ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ವೀಸಾ ಸಮಸ್ಯೆ: ನೇಪಾಳದ ಪ್ರಮುಖ ಆಟಗಾರ ಟಿ20 ಕ್ರಿಕೆಟ್ ವಿಶ್ವಕಪ್‌ಗೆ ಗೈರು

Published 31 ಮೇ 2024, 9:55 IST
Last Updated 31 ಮೇ 2024, 9:55 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರ ಸಂದೀಪ್‌ ಲಮಿಚಾನೆ ಅವರಿಗೆ ವೀಸಾ ನೀಡಲು ಅಮೆರಿಕ ನಿರಾಕರಿಸಿದೆ. ಹೀಗಾಗಿ, ಅವರು ಟಿ20 ವಿಶ್ವಕಪ್‌ಗೆ ಗೈರಾಗಲಿದ್ದಾರೆ ಎಂದು ಕ್ರಿಕೆಟ್‌ ಅಸೋಸಿಯೇಷನ್‌ ಆಫ್‌ ನೇಪಾಳ (ಸಿಎಎನ್‌) ತಿಳಿಸಿದೆ.

ಅಮೆರಿಕವು ತಮಗೆ ಕಳೆದವಾರ ವೀಸಾ ನಿರಾಕರಿಸಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. 2019ರಲ್ಲಿಯೂ ವೀಸಾ ನಿರಾಕರಿಸಲಾಗಿತ್ತು ಎಂದು ಸಂದೀಪ್‌ ಹೇಳಿದ್ದಾರೆ.

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪ ಸಂದೀಪ್‌ ವಿರುದ್ಧ ಕೇಳಿಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕಠ್ಮಂಡು ಜಿಲ್ಲಾ ನ್ಯಾಯಾಲಯ, ಸಂದೀಪ್‌ ದೋಷಿ ಎಂದು ಹಾಗೂ ಅವರಿಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿ 2023ರ ಡಿಸೆಂಬರ್‌ನಲ್ಲಿ ಆದೇಶಿಸಿತ್ತು.

ಈ ತೀರ್ಪು ಪ್ರಶ್ನಿಸಿ ಸಂದೀಪ್‌ ಪಾಟನ್ ಹೈಕೋರ್ಟ್‌ ಮೊರೆ ಹೋಗಿದ್ದರು. ಕ್ರಿಕೆಟಿಗನ ಮೇಲ್ಮನವಿ ಆಲಿಸಿದ ಹೈಕೋರ್ಟ್‌, ಅತ್ಯಾಚಾರ ಪ್ರಕರಣದಿಂದ ಇದೇ ತಿಂಗಳು ಖುಲಾಸೆಗೊಳಿಸಿತ್ತು. ಹೀಗಾಗಿ, ಅವರನ್ನು ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ನೇಪಾಳ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.

ನೇಪಾಳದ ಪ್ರಮುಖ ಲೆಗ್ ಸ್ಪಿನ್ನರ್‌ ಆಗಿರುವ ಸಂದೀಪ್‌, 2018ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಡಿದ್ದರು.

ಜೂನ್ 4ರಂದು ಮೊದಲ ಪಂದ್ಯ
ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯು ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ನಾಳೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ಮತ್ತು ಕೆನಡಾ ಪೈಪೋಟಿ ನಡೆಸಲಿವೆ.

'ಡಿ' ಗುಂಪಿನಲ್ಲಿರುವ ನೇಪಾಳ ತಂಡವು ತನ್ನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯವು ಜೂನ್ 4ರಂದು ಡಲ್ಲಾಸ್‌ನಲ್ಲಿ ನಡೆಯಲಿದೆ. ನಂತರ ಕ್ರಮವಾಗಿ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT