ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್‌

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ರನ್‌ ಮಳೆ ಸುರಿಸಿದ ಜಾನಿ ಬೇಸ್ಟೊ, ಅಲೆಕ್ಸ್‌ ಹೇಲ್ಸ್‌
Last Updated 19 ಜೂನ್ 2018, 20:46 IST
ಅಕ್ಷರ ಗಾತ್ರ

ನಾಟಿಂಗ್‌ಹ್ಯಾಮ್‌: ಟ್ರೆಂಟ್‌ ಬ್ರಿಜ್‌ ಅಂಗಳದಲ್ಲಿ ರನ್‌ ಮಳೆ ಸುರಿಸಿದ ಇಂಗ್ಲೆಂಡ್‌ ತಂಡ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿತು.

ಜಾನಿ ಬೇಸ್ಟೊ (139; 92ಎ, 15ಬೌಂ, 5ಸಿ) ಮತ್ತು ಅಲೆಕ್ಸ್‌ ಹೇಲ್ಸ್‌ (147; 92ಎ, 16ಬೌಂ, 5ಸಿ) ಅವರ ಆಕರ್ಷಕ ಶತಕಗಳ ಬಲದಿಂದ ಏಯೊನ್‌ ಮಾರ್ಗನ್‌ ಬಳಗ ಆಸ್ಟ್ರೇಲಿಯಾ ಎದುರಿನ ಮೂರನೇ ಪಂದ್ಯದಲ್ಲಿ ಈ ಸಾಧನೆ ಮಾಡಿತು.

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 481ರನ್‌ ದಾಖಲಿಸಿತು. ಇದರೊಂದಿಗೆ ತನ್ನದೇ ಹೆಸರಿನಲ್ಲಿದ್ದ ದಾಖಲೆಯನ್ನು ಉತ್ತಮ ಪಡಿಸಿಕೊಂಡಿತು. 2006ರಲ್ಲಿ ಟ್ರೆಂಟ್‌ ಬ್ರಿಜ್‌ ಅಂಗಳದಲ್ಲೇ ನಡೆದಿದ್ದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್‌, 50 ಓವರ್‌ಗಳಲ್ಲಿ 3 ವಿಕೆಟ್‌ಗೆ 444ರನ್‌ ಗಳಿಸಿತ್ತು.

ಅಬ್ಬರದ ಆರಂಭ: ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಜೇಸನ್‌ರಾಯ್‌ (82; 61ಎ, 7ಬೌಂ, 4ಸಿ) ಮತ್ತು ಜಾನಿ ಬೇಸ್ಟೊ ಅಬ್ಬರದ ಆರಂಭ ನೀಡಿದರು. ಇವರು ಶುರುವಿನಿಂದಲೇ ಆಸ್ಟ್ರೇಲಿಯಾದ ಬೌಲರ್‌ಗಳನ್ನು ದಂಡಿಸಿದರು. ಹೀಗಾಗಿ ಮೊದಲ ಹತ್ತು ಓವರ್‌ಗಳಲ್ಲಿ ತಂಡದ ಖಾತೆಗೆ 79ರನ್‌ಗಳು ಸೇರ್ಪಡೆಯಾದವು.

41 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 50ರನ್‌ ದಾಖಲಿಸಿದ ರಾಯ್‌, ಈ ಮೊತ್ತಕ್ಕೆ 32ರನ್ ಸೇರಿಸಿ ರನ್‌ಔಟ್‌ ಆದರು. ಇದರೊಂದಿಗೆ 159ರನ್‌ಗಳ ಮೊದಲ ವಿಕೆಟ್‌ ಜೊತೆಯಾಟಕ್ಕೆ ತೆರೆ ಬಿತ್ತು.

ನಂತರ ಕ್ರೀಸ್‌ಗೆ ಬಂದ ಅಲೆಕ್ಸ್‌ ಹೇಲ್ಸ್‌ ಕೂಡಾ ಗರ್ಜಿಸಿದರು. ಹೇಲ್ಸ್‌ ಮತ್ತು ಬೇಸ್ಟೊ ಅವರನ್ನು ನಿಯಂತ್ರಿಸಲು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್‌ ಪೇನ್, ಬೌಲಿಂಗ್‌ನಲ್ಲಿ ಹಲವು ಬದಲಾವಣೆ ಮಾಡಿದರೂ ಪ್ರಯೋಜನವಾಗಲಿಲ್ಲ.

ಎದುರಾಳಿ ಬೌಲರ್‌ಗಳ ಯಾರ್ಕರ್‌, ಶಾರ್ಟ್‌ ಪಿಚ್‌, ಫುಲ್‌ ಲೆಂಗ್ತ್‌ ಎಸೆತಗಳನ್ನು ಬೇಸ್ಟೊ ಮತ್ತು ಹೇಲ್ಸ್‌ ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದರು. ಹೀಗಾಗಿ ತಂಡದ ಮೊತ್ತ 30ನೇ ಓವರ್‌ನಲ್ಲಿ 250ರ ಗಡಿ ಮುಟ್ಟಿತು. ಬಳಿಕವೂ ಈ ಜೋಡಿಯ ಮೋಡಿ ಮುಂದುವರಿಯಿತು. ಹೇಲ್ಸ್‌ ಮತ್ತು ಜಾನಿ,ಕ್ರೀಸ್‌ನಲ್ಲಿದ್ದಷ್ಟು ಸಮಯ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರೇ ಕ್ಷೇತ್ರರಕ್ಷಕರಾಗಿದ್ದರು!

35ನೇ ಓವರ್‌ ಬೌಲ್‌ ಮಾಡಿದ ಆ್ಯಷ್ಟನ್‌ ಅಗರ್‌ ಮೊದಲ ಎಸೆತದಲ್ಲಿ ಜಾನಿ ವಿಕೆಟ್‌ ಕೆಡವಿ, ಪೇನ್‌ ಬಳಗ ನಿಟ್ಟುಸಿರು ಬಿಡುವಂತೆ ಮಾಡಿದರು. ಜಾನಿ, ಪೆವಿಲಿಯನ್‌ ಸೇರುವ ಮುನ್ನ ಅಲೆಕ್ಸ್‌ ಜೊತೆ ಎರಡನೇ ವಿಕೆಟ್‌ಗೆ 151ರನ್‌ ಸೇರಿಸಿದರು. ಆಗ ತಂಡದ ಖಾತೆಯಲ್ಲಿ 310ರನ್‌ಗಳಿದ್ದವು.

ನಂತರ ಹೇಲ್ಸ್‌ ಮತ್ತು ನಾಯಕ ಮಾರ್ಗನ್‌ (67; 30ಎ, 3ಬೌಂ, 6ಸಿ) ಅವರ ಆರ್ಭಟ ಶುರುವಾಯಿತು. ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಈ ಜೋಡಿ ತಂಡದ ದಾಖಲೆಯ ಮೊತ್ತಕ್ಕೆ ಕಾರಣವಾಯಿತು.

ಆಸ್ಟ್ರೇಲಿಯಾ ತಂಡದ ಬೌಲರ್‌ ಆ್ಯಂಡ್ರ್ಯೂ ಟೈ 9 ಓವರ್‌ ಬೌಲ್‌ ಮಾಡಿ 100 ರನ್‌ ಕೊಟ್ಟರು. ರಿಚರ್ಡ್‌ಸನ್‌ 92ರನ್‌ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌, 50 ಓವರ್‌ಗಳಲ್ಲಿ 6 ವಿಕೆಟ್‌ಗೆ 481 (ಜೇಸನ್‌ ರಾಯ್‌ 82, ಜಾನಿ ಬೇಸ್ಟೊ 139, ಅಲೆಕ್ಸ್‌ ಹೇಲ್ಸ್‌ 147, ಜೋಸ್‌ ಬಟ್ಲರ್‌ 11, ಎಯೊನ್‌ ಮಾರ್ಗನ್‌ 67; ಜೇಯ್‌ ರಿಚರ್ಡಸನ್‌ 92ಕ್ಕೆ3, ಆ್ಯಷ್ಟನ್‌ ಅಗರ್‌ 70ಕ್ಕೆ1). (ವಿವರ ಅಪೂರ್ಣ).


–ಜಾನಿ ಬೇಸ್ಟೊ ಅವರ ಬ್ಯಾಟಿಂಗ್‌ ವೈಖರಿ (ಎಎಫ್‌ಪಿ/ ಎಪಿ ಚಿತ್ರಗಳು)
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT