ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

Mayank Agarwal: ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್‌ ಅಸ್ವಸ್ಥ; ಆಗಿದ್ದೇನು?

Published : 30 ಜನವರಿ 2024, 13:04 IST
Last Updated : 30 ಜನವರಿ 2024, 13:04 IST
ಫಾಲೋ ಮಾಡಿ
0
Mayank Agarwal: ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್‌ ಅಸ್ವಸ್ಥ; ಆಗಿದ್ದೇನು?
ಮಯಂಕ್ ಅಗರವಾಲ್

ಬೆಂಗಳೂರು: ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಮಯಂಕ್ ಅಗರವಾಲ್ ಮಂಗಳವಾರ ದಿಢೀರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾ ಗಿದ್ದಾರೆ. ಮಂಗಳವಾರ ನವದೆಹಲಿಯ ಮೂಲಕ ಸೂರತ್‌ಗೆ ತೆರಳುವ ವಿಮಾನದಲ್ಲಿ ಅವರು ಪಾನೀಯ ಸೇವಿಸಿದ್ದರಿಂದ ಅಸ್ವಸ್ಥರಾದರೆನ್ನಲಾಗಿದೆ.

ADVERTISEMENT
ADVERTISEMENT

ಆದರೆ ಅವರು ಯಾವ ಪಾನೀಯ ಅಥವಾ ನೀರು  ಸೇವನೆ ಮಾಡಿದ್ದಾರೆನ್ನುವುದು ತಿಳಿದುಬಂದಿಲ್ಲ. 32 ವರ್ಷದ ಮಯಂಕ್ ಅವರನ್ನು ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಪ್ರಾಣಾಪಾಯವಿಲ್ಲವೆಂದು ಮೂಲಗಳು ತಿಳಿಸಿವೆ.

ಸೋಮವಾರ ಇಲ್ಲಿ ಮುಕ್ತಾಯ ಗೊಂಡ ರಣಜಿ ಪಂದ್ಯದಲ್ಲಿ ಮಯಂಕ್ ನೇತೃತ್ವದ ಕರ್ನಾಟಕ ತಂಡವು ತ್ರಿಪುರಾ ಎದುರು ಜಯಿಸಿತ್ತು. ಮುಂದಿನ ಪಂದ್ಯ ಆಡಲು ಮಂಗಳವಾರ ನವದೆಹಲಿ ಮೂಲಕ ಸೂರತ್‌ಗೆ ತೆರಳಲು ತಂಡವು ಪ್ರಯಾಣ ಆರಂಭಿಸಿತ್ತು. ಆದರೆ ವಿಮಾನ ಹತ್ತಿದ ನಂತರ ಈ ಘಟನೆ ನಡೆಯಿತು.

‘ಮಯಂಕ್ ಅವರಿಗೆ 24 ಗಂಟೆಗಳವರೆಗೆ ಮಾತನಾಡಲು ಸಾಧ್ಯವಾಗದು. ಅವರು ಏನು ಸೇವನೆ ಮಾಡಿದ್ದರು ಎಂಬುದರ ಕುರಿತು ವೈದ್ಯರೂ ಖಚಿತವಾಗಿ ತಿಳಿಸಿಲ್ಲ’ ಎಂದು ತಂಡದ ವ್ಯವಸ್ಥಾಪಕರು ತಿಳಿಸಿದ್ದಾರೆ.

ADVERTISEMENT

‘ವಿಮಾನದಲ್ಲಿ ಮಯಂಕ್ ಇದ್ದಕ್ಕಿದ್ದಂತೆ ತಮ್ಮ ಬಾಯಿ ಮತ್ತು ಗಂಟಲು ಉರಿಯುತ್ತಿರುವುದಾಗಿ ಹೇಳಿದರು. ಅವರು ತುಂಬಾ ನೋವು ಅನುಭವಿಸಿದ್ದರು. ನಮಗೆ ಸ್ಥಿತಿ ಗಂಭೀರ ಎನಿಸಿ ವಿಮಾನದ ಸಿಬ್ಬಂದಿಗೆ ತಿಳಿಸಿದೆವು. ಅವರು ಕೂಡಲೇ ಆಸ್ಪತ್ರೆಗೆ ಕಳಿಸಿದರು’ ಎಂದು ಅವರು ಹೇಳಿದರು.

ಮಯಂಕ್ ಅವರು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಮುಖ್ಯಸ್ಥ ಪ್ರವೀಣ ಸೂದ್ ಅವರ ಅಳಿಯ ಕೂಡ ಹೌದು.

‘ಮಧ್ಯಾಹ್ನ ವಿಮಾನವು ಟೇಕ್‌ ಆಫ್‌ ಅಗಲು ಸಿದ್ಧವಾಗಿತ್ತು. ವಿಮಾನದ ಕ್ಯಾಪ್ಟನ್  ಸೀಟ್‌ ಬೆಲ್ಟ್‌ ಕಟ್ಟಿಕೊಳ್ಳುವಂತೆ ಎಲ್ಲ ಪ್ರಯಾಣಿಕರಿಗೂ ಸೂಚಿಸಿದ್ದರು.  ಅದೇ ಸಂದರ್ಭದಲ್ಲಿ ಎದ್ದುನಿಂತ ಮಯಂಕ್ ತಾವು ತುರ್ತಾಗಿ ಶೌಚಾಲಯಕ್ಕೆ ಹೋಗಬೇಕೆಂದು ಕೂಗತೊಡಗಿದರು. ಅದರಿಂದಾಗಿ ವಿಮಾನದ ಸಿಬ್ಬಂದಿ ಅವರತ್ತ ಧಾವಿಸಿ ವಿಮಾನದೊಳಗಿನ ಶೌಚಾಲಯಕ್ಕೆ ಕರೆದೊಯ್ದರು. ಆದರೆ ಅವರ ಸ್ಥಿತಿ ಗಂಭೀರವೆಂದು ಪರಿಗಣಿಸಿದ ಸಿಬ್ಬಂದಿಯು ಕೂಡಲೇ ಅಂಬುಲೆನ್ಸ್‌ ಕರೆಸಿದರು. ಮಯಂಕ್ ಅವರನ್ನು ಅಸ್ಪತ್ರೆಗೆ ಕಳಿಸಿಕೊಟ್ಟರು. ವಿಮಾನದಲ್ಲಿದ್ದಾಗಲೇ ಮಯಂಕ್ ಎರಡು ಬಾರಿ ವಾಂತಿ ಮಾಡಿಕೊಂಡಿದ್ದರು‘ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

‘ನಾವು ಮಯಂಕ್ ಸುತ್ತಮುತ್ತ ಇರಲಿಲ್ಲ. ಅವರಿಂದ ಸ್ವಲ್ಪ ದೂರದ ಆಸನದಲ್ಲಿ ಕುಳಿತಿದ್ದೆ. ಮಯಂಕ್ ಎದ್ದು  ಕೂಗತೊಡಗಿದರು. ಏನಾಯಿತು ಎಂದು ನಾನು ವಿಚಾರಿಸಿದಾಗ ತಮ್ಮ ಕೈನ ಹೆಬ್ಬೆರಳನ್ನು ಬಾಯಿಯತ್ತ ಇಟ್ಟು ತೋರಿಸಿದರು. ಆಗ ವಿಮಾನ ಸಿಬ್ಬಂದಿ ಅವರ ಬಳಿಗೆ ಬಂದು ನೆರವು ನೀಡಿದರು. ನಮ್ಮಲ್ಲಿ ಯಾರನ್ನೂ ಅವರ ಸನಿಹಕ್ಕೆ ತೆರಳಲು ಬಿಡಲಿಲ್ಲ. ಅಲ್ಲಿ ನಡೆಯುವುದನ್ನು ನೋಡುತ್ತ ಕುಳಿತೆವು‘ ಎಂದು ತಂಡದ ಸದಸ್ಯರೊಬ್ಬರು ಪತ್ರಿಕೆಗೆ ತಿಳಿಸಿದರು.

