ಬುಧವಾರ, ಅಕ್ಟೋಬರ್ 20, 2021
24 °C

ಕ್ರಿಕೆಟ್‌: ಕ್ವಾರ್ಟರ್‌ಗೆ ಕರ್ನಾಟಕ ತಂಡಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಕರ್ನಾಟಕದ ಪುರುಷ ಮತ್ತು ಮಹಿಳಾ ತಂಡಗಳು ಬಿಸಿಸಿಐ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿವೆ.

ವಿನೂ ಮಂಕಡ್‌ ಟ್ರೋಫಿಗಾಗಿ ನಡೆಯುತ್ತಿರುವ ಪುರುಷರ ಟೂರ್ನಿಯಲ್ಲಿ ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ 76 ರನ್‌ಗಳಿಂದ ತಮಿಳುನಾಡು ತಂಡವನ್ನು
ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ರಾಜ್ಯ ತಂಡದವರು ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 295 ರನ್‌ ಕಲೆ ಹಾಕಿದರು. ತಂಡದ ಚಿನ್ಮಯ್‌ ಎನ್‌.ಎ. (ಔಟಾಗದೆ 80), ಗೌತಮ್‌ (61) ಮ್ತು ಶ್ರೇಯಸ್ ಎಸ್‌.ಪಿ. (60) ಅರ್ಧಶತಕ ದಾಖಲಿಸಿದರು.

ಸವಾಲಿನ ಮೊತ್ತ ಬೆನ್ನತ್ತಿದ ತಮಿಳುನಾಡು ತಂಡವು 45 ಓವರ್‌ಗಳಲ್ಲಿ 219 ರನ್‌ ಗಳಿಸಿ ಎಲ್ಲ ವಿಕೆಟ್‌ ಒಪ್ಪಿಸಿತು. ಆ ತಂಡದ ಪರ ಭೂಪತಿ ವೈಷ್ಣ ಕುಮಾರ್‌ (53) ಮಿಂಚಿದರು. ಕರ್ನಾಟಕದ ಯಶೋವರ್ಧನ್‌ (38ಕ್ಕೆ 2), ಶ್ರೇಯಸ್‌ ಎಸ್.ಪಿ. (28ಕ್ಕೆ 2) ಮತ್ತು ಮೊಹಸಿನ್‌ ಖಾನ್‌ (58ಕ್ಕೆ 2) ಪರಿಣಾಮಕಾರಿ ಬೌಲಿಂಗ್ ಮಾಡಿದರು.

ಕರ್ನಾಟಕ ತಂಡವು ಎಂಟರಘಟ್ಟದಲ್ಲಿ ಬುಧವಾರ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.

ಬಂಗಾಳ ಮಣಿಸಿದ ಕರ್ನಾಟಕ: ಮಹಿಳೆಯರು: ಸವಿ ಸಿ.ಎಸ್‌. (15ಕ್ಕೆ 3), ನಿರ್ಮಿತಾ ಸಿ.ಜೆ. (15ಕ್ಕೆ 3) ಹಾಗೂ ಪೂಜಾ ಕುಮಾರಿ (12ಕ್ಕೆ 3) ಅವರ ಭರ್ಜರಿ ಬೌಲಿಂಗ್ ಬಲದಿಂದ ಕರ್ನಾಟಕ ಮಹಿಳೆಯರು ಬಂಗಾಳ ತಂಡವನ್ನು ಮಣಿಸಿದರು.

ಜೈಪುರದ ಆರ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ರಾಜ್ಯ ತಂಡ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ಬಂಗಾಳ ತಂಡದವರು 26.4 ಓವರ್‌ಗಳಲ್ಲಿ ಕೇವಲ 69 ರನ್‌ ಆಲೌಟ್‌ ಆದರು. ಕರ್ನಾಟಕ ತಂಡ 31.2 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಕೃಷಿಕಾ ರೆಡ್ಡಿ 23 ರನ್ ಗಳಿಸಿದರು.

ಬುಧವಾರ ನಡೆಯುವ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಮಹಿಳೆಯರಿಗೆ ದೆಹಲಿ ಸವಾಲು ಎದುರಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು