ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup | ಕಮಿನ್ಸ್‌ ಹ್ಯಾಟ್ರಿಕ್: ಆಸ್ಟ್ರೇಲಿಯಾಗೆ ಭರ್ಜರಿ ಜಯ

ಮಳೆಯ ಆಟ ಕಂಡ ಪಂದ್ಯದಲ್ಲಿ ವಾರ್ನರ್‌ ಅಜೇಯ ಅರ್ಧಶತಕ
Published 21 ಜೂನ್ 2024, 13:28 IST
Last Updated 21 ಜೂನ್ 2024, 13:28 IST
ಅಕ್ಷರ ಗಾತ್ರ

ನಾರ್ತ್‌ ಸೌಂಡ್‌ (ಆ್ಯಂಟಿಗಾ): ಅನುಭವಿ ವೇಗದ ಬೌಲರ್ ಪ್ಯಾಟ್‌ ಕಮಿನ್ಸ್‌ ಹಾಲಿ ಟಿ20 ವಿಶ್ವಕಪ್ ಕ್ರಿಕೆಟ್‌  ಟೂರ್ನಿಯ ಮೊದಲ ಹ್ಯಾಟ್ರಿಕ್ ಸಾಧಿಸಿದರೆ, ಸ್ಪಿನ್ನರ್ ಆ್ಯಡಂ ಜಂಪಾ ಕರಾರುವಾಕ್‌ ಬೌಲಿಂಗ್ ಮಾಡಿದರು. ಶುಕ್ರವಾರ ಮಳೆಯ ಆಟ ಕಂಡ ಸೂಪರ್ ಎಂಟರ ಪಂದ್ಯದಲ್ಲಿ ಆಸ್ಟ್ರೇಲಿಯಾ ಡಕ್‌ವರ್ತ್‌ ಲೂಯಿಸ್‌ ಸಿಸ್ಟಂ ಆಧಾರದಲ್ಲಿ 28 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು.

ಆಸ್ಟ್ರೇಲಿಯಾ ಟಾಸ್‌ ಗೆದ್ದ ಮೇಲೆ ಮಧ್ಯಮ ಹಂತದ ಓವರುಗಳಲ್ಲಿ ಜಂಪಾ ಕರಾರುವಾಕ್ ಬೌಲಿಂಗ್ ಪ್ರದರ್ಶಿಸಿದರೆ, ಕಮಿನ್ಸ್‌ (29ಕ್ಕೆ3) ಕೊನೆಯ ಎರಡು ಓವರ್‌ಗಳ ಸತತ ಎಸೆತಗಳಲ್ಲಿ ಹ್ಯಾಟ್ರಿಕ್ ಪಡೆದರು. ಬಾಂಗ್ಲಾದೇಶ ಮೊದಲು ಆಡಿ 8 ವಿಕೆಟ್‌ಗೆ 140 ರನ್ ಗಳಿಸಿತು.

ಅನುಭವಿ ಡೇವಿಡ್‌ ವಾರ್ನರ್‌ (ಔಟಾಗದೇ 53, 35 ಎಸೆತ) ಅವರು ಬಿರುಸಿನ ಅರ್ಧ ಶತಕ ಗಳಿಸಿದರು. ಇದರಲ್ಲಿ ಐದು ಬೌಂಡರಿಗಳ ಜೊತೆಗೆ ಮೂರು ಸಿಕ್ಸರ್‌ಗಳಿದ್ದವು. ಟ್ರಾವಿಸ್‌ ಹೆಡ್‌ (31, 21ಎ) ಜೊತೆ ವಾರ್ನರ್‌ ಆರಂಭದಿಂದಲೇ ಆಕ್ರಮಣಕ್ಕಿಳಿದರು. ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದಾಗ ಆಸ್ಟ್ರೇಲಿಯಾ 6.2 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 64 ರನ್ ಗಳಿಸಿತ್ತು.

ಆಟ ಪುನರಾರಂಭವಾದ ಬಳಿಕ ಯುವ ಸ್ಪಿನ್ನರ್‌ ರಿಷದ್‌ ಹುಸೇನ್ ಐದು ರನ್‌ಗಳ ಅಂತರದಲ್ಲಿ ಹೆಡ್‌ ಮತ್ತು ನಾಯಕ ಮಿಚೆಲ್ ಮಾರ್ಷ್ (1) ಅವರ ವಿಕೆಟ್‌ಗಳನ್ನು ಪಡೆದರು. ಆದರೆ ವಾರ್ನರ್ ಇನ್ನೊಂದೆಡೆ ಬಿರುಸಿನ ಆಟ ಮುಂದುವರಿಸಿದರು.

ಎರಡನೇ ಬಾರಿ ಮಳೆ ಶುರುವಾದಾಗ ಆಸ್ಟ್ರೇಲಿಯಾ 11.2 ಓವರುಗಳಲ್ಲಿ 2 ವಿಕೆಟ್‌ಗೆ 100 ರನ್ ಹೊಡೆದಿತ್ತು. ಡಿಎಲ್‌ಎಸ್‌ ಪ್ರಕಾರ ಆಸ್ಟ್ರೇಲಿಯಾ ಆ ವೇಳೆ ಗಳಿಸಬೇಕಾಗಿದ್ದ ರನ್‌ 72.

ಇದಕ್ಕೆ ಮೊದಲು ಮಿಚೆಲ್‌ ಸ್ಟಾರ್ಕ್‌, ಮೊದಲ ಓವರ್‌ನಲ್ಲೇ ತಂಜಿದ್ ಹಸನ್ ವಿಕೆಟ್ ಪಡೆದು ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ನೀಡಿದರು. ವಿಶ್ವಕಪ್‌ನಲ್ಲಿ ಅವರು ಅತ್ಯಧಿಕ (95 ವಿಕೆಟ್‌) ಪಡೆದಂತಾಯಿತು. ಲಸಿತ್ ಮಾಲಿಂಗ (94) ಎರಡನೇ ಸ್ಥಾನಕ್ಕೆ ಸರಿದರು.

ಲಿಟನ್ ದಾಸ್‌ (16) ಮತ್ತು ನಜ್ಮುಲ್ ಹುಸೇನ್ ಶಾಂತೊ (41) ಅವರು ಎರಡನೇ ವಿಕೆಟ್‌ಗೆ 58 ರನ್ ಸೇರಿಸಿದರು. ಆದರೆ ಜಂಪಾ ದಾಳಿಗಿಳಿದ ಮೊದಲ (ಇನಿಂಗ್ಸ್‌ನ 9ನೇ) ಓವರ್‌ನಲ್ಲೇ ದಾಸ್‌ ಅವರನ್ನು ಎಲ್‌ಬಿ ಬಲೆಗೆ ಕೆಡವಿ ಈ ಜೊತೆಯಾಟ ಮುರಿದರು. ಜಂಪಾ ಮತ್ತು ಮ್ಯಾಕ್ಸ್‌ವೆಲ್‌ ಎದುರಾಳಿಗಳಿಗೆ ಕಡಿವಾಣ ಹಾಕಿದರು. ಕೊನೆಯಲ್ಲಿ ತೌಹಿದ್‌ ಹೃದಯ್‌ (40, 28ಎ) ಅವರು ಬಾಂಗ್ಲಾದೇಶ ತಂಡ 100ರ ಗಡಿದಾಟಲು ನೆರವಾದರು. ಸ್ಟೊಯಿನಿಸ್‌ ಬೌಲಿಂಗ್‌ನಲ್ಲಿ ಬೆನ್ನುಬೆನ್ನಿಗೆ ಎರಡು ಸಿಕ್ಸರ್ ಎತ್ತಿದರು.

ಆದರೆ ಇನಿಂಗ್ಸ್‌ನ ಕೊನೆಯಲ್ಲಿ ಹ್ಯಾಟ್ರಿಕ್ ಸಾಧಿಸುವ ಮೂಲಕ ಕಮಿನ್ಸ್‌ 150ರ ಆಚೆ ಮೊತ್ತ ಒಯ್ಯುವ ಬಾಂಗ್ಲಾ ಕನಸಿಗೆ ಅಡ್ಡಿಯಾದರು. 18ನೇ ಓವರಿನ ಕೊನೆಯ ಎರಡು ಎಸೆತಗಳಲ್ಲಿ ಕ್ರಮವಾಗಿ ಮಹಮುದುಲ್ಲಾ ಮತ್ತು ಮಹೆದಿ ಹಸನ್‌ ಅವರ ವಿಕೆಟ್‌ಗಳನ್ನು ಪಡೆದರು. ಕೊನೆಯ ಓವರಿನ ಮೊದಲ ಎಸೆತದಲ್ಲಿ ಹೃದಯ್ ಅವರ ವಿಕೆಟ್ ಗಳಿಸಿ ಹ್ಯಾಟ್ರಿಕ್ ಪೂರೈಸಿದರು.

ಸ್ಕೋರುಗಳು: ‌ಬಾಂಗ್ಲಾದೇಶ: 20 ಓವರುಗಳಲ್ಲಿ 8 ವಿಕೆಟ್‌ಗೆ 140 (ನಜ್ಮುಲ್ ಹಸನ್ ಶಾಂತೊ 41, ತೌಹಿದ್ ಹೃದೊಯ್ 40, ತಸ್ಕಿನ್ ಅಹ್ಮದ್ ಔಟಾಗದೇ 13; ಪ್ಯಾಟ್‌ ಕಮಿನ್ಸ್‌ 29ಕ್ಕೆ3, ಆ್ಯಡಂ ಜಂಪಾ 24ಕ್ಕೆ2); ಆಸ್ಟ್ರೇಲಿಯಾ: 11.2 ಓವರುಗಳಲ್ಲಿ 2 ವಿಕೆಟ್‌ಗೆ 100 (ಡೇವಿಡ್‌ ವಾರ್ನರ್‌ ಔಟಾಗದೇ 53, ಟ್ರಾವಿಸ್ ಹೆಡ್‌ 31, ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟಾಗದೇ  14; ರಿಷದ್ ಹುಸೇನ್ 23ಕ್ಕೆ2). ಪ್ಯಾಟ್‌ ಪಂದ್ಯದ ಆಟಗಾರ: ಪ್ಯಾಟ್ ಕಮಿನ್ಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT