ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಗೆ ಮುನ್ನಡೆ ತಂದುಕೊಟ್ಟ ಗಂಭೀರ್‌

Last Updated 8 ಡಿಸೆಂಬರ್ 2018, 16:54 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಆಟಗಾರ ಗೌತಮ್‌ ಗಂಭೀರ್‌ ತಾವು ಆಡಿ ಬೆಳೆದ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಶನಿವಾರ ಶತಕ ಸಿಡಿಸಿ ವಿದಾಯದ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಗಂಭೀರ್‌ ಅವರ ಕಲಾತ್ಮಕ ಆಟದ ನೆರವಿನಿಂದ ದೆಹಲಿ ತಂಡ ಆಂಧ್ರ ಎದುರಿನ ರಣಜಿ ಟ್ರೋಫಿ ಎಲಿಟ್‌ ‘ಬಿ’ ಗುಂಪಿನ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಗಳಿಸಿತು.

ಒಂದು ವಿಕೆಟ್‌ಗೆ 190ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ದೆಹಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 144 ಓವರ್‌ಗಳಲ್ಲಿ 7 ವಿಕೆಟ್‌ಗೆ 409ರನ್‌ ಗಳಿಸಿದೆ.

ಶುಕ್ರವಾರ 92ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಗಂಭೀರ್‌, ಮೂರನೇ ದಿನದಾಟದ ಮೊದಲ ಅವಧಿಯಲ್ಲಿ ಶತಕದ ಸಂಭ್ರಮ ಆಚರಿಸಿದರು. 185 ಎಸೆತಗಳನ್ನು ಎದುರಿಸಿದ ಗಂಭೀರ್‌ 10 ಬೌಂಡರಿ ಸಹಿತ 112ರನ್‌ ಗಳಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು.

67ನೇ ಓವರ್‌ನಲ್ಲಿ ಶೋಯಬ್‌ ಮೊಹಮ್ಮದ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದ ‘ಗೌತಿ’, ಪೆವಿಲಿಯನ್‌ನತ್ತ ಹೆಜ್ಜೆ ಹಾಕುವ ಮುನ್ನ ನಾಯಕ ಧ್ರುವ ಶೋರೆ (98; 259ಎ, 6ಬೌಂ) ಜೊತೆ ಅಮೋಘ ಜೊತೆಯಾಟ ಆಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 113ರನ್‌ ಸೇರಿಸಿತು.

ವೈಭವ್‌ ರಾವಲ್‌ (33; 107ಎ, 2ಬೌಂ), ಜಾಂಟಿ ಸಿಧು (30; 79ಎ, 3ಬೌಂ) ಮತ್ತು ಲಲಿತ್‌ ಯಾದವ್‌ (29; 63ಎ, 4ಬೌಂ) ಅವರು ಆತಿಥೇಯರ ಮೊತ್ತ 400ರ ಗಡಿ ದಾಟಲು ನೆರವಾದರು.

ಉತ್ತರ ಪ್ರದೇಶಕ್ಕೆ ಜಯ: ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ಆತಿಥೇಯ ಜಮ್ಮು ಮತ್ತು ಕಾಶ್ಮೀರ ಎದುರಿನ ‘ಸಿ’ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶ 6 ವಿಕೆಟ್‌ಗಳಿಂದ ಗೆದ್ದಿತು.

ವಡೋದರದ ಮೋತಿ ಬಾಗ್‌ ಕ್ರೀಡಾಂಗಣದಲ್ಲಿ ನಡೆದ ಛತ್ತೀಸಗಡ ಎದುರಿನ ‘ಎ’ ಗುಂಪಿನ ಹಣಾಹಣಿಯಲ್ಲಿ ಬರೋಡ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿತು.

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಜರುಗಿದ ಅಸ್ಸಾಂ ವಿರುದ್ಧದ ‘ಸಿ’ ಗುಂಪಿನ ಪೈಪೋಟಿಯಲ್ಲಿ ರಾಜಸ್ಥಾನ ತಂಡ ಇನಿಂಗ್ಸ್‌ ಮತ್ತು 43ರನ್‌ಗಳಿಂದ ವಿಜಯಿಯಾಯಿತು.

ಪಟ್ನಾದ ಮೋಯಿನ್‌ ಉಲ್‌ ಹಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಹಾರ ತಂಡ ಇನಿಂಗ್ಸ್‌ ಮತ್ತು 317ರನ್‌ಗಳಿಂದ ಅರುಣಾಚಲ ಪ್ರದೇಶ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್‌: ದೆಹಲಿ: ಮೊದಲ ಇನಿಂಗ್ಸ್‌, 144 ಓವರ್‌ಗಳಲ್ಲಿ 7 ವಿಕೆಟ್‌ಗೆ 409 (ಗೌತಮ್‌ ಗಂಭೀರ್‌ 112, ಧ್ರುವ ಶೋರೆ 98, ವೈಭವ್‌ ರಾವಲ್‌ 33, ಜಾಂಟಿ ಸಿಧು 30, ಲಲಿತ್‌ ಯಾದವ್‌ 29, ಅನುಜ್‌ ರಾವತ್‌ 28; ಮನೀಷ್‌ ಗೋಲಾಮರು 126ಕ್ಕೆ3, ಶೋಯಬ್‌ ಮೊಹಮ್ಮದ್‌ ಖಾನ್‌ 138ಕ್ಕೆ3).

ಆಂಧ್ರ: ಪ್ರಥಮ ಇನಿಂಗ್ಸ್‌: 121 ಓವರ್‌ಗಳಲ್ಲಿ 390.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT