ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL | ಆರ್‌ಸಿಬಿ ಬ್ಯಾಟಿಂಗ್ ಕೋಚ್, ಮೆಂಟರ್ ಆಗಿ ದಿನೇಶ್ ಕಾರ್ತಿಕ್ ನೇಮಕ

Published 1 ಜುಲೈ 2024, 6:37 IST
Last Updated 1 ಜುಲೈ 2024, 6:37 IST
ಅಕ್ಷರ ಗಾತ್ರ

ಬೆಂಗಳೂರು: ಟೀಮ್‌ ಇಂಡಿಯಾದ ಮಾಜಿ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕ ಮಾಡಲಾಗಿದೆ.

‘ನಮ್ಮ ಕೀಪರ್ ದಿನೇಶ್ ಕಾರ್ತಿಕ್ ಅವರು ಹೊಸ ಅವತಾರದಲ್ಲಿ ಆರ್‌ಸಿಬಿಗೆ ಮರಳಿದ್ದಾರೆ. ಡಿಕೆ ಆರ್‌ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿರುತ್ತಾರೆ’ ಎಂದು ಆರ್‌ಸಿಬಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

‘ನೀವು ಒಬ್ಬ ಮನುಷ್ಯನನ್ನು ಕ್ರಿಕೆಟ್‌ನಿಂದ ದೂರವಿಡಬಹುದು. ಆದರೆ, ಮನುಷ್ಯನಿಂದ ಕ್ರಿಕೆಟ್ ಅನ್ನು ದೂರ ಮಾಡಲು ಆಗುವುದಿಲ್ಲ. ದಿನೇಶ್ ಕಾರ್ತಿಕ್‌ಗೆ ಎಲ್ಲರ ಪ್ರೀತಿ ಇರಲಿ’ ಎಂದು ಆರ್‌ಬಿಸಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.

‘ಕ್ರಿಕೆಟ್ ಯಶಸ್ಸು ಕೇವಲ ತಾಂತ್ರಿಕ ಪ್ರಾವೀಣ್ಯತೆಯ ಮೇಲೆ ಮಾತ್ರವಲ್ಲದೆ ಬುದ್ಧಿವಂತಿಕೆ ಮತ್ತು ಪಂದ್ಯದ ಹಿಡಿತದ ಮೇಲೂ ಅವಲಂಬಿತವಾಗಿದೆ ಎಂದು ನಾನು ನಂಬುತ್ತೇನೆ. ಆರ್‌ಸಿಬಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲು ನಾನು ಉತ್ಸುಕನಾಗಿದ್ದೇನೆ’ ಎಂದು ದಿನೇಶ್ ಕಾರ್ತಿಕ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಎರಡು ದಶಕಗಳ ಕಾಲ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ದಿನೇಶ್ ಕಾರ್ತಿಕ್ ಅವರು ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಜೂನ್‌ 1ರಂದು ವಿದಾಯ ಹೇಳಿದ್ದರು.

ಐಪಿಎಲ್ ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ಕಾರ್ತಿಕ್ ತಮ್ಮ ನಿವೃತ್ತಿ ಬಗ್ಗೆ ನಿರ್ಧರಿಸಿದ್ದರು. ತಮ್ಮ 39ನೇ ಜನ್ಮದಿನದಂದು (ಜೂನ್ 1) ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದರು.

26 ಟೆಸ್ಟ್, 94 ಏಕದಿನ ಹಾಗೂ 60 ಟಿ20 ‍ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರು ಮಾದರಿಗಳಿಂದ 180 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಏಕೈಕ ಟೆಸ್ಟ್ ಶತಕ ಮತ್ತು 17 ಅರ್ಧಶತಕಗಳೊಂದಿಗೆ 3463 ರನ್ ಗಳಿಸಿದ್ದಾರೆ. 91 ಸ್ಟಂಪಿಂಗ್ ಮಾಡಿದ್ದಾರೆ.

2004ರಲ್ಲಿ ಅವರು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಎದುರಿನ ಏಕದಿನ ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ತಂಡದ ನಾಯಕ ಮೈಕೆಲ್ ವಾನ್ ಅವರನ್ನು ಮಿಂಚಿನ ಸ್ಪಂಪಿಂಗ್ ಮಾಡುವ ಮೂಲಕ ತಮ್ಮ ಚೊಚ್ಚಲ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡಿದ್ದರು.

ರೋಹಿತ್ ಶರ್ಮಾ ನಾಯಕತ್ವದಲ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಆಡಿದ್ದರು. ಈ ನಡುವೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT