ಮಂಗಳವಾರ, ಆಗಸ್ಟ್ 3, 2021
27 °C

‘ಮಂಕಿಗೇಟ್‌’ ನಂತರದ ನಿರ್ಧಾರ ಸವಾಲಿನದಾಗಿತ್ತು: ಕುಂಬ್ಳೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಾದಿತ ‘ಮಂಕಿಗೇಟ್’ ಪ್ರಕರಣದ ನಂತರ 2007ರ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸಾಗಲು ಅವಕಾಶವಿತ್ತು. ಆದರೆ ಹಾಗೆ ಮಾಡದೆ ಕ್ರೀಡಾಸ್ಫೂರ್ತಿ ಮೆರೆದ ತಂಡಕ್ಕೆ ನಂತರ ಒಳ್ಳೆಯದೇ ಆಯಿತು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.

2008ರ ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆ್ಯಂಡ್ರ್ಯೂ ಸೈಮಂಡ್ಸ್‌ ಅವರನ್ನು ‘ಮಂಕಿ’ ಎಂದು ಕರೆದು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಆರೋಪದ (ಮಂಕಿಗೇಟ್) ಮೇಲೆ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್‌ಗೆ ಮೂರು ಪಂದ್ಯಗಳ ನಿಷೇಧ ಹೇರಲಾಗಿತ್ತು. ಪ್ರಕರಣ ವಿವಾದ ಸೃಷ್ಟಿಸಿತ್ತು. ಆದರೂ ಸರಣಿಯನ್ನು ಮುಂದುವರಿಸಲು ನಿರ್ಧರಿಸಿದ ಭಾರತ ಒತ್ತಡದ ನಡುವೆಯೂ ಮುಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿತ್ತು.

ಪ್ರಕರಣದ ನಂತರ ಹರ್ಭಜನ್‌ಗೆ ನಿಷೇಧ ಹೇರಿದ್ದು ಮಾತ್ರವಲ್ಲ, ಪಂದ್ಯ ಶುಲ್ಕದ ಅರ್ಧ ಮೊತ್ತವನ್ನು ತಡೆಹಿಡಿಯಲಾಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಈ (ಐಸಿಸಿ) ತೀರ್ಪಿನ ವಿರುದ್ಧ ಭಾರತ ಮೇಲ್ಮನವಿ ಸಲ್ಲಿಸಿತ್ತು. ಹೀಗಾಗಿ ಸರಣಿಯನ್ನು ಅಲ್ಲಿಗೇ ಮುಕ್ತಾಯಗೊಳಿಸುವ ಕುರಿತ ಮಾತುಕತೆಗಳೂ ನಡೆದಿದ್ದವು.

‘ನಾಯಕನು ಅಂಗಣದಲ್ಲೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬದ್ಧನಾಗಿರಬೇಕು. ಆದರೆ ಮಂಕಿಗೇಟ್ ಪ್ರಕರಣದಲ್ಲಿ ಅಂಗಣದ ಆಚೆಯೂ ಸೂಕ್ತ ನಿರ್ಧಾರ ಕೈಗೊಳ್ಳುವ ಸವಾಲು ಎದುರಾಗಿತ್ತು. ಅದರಲ್ಲಿ ಕ್ರೀಡೆಯ ಮಹತ್ವವನ್ನು ಉಳಿಸುವ ಸವಾಲು ಕೂಡ ಇತ್ತು. ಹಿಂದಿರುಗಲು ತೀರ್ಮಾನಿಸಿದರೆ ಭಾರತ ತಂಡ ತಪ್ಪು ಎಸಗಿತ್ತು, ಆದ್ದರಿಂದ ವಾಪಸಾಗಿದೆ ಎಂದು ಜನರು ಹೇಳುತ್ತಿದ್ದರು’ ಎಂದು ರವಿಚಂದ್ರನ್ ಅಶ್ವಿನ್ ಅವರ ಯೂ ಟ್ಯೂಬ್ ಚಾನಲ್‌ ಷೋ ‘ಡಿಆರ್‌ಎಸ್‌ ವಿಥ್ ಆ್ಯಶ್’ ಕಾರ್ಯಕ್ರಮದಲ್ಲಿ ಕುಂಬ್ಳೆ ಹೇಳಿದರು.

ಸಿಡ್ನಿ ಟೆಸ್ಟ್‌ನಲ್ಲಿ ಅಂಪೈರ್‌ಗಳ ತೀರ್ಪಿನಲ್ಲೂ ಕೆಲವು ಲೋಪಗಳು ಆಗಿದ್ದವು ಎಂದು ಆ ಟೆಸ್ಟ್‌ನ ಅಂಪೈರ್‌ಗಳ ಪೈಕಿ ಒಬ್ಬರಾಗಿದ್ದ ಸ್ಟೀವ್ ಬಕ್ನರ್ ಈಚೆಗೆ ಒಪ್ಪಿಕೊಂಡಿದ್ದರು. ಸರಣಿಯ ಮೊದಲ ಪಂದ್ಯದಲ್ಲಿ ಭಾರತ 337 ರನ್‌ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ 122 ರನ್‌ಗಳಿಂದ ಸೋತಿತ್ತು. ಆದರೆ ಮೂರನೇ ಟೆಸ್ಟ್‌ನಲ್ಲಿ 72 ರನ್‌ಗಳಿಂದ ಗೆಲುವು ಸಾಧಿಸಿತ್ತು. ನಾಲ್ಕನೇ ಮತ್ತು ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

‘ಸರಣಿ ಗೆಲುವಿನ ಕನಸು ಕಂಡು ಆಸ್ಟ್ರೇಲಿಯಾಗೆ ತೆರಳಿದ್ದೆವು. ಮೊದಲ ಎರಡು ಪಂದ್ಯಗಳ ಫಲಿತಾಂಶಗಳು ನಮಗೆ ಪೂರಕವಾಗಿರಲಿಲ್ಲ. ಸರಣಿಯನ್ನು ಸಮ ಮಾಡಿಕೊಳ್ಳಲು ನಂತರವೂ ಅವಕಾಶವಿತ್ತು. ಆದ್ದರಿಂದ ವಾಪಸಾಗದೇ ಮುಂದುವರಿಯಲು ನಿರ್ಧರಿಸಿದೆ’ ಎಂದು ಅವರು ತಿಳಿಸಿದರು.

2007ರಲ್ಲಿ ರಾಹುಲ್ ದ್ರಾವಿಡ್ ನಂತರ ಭಾರತ ತಂಡದ ನಾಯಕತ್ವ ವಹಿಸಿದ್ದ ಅನಿಲ್ ಕುಂಬ್ಳೆ ಅವರು ತಂಡವನ್ನು 14 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು ಅವರ ಮುಂದಾಳುತ್ವದಲ್ಲಿ ಮೂರು ಪಂದ್ಯಗಳನ್ನು ಭಾರತ ಜಯಿಸಿದೆ. ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು ಐದು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು