕೆ ಮಿಡಿದ ಕೊಹ್ಲಿ, ಮೇರಿ, ಮನು ಭಾಕರ್‌, ಸತ್ಯನ್‌
Last Updated 30 ಮಾರ್ಚ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ (ಪಿಟಿಐ): ಕೋವಿಡ್‌ ಮಹಾಮಾರಿಯನ್ನು ಹತ್ತಿಕ್ಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಹೋರಾಟಕ್ಕೆ ಕ್ರೀಡಾಪಟುಗಳೂ ಬೆಂಬಲ ಸೂಚಿಸಿದ್ದಾರೆ.

ಕೋವಿಡ್‌ ಪೀಡಿತರ ಸಂಕಷ್ಟಕ್ಕೆ ಮಿಡಿದಿರುವ ಹಲವರು ಈಗಾಗಲೇ ತಮ್ಮ ಕೈಲಾದಷ್ಟು ದೇಣಿಗೆ ನೀಡಿದ್ದಾರೆ. ಈ ಪಟ್ಟಿಗೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ವಿಶ್ವ ಚಾಂಪಿಯನ್‌ ಬಾಕ್ಸರ್‌ ಎಂ.ಸಿ.ಮೇರಿ ಕೋಮ್‌ ಹಾಗೂ ಯುವ ಶೂಟರ್‌ ಮನು ಭಾಕರ್‌ ಸೇರ್ಪಡೆಯಾಗಿದ್ದಾರೆ.

ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಕುರಿತ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಲಕ್ಷಾಂತರ ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದ ವಿರಾಟ್‌, ಈಗ ನೆರವಿನ ಹಸ್ತ ಚಾಚಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದೇಣಿಗೆ ನೀಡುತ್ತಿರುವ ವಿಷಯವನ್ನು ಅವರು ಸೋಮವಾರ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ.

‘ದೇಶದ ಜನತೆ ಎದುರಿಸುತ್ತಿರುವ ಸಂಕಷ್ಟ ಎಂತಹದ್ದು ಎಂಬುದರ ಅರಿವಿದೆ. ಜವಾಬ್ದಾರಿಯುತ ‍ನಾಗರಿಕರಾದ ನಾವೆಲ್ಲಾ ಜನರ ನೋವಿಗೆ ಮಿಡಿಯಬೇಕಿದೆ. ಹೀಗಾಗಿ ನಾನು ಹಾಗೂ ನನ್ನ ಪತ್ನಿ ಅನುಷ್ಕಾ ಶರ್ಮಾ, ಪ್ರಧಾನ ಮಂತ್ರಿಗಳ ‘ಕೇರ್ಸ್‌’ ನಿಧಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ಮೂಲಕ ಜನರ ಕಣ್ಣೀರು ಒರೆಸುವ ಸಣ್ಣ ಪ್ರಯತ್ನ ಮಾಡಿದ್ದೇವೆ’ ಎಂದು ವಿರಾಟ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ದೇಣಿಗೆಯ ಮೊತ್ತವನ್ನು ಕೊಹ್ಲಿ ದಂಪತಿ ಬಹಿರಂಗಪಡಿಸಿಲ್ಲ.

ಮೇರಿ ಕೋಮ್‌

ತಿಂಗಳ ವೇತನ ನೀಡಿದ ಮೇರಿ: ರಾಜ್ಯ ಸಭೆ ಸದಸ್ಯೆಯಾಗಿರುವ ಮೇರಿ, ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

‘ರಾಜ್ಯ ಸಭೆ ಸದಸ್ಯೆಯಾಗಿರುವ ನಾನು, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ₹ 1 ಲಕ್ಷ ನೀಡಲು ತೀರ್ಮಾನಿಸಿದ್ದೇನೆ’ ಎಂದು ಹೇಳಿದ್ದಾರೆ.

ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಜಯಿಸಿರುವ ಮೇರಿ, 2016ರಲ್ಲಿ ರಾಜ್ಯಸಭೆ ಸದಸ್ಯೆಯಾಗಿ ನಾಮನಿರ್ದೇಶನ ಗೊಂಡಿದ್ದರು.

ಮನು ಭಾಕರ್‌

₹ 1 ಲಕ್ಷ ನೀಡಿದ ಮನು: ಯುವ ಶೂಟರ್‌ ಮನು ಭಾಕರ್‌ ಕೂಡ ₹ 1 ಲಕ್ಷ ದೇಣಿಗೆ ಕೊಟ್ಟಿದ್ದಾರೆ.

‘ಕೋವಿಡ್‌ನಿಂದಾಗಿ ಹಲವರು ಸಾವು ಬದುಕಿನ ವಿರುದ್ಧ ಹೋರಾಡುತ್ತಿದ್ದಾರೆ. ಇದಕ್ಕಾಗಿ ಎಲ್ಲರೂ ಕೈಲಾದಷ್ಟು ಸಹಾಯ ಮಾಡಲೇಬೇಕು. ಇದನ್ನು ಗಮದಲ್ಲಿಟ್ಟುಕೊಂಡು ನಾನು ಹರಿಯಾಣ ರಾಜ್ಯದ ಕೊರೊನಾ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಿದ್ದೇನೆ’ ಎಂದು 18 ವರ್ಷ ವಯಸ್ಸಿನ ಮನು, ಟ್ವೀಟ್‌ ಮಾಡಿದ್ದಾರೆ.

ಸಂಕಷ್ಟಕ್ಕೆ ಮಿಡಿದ ಸತ್ಯನ್‌: ಟೇಬಲ್‌ ಟೆನಿಸ್‌ ಆಟಗಾರ ಜ್ಞಾನಶೇಖರನ್ ಸತ್ಯನ್‌ ಅವರೂ ನೆರವಿನ ಹಸ್ತ ಚಾಚಿದ್ದಾರೆ.

ಚೆನ್ನೈನ ಈ ಆಟಗಾರ ಒಟ್ಟು ₹ 1.25 ಲಕ್ಷ ದೇಣಿಗೆ ನೀಡಲು ಮುಂದಾಗಿದ್ದಾರೆ.

‘ಇದು ಸವಾಲಿನ ಸಮಯ. ನಾವೆಲ್ಲರೂ ನೊಂದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಬೇಕಿದೆ. ನಾನು, ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹1 ಲಕ್ಷ ಹಾಗೂ ಪ್ರಧಾನ ಮಂತ್ರಿ ‘ಕೇರ್ಸ್‌’ ನಿಧಿಗೆ ₹ 25 ಸಾವಿರ ನೀಡಿದ್ದೇನೆ’ ಎಂದು ಸತ್ಯನ್‌ ಅವರು ಸೋಮವಾರ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ನಾನು ಕೈಲಾದಷ್ಟು ಸಹಾಯ ಮಾಡಿದ್ದೇನೆ. ನೀವು ಕೂಡ ಬಡವರು ಹಾಗೂ ನಿರ್ಗತಿಕರಿಗೆ ನೆರವಾಗಿ’ ಎಂದೂ 27 ವರ್ಷ ವಯಸ್ಸಿನ ಆಟಗಾರ ಕರೆ ನೀಡಿದ್ದಾರೆ.

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌, ಸುರೇಶ್‌ ರೈನಾ, ಅಜಿಂಕ್ಯ ರಹಾನೆ, ಲಕ್ಷ್ಮಿ ರತನ್‌ ಶುಕ್ಲಾ, ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು, ಅಥ್ಲೀಟ್‌ ಹಿಮಾ ದಾಸ್‌, ಕುಸ್ತಿಪಟು ಬಜರಂಗ್‌ ಪುನಿಯಾ ಅವರೂ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT