ಸೋಮವಾರ, ಜುಲೈ 4, 2022
21 °C

ಲಾಕ್‌ಡೌನ್‌: ವಿರಾಟ್ ಹೇರ್‌ಕಟಿಂಗ್‌, ಮಯಂಕ್ ಮಶ್ರೂಮ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ ಕಾಲದಲ್ಲಿ ಕ್ರಿಕೆಟಿಗರಿಗೆ ಮನೆಯೇ ಸರ್ವಸ್ವವಾಗಿದೆ. ಪ್ರವಾಸ, ಜನಜಂಗುಳಿ, ಮೈದಾನಗಳಿಂದ ದೂರವಾಗಿ ಕಾಲ ಕಳೆಯಲು ಹಲವಾರು ದಾರಿ ಹುಡುಕುತ್ತಿದ್ದಾರೆ. ಅಪರೂಪದ ಕೆಲಸ ಮಾಡಿದಾಗ ಅದರ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುತ್ತಾರೆ. ಸಾವಿರಾರು ಅಭಿಮಾನಿಗಳು ತಮ್ಮ ತಾರೆಗಳ ಚಟುವಟಿಕೆ ನೋಡಿ ಆನಂದಿಸುತ್ತಿದ್ದಾರೆ.

ಶನಿವಾರ ಈ ಸಾಲಿನಲ್ಲಿ ಹೆಚ್ಚು ಗಮನ ಸೆಳೆದಿದ್ದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೇರ್‌ ಕಟಿಂಗ್ ಮಾಡಿದ ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ವಿಡಿಯೊ. ತಮ್ಮ ಗಡ್ಡ ಮತ್ತು ತಲೆಗೂದಲ ವಿನ್ಯಾಸಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸುವ ಕೊಹ್ಲಿ ಮುಂಬೈನ ಪ್ರತಿಷ್ಠಿತ ಸಲೂನ್‌ಗಳಲ್ಲಿ ಹೇರ್‌ ಕಟ್ ಮಾಡಿಸಿಕೊಳ್ಳುವುದು ವಾಡಿಕೆ. ಆದರೆ, ಇದೀಗ ಮನೆಯಲ್ಲಿ ಬಂಧಿಯಾಗಿರುವ ಅವರಿಗೆ ಹೋರ ಹೋಗುವ ಅವಕಾಶವೇ ಇಲ್ಲ. ಆದ್ದರಿಂದ ಅಡುಗೆಮನೆಯಲ್ಲಿ ಬಳಸಲು ಇಟ್ಟಿದ್ದ ಕತ್ತರಿ ಎತ್ತಿಕೊಂಡ  ಅನುಷ್ಕಾ ತಮ್ಮ ‘ಪ್ರತಿಭೆ’ ತೋರಿಸಿದರು. ಅದನ್ನು ವಿರಾಟ್ ಕೂಡ ಮೆಚ್ಚಿಕೊಂಡಿದ್ದಾರೆ. ‌

ಅತ್ತ ಕನ್ನಡಿಗ ಮಯಂಕ್ ಅಗರವಾಲ್ ಈಗ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ತಮ್ಮ ನೆಚ್ಚಿನ ಪದಾರ್ಥಗಳನ್ನು ಸವಿಯುವತ್ತ ಚಿತ್ತ ನೆಟ್ಟಿದ್ದಾರೆ. ಪಾಲಕ್ ಮಶ್ರೂಮ್ ಕಿನೋದ ಖಾದ್ಯದೊಂದಿಗಿನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಅದಲ್ಲದೇ ತಮ್ಮ ಕುಟುಂಬದ ಎಲ್ಲರೊಂದಿಗೂ ಕುಳಿತು ಕಾರ್ಡ್‌ಗೇಮ್ ಆಡುವ ಮತ್ತು ತೂಗುಯ್ಯಾಲೆಯಲ್ಲಿ ಪುಸ್ತಕ ಓದುತ್ತ ಮಲಗಿರುವ ಚಿತ್ರಗಳನ್ನು ಹಾಕಿದ್ದಾರೆ.

ಇನ್ನೊಂದೆಡೆ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ತಮ್ಮ ತಂದೆಯೊಂದಿಗೆ ಮಾಡಿರುವ ಲಘುಹಾಸ್ಯದ ನೃತ್ಯರೂಪಕದ ವಿಡಿಯೋದೊಂದಿಗೆ ಗಮನ ಸೆಳೆಯುತ್ತಿದ್ದಾರೆ. ಮತ್ತೊಂದು ಕಡೆ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ತಮ್ಮ ಮನೆಯಲ್ಲಿ ಇಂಗ್ಲಿಷ್ ಸಂಗೀತ ಕೇಳುತ್ತ, ನಡು ಕುಣಿಸುತ್ತ ನೆಲ ಒರೆಸುವ ವಿಡಿಯೋ ಮತ್ತು ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ತಮ್ಮ ಮನೆಯ ಕೈತೋಟದ ಸಸಿಗಳಿಗೆ ನೀರುಣಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೆಲ್ಲದರೊಂದಿಗೆ ಎರಡು ಹೊತ್ತು ವ್ಯಾಯಾಮ, ಧ್ಯಾನಗಳನ್ನು ಮಾಡುವುದನ್ನು ಮರೆತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು