ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಏಕದಿನ ವಿಶ್ವಕಪ್: ಫೈನಲ್ ಸೋತರೂ ಗಮನ ಸೆಳೆದ ಯುವ ತಾರೆಗಳು

Published 12 ಫೆಬ್ರುವರಿ 2024, 15:41 IST
Last Updated 12 ಫೆಬ್ರುವರಿ 2024, 15:41 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡ 19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ನಿರಾಶೆ ಅನುಭವಿಸಿರಬಹುದು. ಆದರೆ ಕೆಲವು ಆಟಗಾರರು ಉತ್ತಮ ಪ್ರದರ್ಶನದಿಂದ ಕ್ರಿಕೆಟ್‌ಪ್ರೇಮಿಗಳ ಹೃದಯಗೆದ್ದಿದ್ದಾರೆ. ಅಷ್ಟೇ ಅಲ್ಲ, ಸ್ಥಿರ ಪ್ರದರ್ಶನ ನೀಡಿ ಭವಿಷ್ಯದ ತಾರೆಗಳಾಗುವ ಸಂಕೇತಗಳನ್ನೂ ನೀಡಿದ್ದಾರೆ.

ಐದು ಬಾರಿಯ ಚಾಂಪಿಯನ್ ಭಾರತ ಸೆಮಿಫೈನಲ್‌ವರೆಗೆ ಅಮೋಘ ಸಾಧನೆ ತೋರಿದ್ದರೂ, ಭಾನುವಾರ ಫೈನಲ್‌ನಲ್ಲಿ 79 ರನ್‌ಗಳಿಂದ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿದ ಕೆಲವು ಆಟಗಾರರು:

ನಾಯಕ ಉದಯ್ ಸಹಾರನ್ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿಂದ ಬ್ಯಾಟ್ ಮಾಡಿದರು. ಸ್ಥಿರ ಪ್ರದರ್ಶನದಿಂದ ಭಾರತದ ಬ್ಯಾಟಿಂಗ್ ಸರದಿಯ ಬೆನ್ನೆಲುಬಾದರು. ತಂಡ ಆರಂಭಿಕ ಕುಸಿತ ಕಂಡಾಗ, ಎಚ್ಚರಿಕೆ ಮಿಶ್ರಿತ ಆಕ್ರಮಣದ ಆಟದೊಡನೆ ಇನಿಂಗ್ಸ್‌ಗೆ ಲಂಗರುಹಾಕಿದರು. ಉಪಯುಕ್ತ ಜೊತೆಯಾಟಗಳ ಮೂಲಕ ಗೆಲುವಿಗೆ ನೆರವಾದರು.

ಅವರು 397 ರನ್‌ಗಳೊಡನೆ ಟೂರ್ನಿಯ ಯಶಸ್ವಿ ಬ್ಯಾಟರ್ ಎನಿಸಿದರು. ಕ್ರಿಕೆಟ್ ಜೀವನ ಕಂಡುಕೊಳ್ಳಲು ರಾಜಸ್ತಾನದ ಗಂಗಾನಗರದ ಈ ಯುವಕ ಕೆಲ ವರ್ಷಗಳಿಂದ ಪಂಜಾಬ್‌ನಲ್ಲಿ ನೆಲೆಸಿದ್ದಾರೆ.

‌ಮಹಾರಾಷ್ಟ್ರದ ಬೀಡ್‌ನ ಯುವಕ ಸಚಿನ್ ದಾಸ್‌ ಆಕ್ರಮಣಕಾರಿ ಆಟವಾಡುವ ಮೂಲಕ ಕೆಲ ಪಂದ್ಯಗಳಲ್ಲಿ ‘ಫಿನಿಷರ್’ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ರಿಸ್ಕ್‌ ಇದ್ದರೂ ಧೈರ್ಯದಿಂದ ಆಡಿದ ಅವರು  ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐವರು ಆಟಗಾರರಲ್ಲಿ ಸ್ಥಾನ ಪಡೆದರು. ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ತಂಡ 32 ರನ್ನಿಗೆ 4 ವಿಕೆಟ್  ಕಳೆದುಕೊಂಡಿದ್ದಾಗ 96 ರನ್‌ಗಳ ಆಟ ಗೆಲುವಿಗೆ ದಾರಿಮಾಡಿಕೊಟ್ಟಿತ್ತು.

ಮಧ್ಯಮ ಕ್ರಮಾಂಕದ ಮತ್ತೊಬ್ಬ ಆಟಗಾರ ಮುಶೀರ್ ಖಾನ್ ನಾಕೌಟ್‌ಗೆ ಮೊದಲಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಣ ನೀಡಿ ಎರಡು ಶತಕ, ಒಂದು ಅರ್ಧಶತಕ ಸೇರಿದಂತೆ 360 ರನ್ ಬಾರಿಸಿದ್ದರು. ಮುಶೀರ್ ಸಹೋದರ ಸರ್ಫರಾಜ್ ಇಂಗ್ಲೆಂಡ್ ವಿರುದ್ಧ ಸರಣಿಯಾಡುವ ತಂಡಕ್ಕೆ ಆಯ್ಕೆಯಾಗಿದ್ದರು. ಮಕ್ಕಳಿಬ್ಬರ ಕ್ರಿಕೆಟ್‌ ಬದುಕಿನ ಯಶಸ್ಸಿನಲ್ಲಿ ತಂದೆ ನೌಶಾದ್ ಅವರ ಪಾತ್ರ ಪ್ರಮುಖವಾದುದು.

ಎಡಗೈ ಸ್ಪಿನ್ನರ್ ಸೌಮಿ ಪಾಂಡೆ ರಾಜಸ್ತಾನದ ಭರತಪುರದ ಶಿಕ್ಷಕರೊಬ್ಬರ ಪುತ್ರ. ತಮ್ಮ ಎಗಡೈ ಸ್ಪಿನ್ನ ದಾಳಿಯಲ್ಲಿ ಅವರು 18 ವಿಕೆಟ್ ಗಳಿಸಿ ತಂಡದ ಪರ ಅತ್ಯಧಿಕ ವಿಕೆಟ್‌ಗಳನ್ನು ಪಡೆದರು. ತಂದೆಯೇ ಅವರನ್ನು ಕ್ರಿಕೆಟ್‌ಗೆ ಪರಿಚಯಿಸಿದ್ದರು.

ಮಹಾರಾಷ್ಟ್ರದ ಸೊಲ್ಲಾಪುರದ ಆಲ್‌ರೌಂಡರ್‌ ಅರ್ಷಿನ್ ಕುಲಕರ್ಣಿ, ಈ ವಿಶ್ವಕಪ್‌ಗೆ ಮೊದಲೇ ಐಪಿಎಲ್‌ ತಂಡಕ್ಕೆ ಆಯ್ಕೆಯಗಿದ್ದರು. ಬಿರುಸಿನ ಬ್ಯಾಟಿಂಗ್ ಜೊತೆಗೆ ಉಪಯುಕ್ತ ಮಧ್ಯಮ ವೇಗಿ. ಅವರನ್ನು ‘ಭವಿಷ್ಯದ ಹಾರ್ದಿಕ್ ಪಾಂಡ್ಯ’ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT