ಸೋಮವಾರ, ಆಗಸ್ಟ್ 8, 2022
24 °C

PV Web Exclusive | ಶೆಫಾಲಿ: ಮಹಿಳಾ ಕ್ರಿಕೆಟ್‌ನ ‘ಸೆಹ್ವಾಗ್‌’

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ನಿವೃತ್ತಿಯ ಅಂಚಿನಲ್ಲಿರುವ 35 ವರ್ಷ ವಯಸ್ಸಿನ ಮಧ್ಯಮ ವೇಗಿ ಕ್ಯಾಥರಿನ್ ಬ್ರುಂಟ್‌, 30 ವರ್ಷದ ಆಫ್‌ ಸ್ಪಿನ್ನರ್ ಹೀಥರ್ ನೈಟ್‌, 29 ವರ್ಷದ ವೇಗಿ ಅನ್ಯಾ ಶ್ರಬ್‌ಸೋಲ್‌, ವೇಗಿಗಳಾದ ನತಾಲಿ ಶೀವರ್‌, ಕೇಟ್ ಕ್ರಾಸ್‌, ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್‌, ಲೆಗ್‌ ಸ್ಪಿನ್ನರ್ ಸೋಫಿಯಾ ಡಂಕ್ಲಿ...

ಭಾರತದ ಯುವ ಆಟಗಾರ್ತಿ ಶೆಫಾಲಿ ವರ್ಮಾ ಅವರ ಬ್ಯಾಟಿಂಗ್ ಕಲೆ ಇವರೆಲ್ಲರನ್ನೂ ದಂಗುಬಡಿಸಿದೆ. ಇಂಗ್ಲೆಂಡ್ ಮಹಿಳಾ ತಂಡದ ಎದುರಿನ ಏಕೈಕ ಟೆಸ್ಟ್ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡ ನಂತರ ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೂ ಮೂಡಿಸಿದ್ದಾರೆ ಭಾರತದ ಶೆಫಾಲಿ ವರ್ಮಾ.

ಆದರೆ ಶೆಫಾಲಿ, ಭಾರತದ ಮೊದಲ ಇನಿಂಗ್ಸ್ ಆರಂಭಗೊಂಡ ಸಂದರ್ಭದಿಂದ ಸುದ್ದಿಯಲ್ಲಿದ್ದಾರೆ. ಏಳು ವರ್ಷಗಳ ನಂತರ ಟೆಸ್ಟ್ ಪಂದ್ಯ ಆಡಿದ ಭಾರತ ತಂಡದಲ್ಲಿದ್ದ ಬಹುತೇಕರಿಗೆ ಅದು ಪದಾರ್ಪಣೆ ಪಂದ್ಯವಾಗಿತ್ತು. ಶೆಫಾಲಿ ಕೂಡ ಆ ಪಟ್ಟಿಯಲ್ಲಿದ್ದರು.

ಹಾಗೆ ನೋಡಿದರೆ ಕೇವಲ 17 ವರ್ಷ ವಯಸ್ಸಿನ ಅವರು ಅಂತರರಾಷ್ಟ್ರೀಯ ಪಂದ್ಯಗಳನ್ನಾದರೂ ಎಷ್ಟು ಆಡಿರಲು ಸಾಧ್ಯ? 22 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಷ್ಟೇ ಅವರ ಅನುಭವ. ಆ ಮಾದರಿಯಲ್ಲಿ ಈಗಾಗಲೇ ಸ್ಫೋಟಕ ಶೈಲಿಯ ಆಟಗಾರ್ತಿ ಎಂಬ ಹೆಸರು ಪಡೆದಿರುವ ಅವರು ಆಕ್ರಮಣ ಮತ್ತು ರಕ್ಷಣಾತ್ಮಕ ಆಟದ ಮೂಲಕ ವಿಕೆಟ್ ಉಳಿಸುತ್ತ ರನ್‌ ಸೇರಿಸಿ ಟೆಸ್ಟ್‌ ಕ್ರಿಕೆಟ್‌ಗೂ ಸೈ ಎಂಬುದನ್ನು ಸಾಬೀತು ಮಾಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ನಿರಾಳವಾಗಿ 96 ರನ್ ಕಲೆ ಹಾಕಿದ್ದು ಎರಡನೇ ಇನಿಂಗ್ಸ್‌ನಲ್ಲಿ ಒತ್ತಡದ ಪರಿಸ್ಥಿತಿಯನ್ನೂ ನಿಭಾಯಿಸಿ 83 ಎಸೆತಗಳಲ್ಲಿ 63 ರನ್ ಗಳಿಸಿದ್ದರು. ಈ ಮೂಲಕ ಅನೇಕ ‘ಮೊದಲು’ಗಳ ಒಡತಿಯಾಗಿದ್ದಾರೆ.

ಶೆಫಾಲಿ ಈಗ ಮಹಿಳಾ ಕ್ರಿಕೆಟ್‌ನ ಸೆಹ್ವಾಗ್‌ ಎಂದು ಕೂಡ ಕರೆಸಿಕೊಂಡಿದ್ದಾರೆ. ಮಾದರಿ ಯಾವುದೇ ಆಗಿರಲಿ, ಅದಕ್ಕೆ ತಕ್ಕಂತೆ ಆಡುವುದು, ರನ್ ಗುಡ್ಡೆ ಹಾಕುವುದು ಮುಂತಾದ ಗುಣಗಳು ಮಾತ್ರ ಈ ಹೋಲಿಕೆಗೆ ಕಾರಣವಲ್ಲ. ಬ್ಯಾಟ್‌ ಬೀಸುವ ಶೈಲಿಯಲ್ಲೂ ಅವರು ಸೆಹ್ವಾಗ್ ಅವರನ್ನು ಹೋಲುತ್ತಾರೆ ಎಂಬುದು ಹಲವರ ಅನಿಸಿಕೆ. ವಿಶೇಷವಾಗಿ ಮೊಣಕಾಲು ಎತ್ತರದಲ್ಲಿ ಆಫ್‌ಸೈಡ್‌ನಿಂದ ಹೊರಹೋಗುವ ಚೆಂಡನ್ನು ಸ್ಟಿಯರ್ ಮಾಡಿ ಥರ್ಡ್‌ಮ್ಯಾನ್ ಕಡೆಯಿಂದ ಬೌಂಡರಿಗೆ ಅಟ್ಟುವ ಕಲೆಯಲ್ಲಿ ಶೆಫಾಲಿ, ಸೆಹ್ವಾಗ್ ಅವರನ್ನೇ ಹೋಲುತ್ತಾರೆ ಎಂದು ವೀಕ್ಷಕ ವಿವರಣೆಕಾರ ಹರ್ಷ ಬೋಗ್ಲೆ ಗುರುತಿಸಿದ್ದಾರೆ. ಭಾರತ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರೀಸ್‌ನಲ್ಲಿರುವ ಜೊತೆ ಆಟಗಾರ್ತಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ದಾಳಿ ನಡೆಸುವ ಎದುರಾಳಿಗಳ ತಂತ್ರಗಳನ್ನೂ ಗಮನದಲ್ಲಿಟ್ಟುಕೊಂಡು ಸಮರ್ಥವಾದ ಪ್ರತಿತಂತ್ರ ಹೂಡುವುದರಲ್ಲಂತೂ ಶೆಫಾಲಿ ಅವರು ವಯಸ್ಸು ಮತ್ತು ಅನುಭವವನ್ನು ಮೀರಿದ ಪ್ರಬುದ್ಧತೆ ಮೆರೆದಿದ್ದಾರೆ ಎಂಬುದು ಕ್ರಿಕೆಟ್ ತಜ್ಞರ ಅಭಿಮತ.

ವೇಗದ ಬೌಲರ್‌ಗಳ ಎಸೆತವನ್ನು ಒಂದು ಹೆಜ್ಜೆ ಮುಂದಿಟ್ಟು ನಿರಾಯಾಸವಾಗಿ ಡ್ರೈವ್ ಮಾಡುವಾಗಲೂ ಫುಲ್ಲರ್ ಲೆಂಗ್ತ್ ಎಸೆತಗಳನ್ನು ನಿಂತಲ್ಲಿಂದಲೇ ಬೌಂಡರಿಗೆ ಎತ್ತುವಾಗಲೂ ಚೆಂಡು ಪುಟಿಯುವುದಕ್ಕೂ ಮೊದಲು ಮುಂದೆ ನುಗ್ಗಿ ಲಾಫ್ಟ್‌ ಮಾಡಿ ಬೌಂಡರಿಯತ್ತ ಹಾಯಿಸುವಾಗಲೂ ಲೆಗ್‌ಸ್ಟಂಪ್ ಮೇಲೆ ನುಗ್ಗಿಬರುವ ಚೆಂಡನ್ನು ನಾಜೂಕಿನಿಂದ ಫ್ಲಿಕ್ ಮಾಡುವಾಗಲೂ ಸ್ಪಿನ್ನರ್‌ಗಳ ಎಸೆತವನ್ನು ಬ್ಯಾಕ್‌ಫೂಟ್‌ನಲ್ಲಿ ನಿಂತು ಕಟ್ ಮಾಡುವಾಗಲೂ ಹೆಜ್ಜೆ ಮುಂದಿಟ್ಟು ಮಿಡ್‌ವಿಕೆಟ್‌ ಫೀಲ್ಡರ್ ತಲೆಮೇಲಿಂದ ಎತ್ತುವಾಗಲೂ, ಮಿಡಲ್ ಸ್ಟಂಪ್‌ನತ್ತ ತೂರಿಬರುವ ಚೆಂಡನ್ನು ಮೋಹಕ ಪಾದಚಲನೆಯ ಮೂಲಕ ಪಂಚ್ ಮಾಡುವಾಗಲೂ ಹರಿಯಾಣದ ಈ ಆಟಗಾರ್ತಿಯಲ್ಲಿ ಸೆಹ್ವಾಗ್ ಪ್ರತಿರೂಪ ಕಂಡರೆ ಅಚ್ಚರಿ ಇಲ್ಲ.

ದಾಖಲೆಗಳ ಮಾಲೆ ಹೆಣೆದ ಬ್ಯಾಟರ್‌

ಪದಾರ್ಪಣೆ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಶೆಫಾಲಿ ಆಪರೂಪದ ಸಾಧನೆ ಮಾಡಿದ್ದಾರೆ. ಮಹಿಳೆಯರ ಟೆಸ್ಟ್‌ನಲ್ಲಿ ಈ ಮೈಲುಗಲ್ಲು ದಾಟಿದ ಭಾರತದ ಮೊದಲನೆಯ ಮತ್ತು ಒಟ್ಟಾರೆ ನಾಲ್ಕನೇ ಆಟಗಾರ್ತಿಯಾಗಿದ್ದಾರೆ ಅವರು. ಪದಾರ್ಪಣೆ ಟೆಸ್ಟ್‌ನಲ್ಲಿ ಒಟ್ಟಾರೆ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಮೂರನೇ ಆಟಗಾರ್ತಿಯೂ ಆಗಿದ್ದಾರೆ ಶೆಫಾಲಿ. ಆಸ್ಟ್ರೇಲಿಯಾದ ಮೈಖೆಲಿ ಗಾಸ್ಕೊ ಮತ್ತು ಇಂಗ್ಲೆಂಡ್‌ನ ಲೆಸ್ಲಿ ಕುಕ್ ಕ್ರಮವಾಗಿ 204 ಮತ್ತು 189 ರನ್ ಗಳಿಸಿದ್ದಾರೆ. ಶೆಫಾಲಿ ಒಟ್ಟು 159 ರನ್ ಸೇರಿಸಿದ್ದಾರೆ.

ಪದಾರ್ಪಣೆ ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ ಭಾರತದ ಮೊದಲ ಆಟಗಾರ್ತಿಯೂ ವಿಶ್ವದ ಅತಿ ಕಿರಿಯ ಆಟಗಾರ್ತಿಯೂ ಆಗಿದ್ದಾರೆ ಅವರು. ಆಸ್ಟ್ರೇಲಿಯಾದ ಜೆಸ್ ಜೊನಾಸೆನ್ 22ನೇ ವಯಸ್ಸಿನಲ್ಲಿ ಮೊದಲ ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿದ್ದರು.

ಪುರುಷ ಮತ್ತು ಮಹಿಳೆಯರ ಟೆಸ್ಟ್‌ ಇತಿಹಾಸದಲ್ಲಿ ಮೊದಲ ಪಂದ್ಯದಲ್ಲೇ ಒಟ್ಟು 150ಕ್ಕೂ ಅಧಿಕ ರನ್ ಗಳಿಸಿದ ಭಾರತದ ನಾಲ್ಕನೇ ಕ್ರಿಕೆಟರ್ ಶೆಫಾಲಿ. ಶಿಖರ್ ಧವನ್ (187; ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ), ರೋಹಿತ್ ಶರ್ಮಾ (177; ವೆಸ್ಟ್ ಇಂಡೀಸ್ ವಿರುದ್ಧ 2013ರಲ್ಲಿ), ಲಾಲಾ ಅಮರನಾಥ್‌ (156; ಇಂಗ್ಲೆಂಡ್‌ ವಿರುದ್ಧ 1933ರಲ್ಲಿ) ಮೊದಲ ಮೂವರು.

ಶೆಫಾಲಿ ಆಟ ಅನುಭವಿ ಸ್ಮೃತಿ ಮಂದಾನ ಹಾಗೂ ತಂಡದ ಯುವ ಆಟಗಾರ್ತಿಯರ ಮೇಲೂ ಪ್ರಭಾವ ಬೀರಿತ್ತು. ಹೀಗಾಗಿ ಪದಾರ್ಪಣೆ ಮಾಡಿದ ಐವರು ಅರ್ಧಶತಕ ಗಳಿಸಿದ ಅಪರೂಪದ ದಾಖಲೆ ಈ ಪಂದ್ಯದಲ್ಲಿ ಮೂಡಿಬಂದಿದೆ. ಪುರುಷರ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಿದ ಆಟಗಾರರು ನಾಲ್ಕು ಶತಕ ಗಳಿಸಿರುವುದು ಈ ವರೆಗಿನ ದಾಖಲೆ. ಒಟ್ಟು ಆರು ಪಂದ್ಯಗಳಲ್ಲಿ ಈ ಸಾಧನೆ ಆಗಿದೆ!

ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಆಟ ನೋಡುತ್ತ ಬೆಳೆದ ಶೆಫಾಲಿ ಹೆಣ್ಣುಮಕ್ಕಳು ಕ್ರಿಕೆಟ್ ಆಡಿದರೆ ಅಸಹ್ಯಪಡುತ್ತಿದ್ದ ತಮ್ಮೂರು ರೋಹ್ಟಕ್‌ನಲ್ಲಿ ಗಂಡುಮಕ್ಕಳೊಂದಿಗೆ ಆಡುವುದಕ್ಕಾಗಿ ಕೂದಲನ್ನು ಕತ್ತರಿಸಿಕೊಂಡು ‘ಹುಡುಗ’ನಾಗಿ ಕಣಕ್ಕೆ ಇಳಿದಿದ್ದರು. ತಂದೆ ಸಂಜೀವ್ ಕ್ರಿಕೆಟ್ ಪ್ರಿಯನಾಗಿದ್ದದ್ದು ಅವರ ಅದೃಷ್ಟ. ಈಗ ಅವರು ‘ಜಂಟಲ್‌ಮ್ಯಾನ್’ ಆಟದಲ್ಲಿ ಪುರುಷರಂತೆಯೇ ಬ್ಯಾಟಿಂಗ್ ಮಾಡುವ ಕಲೆ ರೂಢಿಸಿಕೊಂಡಿದ್ದಾರೆ.
95 ರನ್‌ ಗಳಿಸಿ ಒಟ್ಟಾರೆ ಮೂರು ವಿಕೆಟ್ ಉರುಳಿಸಿದ ಹೀಥರ್ ನೈಟ್ ಸೇರಿದಂತೆ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಪ್ರಮುಖ ಆಟಗಾರ್ತಿಯರನ್ನು ಹಿಂದಿಕ್ಕಿ ಶೆಫಾಲಿ ವರ್ಮಾ ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಜೂನ್ 27ರಂದು ಬ್ರಿಸ್ಟಲ್‌ನಲ್ಲಿ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಆಡುವ ತಂಡದಲ್ಲೂ ಶೆಫಾಲಿ ಇದ್ದಾರೆ. ಅದು ಕೂಡ ಅವರಿಗೆ ಚೊಚ್ಚಲ ಸರಣಿ. ಎರಡು ಮಾದರಿಗಳಲ್ಲಿ ಮಿಂಚು ಹರಿಸಿರುವ ಅವರು ಏಕದಿನ ಕ್ರಿಕೆಟ್ ‍ಪಂದ್ಯಗಳನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬ ಕುತೂಹಲ ಕ್ರಿಕೆಟ್ ಜಗತ್ತಿನಲ್ಲಿ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು