ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಟಿ20 ತಂಡದ ನಾಯಕತ್ವ: ರೋಹಿತ್‌ ಶರ್ಮಾ ಪರ ಮಾಜಿ ಕ್ರಿಕೆಟಿಗರ ಬ್ಯಾಟಿಂಗ್

Last Updated 17 ಸೆಪ್ಟೆಂಬರ್ 2021, 13:20 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತಮ್ಮ ನಾಯಕತ್ವದ ಗುಣಗಳನ್ನು ತೋರಿರುವ ರೋಹಿತ್ ಶರ್ಮಾ ಅವರು ಭಾರತದ ಟ್ವೆಂಟಿ-20 ಕ್ರಿಕೆಟ್‌ ತಂಡದ ನಾಯಕನಾಗಲು ಸೂಕ್ತ ವ್ಯಕ್ತಿ ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 17ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಒಮನ್‌ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಬಳಿಕ ತಂಡದ ಸಾರಥ್ಯ ತ್ಯಜಿಸಲು ಸದ್ಯ ನಾಯಕರಾಗಿರುವ ವಿರಾಟ್‌ ಕೊಹ್ಲಿ ನಿರ್ಧರಿಸಿದ್ದಾರೆ.

‘ರೋಹಿತ್ ಅವರು ಭಾರತದ ಟಿ20 ತಂಡದ ನಾಯಕನಾಗಲು ಅರ್ಹರು. ಏಕೆಂದರೆ ಅವರು ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಾಗಲೆಲ್ಲಾ ಅವರು ಉತ್ತಮ ಸಾಮರ್ಥ್ಯ ತೋರಿದ್ದಾರೆ‘ ಎಂದು ದಿಲೀಪ್ ವೆಂಗ್‌ಸರ್ಕಾರ್‌ ಶುಕ್ರವಾರ ‘ಟೈಮ್ಸ್ ಆಫ್ ಇಂಡಿಯಾ‘ ಪತ್ರಿಕೆಗೆ ತಿಳಿಸಿದರು.

‘2018ರಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಏಷ್ಯಾಕಪ್ ಗೆದ್ದುಕೊಂಡಿತ್ತು. ಅಲ್ಲದೆ ಐಪಿಎಲ್‌ನಲ್ಲಿ ಮುಂಬೈ ತಂಡ ಅವರ ಸಾರಥ್ಯದಲ್ಲಿ ಐದು ಟ್ರೋಫಿಗಳನ್ನು ಜಯಿಸಿದೆ‘ ಎಂದು ಅವರು ನುಡಿದರು.

1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರ ಸಂದೀಪ್ ಪಾಟೀಲ್ ಕೂಡ ಇದೇ ರೀತಿಯ ಮಾತುಗಳನ್ನು ಧ್ವನಿಸಿದ್ದಾರೆ. ‘ರೋಹಿತ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ‘ ಎಂದಿದ್ದಾರೆ.

‘ರೋಹಿತ್ 20–20 ಓವರ್‌ಗಳ ಕ್ರಿಕೆಟ್‌ ಮಾದರಿಗೆ ಅತ್ಯುತ್ತಮ ನಾಯಕ. ಐಪಿಎಲ್‌ನಲ್ಲಿ ಕಿಂಗ್ಸ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಸೀಮಿತ ಓವರ್‌ಗಳ ಮಾದರಿ ಕ್ರಿಕೆಟ್‌ಗೆ ಭವಿಷ್ಯದ ನಾಯಕನನ್ನಾಗಿ ರೂಪಿಸಬೇಕು. ಅವರನ್ನು ಸದ್ಯ ಉಪನಾಯಕನನ್ನಾಗಿ ಮಾಡಬೇಕು‘ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಸ್ಪೋರ್ಟ್ಸ್ ಟಾಕ್‘ ಎಂಬ ಕಾರ್ಯಕ್ರಮದಲ್ಲಿ ಗಾವಸ್ಕರ್‌ ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT