ಭಾನುವಾರ, ಜುಲೈ 25, 2021
24 °C

ಭಾರತ ತಂಡದ ಕ್ರಿಕೆಟ್ ತರಬೇತಿ ಶಿಬಿರಕ್ಕೆ ಧೋನಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಟ್ ಕೊಹ್ಲಿ ಮತ್ತು ಮಹೇಂದ್ರಸಿಂಗ್ ಧೋನಿ

ನವದೆಹಲಿ: ಸುದೀರ್ಘ ಲಾಕ್‌ಡೌನ್‌ ನಂತರ ಕ್ರಿಕೆಟ್‌ ಚಟುವಟಿಕೆಗಳಿಗೆ ಮುಂದಿನ ತಿಂಗಳಿನಿಂದ ಚಾಲನೆ ನೀಡಲು ಬಿಸಿಸಿಐ ಮುಂದಾಗಿದೆ. ಆರು ವಾರಗಳ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ.

ಈ ಶಿಬಿರದಲ್ಲಿ ಹಿರಿಯ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಭಾಗವಹಿಸುವರೇ ಎಂಬ ಕುತೂಹಲ ಗರಿಗೆದರಿದೆ. ಈ ವಿಷಯವು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಬ್ಬೊಬ್ಬರೂ ಒಂದೊಂದು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

‘ಟಿ20 ವಿಶ್ವಕಪ್ ಟೂರ್ನಿ ನಡೆಯುವ ಬಗ್ಗೆ ಇನ್ನೂ ಹೇಳಲಾಗುವುದಿಲ್ಲ. ಒಂದು ವೇಳೆ ಟೂರ್ನಿ ನಡೆಯುವುದು ಖಚಿತವಾದರೆ ಶಿಬಿರಕ್ಕೆ ಧೋನಿ ಸೇರ್ಪಡೆಗೊಳ್ಳುವ ಸಾಧ್ಯತೆಗಳು ಹೆಚ್ಚು. ಆದರೆ, ದ್ವಿಪಕ್ಷೀಯ ಸರಣಿಗಳಷ್ಟೇ ನಡೆಯುವುದಾದರೆ ಅವರು ಬರುವ ಸಾಧ್ಯತೆಗಳು ತೀರಾ ಕಡಿಮೆ. ಏಕೆಂದರೆ, ಈಗಾಗಲೇ ಕೆ.ಎಲ್. ರಾಹುಲ್, ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್‌ ಇದ್ದಾರೆ’ ಎಂದು ಭಾರತ ತಂಡದ ಆಯ್ಕೆ ಸಮಿತಿಯ ನಿಕಟಪೂರ್ವ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಹೇಳಿದ್ದಾರೆ.

‘ಈ ಶಿಬಿರದಲ್ಲಿ ಧೋನಿ ಭಾಗವಹಿಸಿದರೆ ಒಳ್ಳೆಯದು. ಯುವ ಆಟಗಾರರಿಗೆ ಅವರ ಮಾರ್ಗದರ್ಶನ ಲಭಿಸುತ್ತದೆ. ಆಟಗಾರರ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಯುವ ವಿಕೆಟ್‌ಕೀಪರ್‌ಗಳು ಅವರಿಂದ ಕಲಿಯುವುದು ಬಹಳಷ್ಟಿದೆ’ ಎಂದು ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

‘ನಾನೇನಾದರೂ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿದ್ದರೆ ಖಂಡಿತವಾಗಿಯೂ ನಮ್ಮ ತಂಡದಲ್ಲಿ ಧೋನಿ ಇರುತ್ತಿದ್ದರು. ಆದರೆ ಸ್ವತಃ ಮಹಿ ಆಡಲು ಇಚ್ಛಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಅಂತಿಮವಾಗಿ ಅವರ ನಿರ್ಧಾರವೇ ಮುಖ್ಯವಾಗುತ್ತದೆ’ ಎಂದು ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಹೇಳಿದ್ದಾರೆ.

‘ಶಿಬಿರದಲ್ಲಿ ಭರವಸೆಯ ಯುವ ಆಟಗಾರರಿಗೂ ಅವಕಾಶ ಕೊಡಬೇಕು. ಮುಂಬೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, 19 ವರ್ಷದೊಳಗಿನವರ ತಂಡದ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಯಶಸ್ವಿ ಜೈಸ್ವಾಲ್ ಅವರಿಗೆ ಕ್ಯಾಂಪ್‌ನಲ್ಲಿ ಭಾಗವಹಿಸಲು ಅವಕಾಶ ಸಿಗಬೇಕು. ಅದರಿಂದ ಅವರಿಗೆ ಹಿರಿಯ ಆಟಗಾರರ ಒಡನಾಟದ ಅವಕಾಶ ಸಿಗುತ್ತದೆ’ ಎಂದು ಹಿರಿಯ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಆಭಿಪ್ರಾಯಪಟ್ಟಿದ್ದಾರೆ.

‘ಧೋನಿ ಶಿಬಿರದಲ್ಲಿ ಭಾಗವಹಿಸುವಂತಾದರೆ ಆರು ವಾರಗಳ ಕಾಲದಲ್ಲಿ ಭವಿಷ್ಯದ ವಿಕೆಟ್‌ಕೀಪರ್‌ಗಳನ್ನು ಸಿದ್ಧಪಡಿಸುವ ವೇದಿಕೆಯಾಗುತ್ತದೆ. ಧೋನಿಯ ತಂತ್ರಗಳನ್ನು ನೋಡಿ ಕಲಿಯಲು ಯುವ ಆಟಗಾರರಿಗೆ ಅವಕಾಶ ಸಿಗುತ್ತದೆ. ಇಲ್ಲದಿದ್ದರೆ ಐಪಿಎಲ್‌ ನಡೆಯಬಹುದು. ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುವ ಧೋನಿಯು 500ಕ್ಕೂ ಹೆಚ್ಚು ರನ್‌ ಗಳಿಸಿದರೆ, ಮುಂದಿನ ಸರಣಿಗೆಳಿಗೆ ಅವರನ್ನು ನಿರ್ಲಕ್ಷಿಸಲು ಸಾಧ್ಯವೇ?’ ಎಂದು ಹಿರಿಯ ಕ್ರಿಕೆಟಿಗ ದೀಪ್‌ದಾಸ್‌ ಗುಪ್ತಾ ಕೇಳಿದ್ದಾರೆ. 

‘ಧೋನಿ ಕಳೆದ ಒಂದು ವರ್ಷದಿಂದ ಭಾರತ ತಂಡದಲ್ಲಿ ಆಡಿಲ್ಲ. ಅವರು ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿಯೂ ಇಲ್ಲ. ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಟಿ20 ಸರಣಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಒಂದೊಮ್ಮೆ ಅವರು ಈ ಶಿಬಿರಕ್ಕೆ ಬಂದರೆ ಅದು ಅಚ್ಚರಿಯ ಬೆಳವಣಿಗೆಯಾಗಲಿದೆ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು