ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಬ್ಲ್ಯುಟಿಸಿ ಫೈನಲ್‌: ಬ್ಯಾಟರ್‌ಗಳಿಗೆ ನಾಯಕ ರೋಹಿತ್‌ ಕಿವಿಮಾತು

Published : 5 ಜೂನ್ 2023, 14:27 IST
Last Updated : 5 ಜೂನ್ 2023, 14:27 IST
ಫಾಲೋ ಮಾಡಿ
Comments

ಲಂಡನ್‌ (ರಾಯಿಟರ್ಸ್‌): ಬ್ಯಾಟರ್‌ಗಳಿಗೆ ಸವಾಲೊಡ್ಡುವ ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಟೆಸ್ಟ್‌ ಮಾದರಿಯಲ್ಲಿ ಯಶಸ್ಸು ಸಾಧಿಸಬೇಕಾದರೆ, ಕ್ರೀಸ್‌ನಲ್ಲಿ ತುಂಬಾ ಹೊತ್ತು ಬೇರೂರಿ ನಿಂತು ಆಡಲು ಸಿದ್ಧರಿರಬೇಕು ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

ಬುಧವಾರ ಆರಂಭವಾಗಲಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಪೈಪೋಟಿ ನಡೆಸಲಿದೆ. ಕಳೆದ ವಾರದವರೆಗೆ ಐಪಿಎಲ್‌ನಲ್ಲಿ ಆಡಿದ್ದ ಭಾರತದ ಆಟಗಾರರಿಗೆ ಟೆಸ್ಟ್‌ ಪಂದ್ಯದ ಮಾದರಿಗೆ ಒಗ್ಗಿಕೊಳ್ಳಬೇಕಿದೆ. ಆಸ್ಟ್ರೇಲಿಯಾದ ವೇಗಿಗಳಾದ ಪ್ಯಾಟ್‌ ಕಮಿನ್ಸ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ಅವರ ‘ಸ್ವಿಂಗ್‌’ ಬೌಲಿಂಗ್‌ ಎದುರಿಸುವುದು ರೋಹಿತ್‌ ಪಡೆಗೆ ಭಿನ್ನ ಅನುಭವ ನೀಡಲಿದೆ.

ರೋಹಿತ್‌ ಅವರು ಇಂಗ್ಲೆಂಡ್‌ನ ಪರಿಸ್ಥಿತಿಗೆ ಹೊಂದಿಕೊಂಡು ಆಡುವ ಕಲೆಯನ್ನು ಕರಗತಮಾಡಿಕೊಂಡಿದ್ದಾರೆ. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯ ಒಂಬತ್ತು ಇನಿಂಗ್ಸ್‌ಗಳಲ್ಲಿ ಅವರು ಐದು ಶತಕ ಹೊಡೆದಿದ್ದರು. ಎರಡು ವರ್ಷಗಳ ಹಿಂದೆ ಓವಲ್‌ನಲ್ಲಿ ಇಂಗ್ಲೆಂಡ್‌ ವಿರುದ್ದ ನಡೆದಿದ್ದ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದರು.

‘ಇಂಗ್ಲೆಂಡ್‌ನ ಪರಿಸ್ಥಿತಿ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಸಾಕಷ್ಟು ಸವಾಲು ಒಡ್ಡುತ್ತದೆ. ಕ್ರೀಸ್‌ನಲ್ಲಿ ತುಂಬಾ ಹೊತ್ತು ತಳವೂರಿ ನಿಲ್ಲಲು ತಕ್ಕ ಸಿದ್ಧತೆ ನಡೆಸಿದ್ದರೆ ಮಾತ್ರ ಒಬ್ಬ ಬ್ಯಾಟರ್‌ ಆಗಿ ನಿಮಗೆ ಯಶಸ್ಸು ಗಳಿಸಬಹುದು’ ಎಂದು ಅವರು ಸೋಮವಾರ ಹೇಳಿದ್ದಾರೆ.

'ನಾನು ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಅರಿತುಕೊಂಡ ಒಂದು ವಿಷಯವೆಂದರೆ, ಇಲ್ಲಿ ಹವಾಮಾನ ಆಗಿಂದಾಗ್ಗೆ ಬದಲಾಗುತ್ತಿರುತ್ತದೆ. ಆದ್ದರಿಂದ ದೀರ್ಘ ಅವಧಿಯವರೆಗೆ ಆಡಬೇಕಾದರೆ ಏಕಾಗ್ರತೆ ಹೊಂದಿರಬೇಕು. ಟೆಸ್ಟ್‌ ಮಾದರಿಯಲ್ಲಿ ನಿಮಗೆ ಎದುರಾಗುವ ಸವಾಲು ಅದು. ಪರಿಸ್ಥಿತಿಗೆ ಹೊಂದಿಕೊಂಡ ಬಳಿಕವೇ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದ್ಧಾರೆ.

ಭಾರತದ ಬೌಲಿಂಗ್‌ ಎದುರಿಸಲು ಸಿದ್ಧ–ಸ್ಮಿತ್‌: ಭಾರತದ ವೇಗಿಗಳು ಮತ್ತು ಸ್ಪಿನ್ನರ್‌ಗಳ ದಾಳಿಯನ್ನು ಎದುರಿಸಲು ನಮ್ಮ ತಂಡ ಸಿದ್ಧವಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟರ್‌ ಸ್ಟೀವ್‌ ಸ್ಮಿತ್‌ ಹೇಳಿದ್ದಾರೆ.

‘ಭಾರತ ತಂಡವು ಉತ್ತಮ ವೇಗಿಗಳನ್ನು ಹೊಂದಿದೆ. ಶಮಿ ಮತ್ತು ಮೊಹಮ್ಮದ್‌ ಸಿರಾಜ್‌ ಅವರು ಪ್ರಮುಖರಾಗಿದ್ದು, ಉತ್ತಮ ಕೌಶಲ ಹೊಂದಿದ್ದಾರೆ. ಡ್ಯೂಕ್ಸ್‌ ಚೆಂಡುಗಳು ಅವರ ಬೌಲಿಂಗ್‌ ಶೈಲಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂಬುದು ನನ್ನ ಭಾವನೆ’ ಎಂದಿದ್ದಾರೆ.

‘ಎಲ್ಲ ಪರಿಸ್ಥಿತಿಗಳಲ್ಲೂ ಪರಿಣಾಮಕಾರಿ ಎನಿಸಬಲ್ಲ ಸ್ಪಿನ್ನರ್‌ಗಳೂ ಅವರಲ್ಲಿದ್ದಾರೆ. ಆದ್ದರಿಂದ ಒಟ್ಟಾರೆಯಾಗಿ ಭಾರತದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದ್ದು, ನಾವು ಚೆನ್ನಾಗಿ ಆಡಬೇಕಿದೆ’ ಎಂದು ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT