ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್ ಡೇ ಟೆಸ್ಟ್ ಅಡಿಲೇಡ್‌ಗೆ ಸ್ಥಳಾಂತರ?

Last Updated 6 ಆಗಸ್ಟ್ 2020, 14:29 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಭಾರತ ತಂಡದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಮೆಲ್ಬರ್ನ್‌ನಿಂದ ಅಡಿಲೇಡ್‌ಗೆ ಸ್ಥಳಾಂತರಿಸುವ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ ನಡೆಸಿದೆ. ವಿಕ್ಟೋರಿಯಾದಲ್ಲಿ ಕೋವಿಡ್ –19 ಪ್ರಕರಣಗಳು ನಿತ್ಯವೂ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲು ಅದು ಮುಂದಾಗಿದೆ.

ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಡಿಸೆಂಬರ್‌ 26ರಿಂದ ನಡೆಯಲಿರುವ ಸಾಂಪ್ರದಾಯಿಕ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲು ಅಡಿಲೇಡ್ ತುದಿಗಾಲಲ್ಲಿ ನಿಂತಿದೆ. ಪಂದ್ಯವನ್ನು ಸ್ಥಳಾಂತರಿಸುವ ಕುರಿತು ಚರ್ಚಿಸುವುಕ್ಕೆಂದೇ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಎರ್ಲ್ ಎಡಿಂಗ್ಸ್ ಮುಂದಿನ ವಾರ ತುರ್ತು ಸಭೆ ಕರೆದಿದ್ದಾರೆ. ಸಭೆಯಲ್ಲಿ ಸರಣಿಯನ್ನು ಸುಸೂತ್ರವಾಗಿ ನಡೆಸುವುದರ ಕುರಿತು ಕೂಡ ಚರ್ಚೆ ನಡೆಯಲಿದೆ. ಟೆಸ್ಟ್ ಸರಣಿಯ ವೇಳಾಪಟ್ಟಿಯ‌ಲ್ಲಿರುವ ಸ್ಥಳಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಈ ಮೊದಲೇ ಹೇಳಿತ್ತು.

ವಿಕ್ಟೋರಿಯಾದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಅಲ್ಲಿನ ರಾಜ್ಯ ಗಡಿ ಭಾಗದಲ್ಲಿ ಪ್ರಯಾಣ ನಿರ್ಬಂಧಗಳನ್ನು ಹೇರಲಾಗಿದೆ. ವೇಳಾಪಟ್ಟಿಯಂತೆಅಲ್ಲಿ ನಿಗದಿಯಾಗಿರುವ ಪಂದ್ಯವನ್ನು ನಡೆಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ ಎಂದು ಅನುಭವಿ ಕ್ರಿಕೆಟಿಗರೊಬ್ಬರು ಹೇಳಿದರು. ವಿಕ್ಟೋರಿಯಾದಲ್ಲಿ ಈ ವರೆಗೆ 13 ಸಾವಿರ ಕೋವಿಡ್ –19 ಪ್ರಕರಣಗಳು ದೃಢವಾಗಿದ್ದು 170 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನ್ಯೂ ಸೌತ್ ವೇಲ್ಸ್‌ ಎರಡನೇ ಸ್ಥಾನದಲ್ಲಿದ್ದು ಅಲ್ಲಿ ನಾಲ್ಕು ಸಾವಿರ ಪ್ರಕರಣಗಳು ದೃಢಪಟ್ಟಿವೆ. ಅಡಿಲೇಡ್ ರಾಜಧಾನಿಯಾಗಿರುವ ದಕ್ಷಿಣ ಆಸ್ಟ್ರೇಲಿಯಾದಲ್ಲಿ 457 ಪ್ರಕರಣಗಳು ಮಾತ್ರ ವರದಿಯಾಗಿದ್ದು ಅವರ ಪೈಕಿ 445 ಮಂದಿ ಗುಣಮುಖರಾಗಿದ್ದಾರೆ.

ಕೋವಿಡ್‌ನಿಂದಾಗಿ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ ಸಿಎ, ಭಾರತ ತಂಡವನ್ನು ಅಲ್ಲಿಗೆ ಆಹ್ವಾನಿಸಿದ್ದು ವರ್ಷದ ಕೊನೆಯಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳು ಮತ್ತು ಏಕದಿನ ಪಂದ್ಯಗಳನ್ನು ಒಳಗೊಂಡ ಸರಣಿಯನ್ನು ಏರ್ಪಾಟು ಮಾಡಿತ್ತು. ಮೊದಲ ಟೆಸ್ಟ್ಬ್ರಿಸ್ಬೇನ್‌ನಲ್ಲಿ ಡಿಸೆಂಬರ್ ಮೂರರಂದು ಆರಂಭಗೊಳ್ಳಲಿದೆ. ಡಿಸೆಂಬರ್ 11ರಿಂದ ಅಡಿಲೇಡ್‌ನಲ್ಲಿ ಹೊನಲು ಬೆಳಕಿನಡಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಹಗಲು–ರಾತ್ರಿ ಪಂದ್ಯ ಆಡಲು ತಂಡ ಸಿದ್ಧವಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಹೇಳಿದ್ದಾರೆ. ಮೂರು ಹಾಗೂ ನಾಲ್ಕನೇ ಪಂದ್ಯ ಕ್ರಮವಾಗಿ ಡಿಸೆಂಬರ್‌ 26ರಿಂದ ಮೆಲ್ಬರ್ನ್‌ನಲ್ಲಿ, ಜನವರಿ ಮೂರರಿಂದ ಸಿಡ್ನಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT