ಗುರುವಾರ , ನವೆಂಬರ್ 21, 2019
20 °C

ಹ್ಯಾಟ್ರಿಕ್‌ ಸಹಿತ ವಿಶ್ವದಾಖಲೆಯ ಬೌಲಿಂಗ್: ದೀಪಕ್ ದಾಳಿಗೆ ದಂಗಾದ ಬಾಂಗ್ಲಾದೇಶ

Published:
Updated:

ನಾಗಪುರ: ವೇಗದ ಬೌಲರ್ ದೀಪಕ್‌ ಚಾಹರ್‌ (3.2–0–7–6) ಹ್ಯಾಟ್ರಿಕ್‌ ಸಹಿತ ವಿಶ್ವದಾಖಲೆಯ ಬೌಲಿಂಗ್‌ ಪ್ರದರ್ಶನ ನೀಡಿದರು. ಅವರ ದಾಳಿಗೆ ನಲುಗಿದ ಬಾಂಗ್ಲಾದೇಶ ಮೂರನೇ ಹಾಗೂ ಅಂತಿಮ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಭಾನುವಾರ ಭಾರತಕ್ಕೆ 30 ರನ್‌ಗಳಿಂದ ಮಣಿಯಿತು.

ಚಾಹರ್‌ ಸಾಧನೆ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಎನಿಸಿತು. 2012ರಲ್ಲಿ ಜಿಂಬಾಬ್ವೆ ವಿರುದ್ಧ ಶ್ರೀಲಂಕಾದ ಸ್ಪಿನ್ನರ್‌  ಅಜಂತ ಮೆಂಡಿಸ್‌ 8 ರನ್ನಿಗೆ 6 ವಿಕೆಟ್‌ ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು.

ತಮ್ಮ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ (ಶಫಿಯಲ್‌ ಇಸ್ಲಾಂ) ಹಾಗೂ ಅಂತಿಮ ಓವರ್‌ನ‌ ಮೊದಲ ಎರಡು ಎಸೆತಗಳಲ್ಲಿ (ಮುಸ್ತಫಿಜುರ್‌, ಅಮಿನುಲ್‌ ಇಸ್ಲಾಂ) ವಿಕೆಟ್‌ ಪಡೆದರು. ಆ ಮೂಲಕ ಟಿ–20ಯಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಭಾರತದ ಮೊದಲ ಬೌಲರ್‌ ಎಂಬ ಗೌರವಕ್ಕೂ ಭಾಜನರಾದರು.

ಇದಕ್ಕೆ ಮೊದಲು ಟಾಸ್‌ ಸೋತಿದ್ದ ಭಾರತ, ಶ್ರೇಯಸ್‌ ಅಯ್ಯರ್‌ ಮತ್ತು ಕೆ.ಎಲ್‌.ರಾಹುಲ್‌ ಅವರ ಅರ್ಧ ಶತಕಗಳ ಸಹಾಯದಿಂದ 5 ವಿಕೆಟ್‌ಗೆ 174 ರನ್‌ಗಳ ಸವಾಲಿನ ಮೊತ್ತ ಗಳಿಸಿತ್ತು. ಆದರೆ ಆರಂಭ ಆಟಗಾರ ನಯೀಮ್‌ (48 ಎಸೆತಗಳಲ್ಲಿ 81, 10 ಬೌಂಡರಿ, 2ಸಿಕ್ಸರ್‌), ಮಿಥುನ್‌ ಮೊಹಮದ್‌ (27) ಜೊತೆ ಮೂರನೇ ವಿಕೆಟ್‌ಗೆ 98 ರನ್‌ಗಳನ್ನು ಸೇರಿಸಿ ತಂಡಕ್ಕೆ ಅಮೋಘ ಚೇತರಿಕೆ ಒದಗಿಸಿದ್ದರು. ಆದರೆ ನಂತರ 20 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳು ಉರುಳಿದವು. ಒಂದು ಹಂತದಲ್ಲಿ 2 ವಿಕೆಟ್‌ಗೆ 110 ರನ್‌ ಗಳಿಸಿದ್ದ ಬಾಂಗ್ಲಾದೇಶ ಅಂತಿಮವಾಗಿ 19.2 ಓವರುಗಳಲ್ಲಿ 144 ರನ್‌ಗಳಿಗೆ ಕುಸಿಯಿತು.

ಇಬ್ಬನಿಯಿಂದ ಸ್ಪಿನ್ನರ್‌ಗಳು ಪರಿಣಾಮ ಬೀರಲಿಲ್ಲ. ಆದರೆ ವೇಗದ ಬೌಲರ್‌ಗಳು ಯಶಸ್ವಿಯಾದರು.

ಇದಕ್ಕೆ ಮೊದಲು, ಲಯಕ್ಕೆ ಮರಳಿದ ರಾಹುಲ್‌ ಮತ್ತು ಟಿ–20ಯಲ್ಲಿ ಮೊದಲ ಅರ್ಧ ಶತಕ ಹೊಡೆದ ಶ್ರೇಯಸ್‌ ಅಯ್ಯರ್‌ ಅಮೋಘ ಆಟವಾಡಿ ಬಾಂಗ್ಲಾ ಬೌಲರ್‌ಗಳನ್ನು ದಂಡಿಸಿದರು.

ಎರಡನೇ ಓವರ್‌ನಲ್ಲೇ ರೋಹಿತ್‌ ಶರ್ಮಾ (2), ನಂತರ ಆರನೇ ಓವರ್‌ನಲ್ಲಿ ಶಿಖರ್ ಧವನ್‌ (19) ಅವರನ್ನು ಕಳೆದುಕೊಂಡ ಭಾರತಕ್ಕೆ ಇವರಿಬ್ಬರು ಆಸರೆಯಾದರು. ‌ಖಾತೆ ತೆರೆಯುವ ಮೊದಲೇ ಜೀವದಾನ ಪಡೆದ ಶ್ರೇಯಸ್‌ ಅದರ ಲಾಭ ಪಡೆದು ಆಕ್ರಮಣಕಾರಿಯಾದರು. 27 ಎಸೆತಗಳಲ್ಲಿ ಅರ್ಧ ಶತಕ ದಾಟಿದ ಅಯ್ಯರ್‌, ವಿಶೇಷವಾಗಿ ಸ್ಪಿನ್ನರ್‌ಗಳನ್ನು ದಂಡಿಸಿದರು. ಆಫ್‌ ಸ್ಪಿನ್ನರ್‌ ಆಫಿಫ್‌ ಹುಸೇನ್ ಅವರ ಒಂದೇ ಓವರ್‌ನಲ್ಲಿ ಲಾಂಗ್‌ ಆನ್‌ಗೆ ಮೂರು ಸಿಕ್ಸರ್‌ಗಳನ್ನು ಎತ್ತಿದರು.

ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ವೈಫಲ್ಯದಿಂದ ಒತ್ತಡದಲ್ಲಿರುವ ರಿಷಭ್‌ ಪಂತ್‌ (6) ಮತ್ತೊಮ್ಮೆ ನಿರಾಸೆ ಮೂಡಿಸಿದರು. 9 ಎಸೆತಗಳನ್ನು ಎದುರಿಸಿದ ಅವರು ಸೌಮ್ಯ ಸರ್ಕಾರ್‌ ಅವರ ‘ಸ್ಲೋ ಬಾಲ್‌’ಗೆ ವಿಕೆಟ್‌ ಕಳೆದುಕೊಂಡರು.

ಕೃಣಾಲ್‌ ಪಾಂಡ್ಯ ಬದಲು ಸರಣಿಯಲ್ಲಿ ಮೊದಲ ಬಾರಿ ಅವಕಾಶ ಪಡೆದ ಮನೀಶ್ ಪಾಂಡೆ 13 ಎಸೆತಗಳಲ್ಲಿ ಅಜೇಯ 22 ರನ್‌ ಗಳಿಸಿ ತಂಡ 170ರ ಗಡಿ ದಾಟಲು ನೆರವಾದರು.

ಪ್ರತಿಕ್ರಿಯಿಸಿ (+)