‘ತಮ್ಮ ಮುಂದಿನ ಬಾಟಲಿಯಲ್ಲಿ ನೀರಿನಂತಿದ್ದ ಪಾನೀಯವನ್ನು ಮಯಂಕ್ ಕುಡಿದರು. ನಂತರ ಗಾಬರಿಯಿಂದ ಕೂಗತೊಡಗಿದರೆಂದು ಮಯಂಕ್ ಅಕ್ಕಪಕ್ಕ ಕುಳಿತ ಸಹಪ್ರಯಾಣಿಕರು ಹೇಳಿದರು’ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಉಳಿದ ಆಟಗಾರರು

ಮಯಂಕ್ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಕ್ರಿಯೆಯ ನಂತರ ವಿಮಾನವು ದೆಹಲಿಗೆ ತೆರಳಿತು. ಅದರೆ  ವಿಮಾನವು ದೆಹಲಿ ತಲುವುದು ವಿಳಂಬವಾಯಿತು.  ಅಲ್ಲಿಂದ ಸೂರತ್‌ಗೆ ತಂಡದ ಆಟಗಾರರು ತೆರಳಬೇಕಿದ್ದ ವಿಮಾನವೂ ಹೋಗಿಯಾಗಿತ್ತು. ಆದ್ದರಿಂದ ಮಂಗಳವಾರ ರಾತ್ರಿ ಕರ್ನಾಟಕದ ಆಟಗಾರರು ನವದೆಹಲಿಯಲ್ಲಿ ಉಳಿಯಬೇಕಾಯಿತು. ಬುಧವಾರ ಸೂರತ್‌ಗೆ ಪ್ರಯಾಣಿಸಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. 

ಬೆಂಗಳೂರಿಗೆ ಮಯಂಕ್?: ಮಯಂಕ್  ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ. ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

ದೂರು ದಾಖಲು; ಪೊಲೀಸ್ ತನಿಖೆ

ಬೆಂಗಳೂರು: 'ಮಯಂಕ್ ಅಗರವಾಲ್ ಅವರು ವಿಮಾನದಲ್ಲಿ ತಮ್ಮ ಆಸನದ ಮುಂದಿನ ಪೌಚ್‌ನಲ್ಲಿದ್ದ ದ್ರವವನ್ನು ನೀರು ಎಂದುಕೊಂಡು ಕುಡಿದಿದ್ದಾರೆ. ಬಾಯಿಯಲ್ಲಿ ಉರಿ ಮತ್ತು ಬಾವು ಉಂಟಾಗಿದೆ. ಬೊಬ್ಬೆಗಳೂ ಬಂದಿವೆ. ಈಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಮ್ಯಾನೇಜರ್ ದೂರು ನೀಡಿದ್ದು, ದಾಖಲಿಸಿಕೊಂಡಿದ್ದೇವೆ. ಈ ಕುರಿತು ಸಮಗ್ರವಾಗಿ ತನಿಖೆ ಮಾಡಲಾಗುವುದು’ ಎಂದು ತ್ರಿಪುರಾ ಪೂರ್ವ ವಲಯದ ಎಸ್ಪಿ ಕೆ. ಕಿರಣಕುಮಾರ್ ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ತ್ರಿಪುರ ರಾಜ್ಯದ ಆರೋಗ್ಯ ಇಲಾಖೆ ಕಾರ್ಯದರ್ಶಿ ಕಿರಣ ಗಿತ್ತೆ, ‘ವಿಮಾನ ಪ್ರಯಾಣದ ಸಂದರ್ಭದಲ್ಲಿ ಮಯಂಕ್ ಅವರು ಆಕಸ್ಮಿಕವಾಗಿ ವಾಟರ್ ಪೌಚ್ ಎಂದು ಸೇವಿಸಿದ್ದಾರೆ. ತತ್‌ಕ್ಷಣ ಅವರಿಗೆ ಬಾಯಿಯಲ್ಲಿ ಉರಿಯೂತ ಉಂಟಾಗಿದೆ. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ’ ಎಂದಿದ್ದಾರೆ.

ತಂಡಕ್ಕೆ ಪಾಂಡೆ: ಅನುಭವಿ ಆಟಗಾರ ಮನೀಷ್ ಪಾಂಡೆ ಅವರು ಕರ್ನಾಟಕ ತಂಡವನ್ನು ಬುಧವಾರ ಸೇರಿಕೊಳ್ಳಲಿದ್ದಾರೆ. ಸೂರತ್‌ನಲ್ಲಿ ರೇಲ್ವೆಸ್‌ ತಂಡದ ಎದುರು ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಮನೀಷ್ ಮುನ್ನಡೆ ಸುವ ಸಾಧ್ಯತೆ ಇದೆ. ಮೈಸೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಮನೀಷ್ ಗಾಯಗೊಂಡಿದ್ದರು. ಆದ್ದರಿಂದ ತ್ರಿಪುರ ವಿರುದ್ಧ ಆಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0