ಗುರುವಾರ , ಫೆಬ್ರವರಿ 25, 2021
30 °C

ಮಹಿಳಾ ಕ್ರಿಕೆಟ್‌ನಲ್ಲಿ ಯಾಕೆ ಈ ಜಗಳ?

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಗಳಿಗಾಗಿ ಆಯ್ಕೆ ಮಾಡಿದ ತಂಡದಿಂದ ಭಾರತದ ಹಿರಿಯ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಕೈಬಿಟ್ಟಾಗ ಪ್ರಪಂಚದ ವಿವಿಧ ಕಡೆ ಇರುವ ಅವರ ಅಭಿಮಾನಿಗಳು ಬೇಸರಗೊಂಡರು. ‘ವಯಸ್ಸಾದ ಧೋನಿ’ ಅವರನ್ನು ತಂಡದಿಂದ ದೂರ ಇರಿಸುವ ಹುನ್ನಾರ ನಡೆಯುತ್ತಿದೆಯೇ ಎಂಬ ಸಂದೇಹ, ಅಭಿಮಾನಿಗಳ ನೋವಿಗೆ ಪ್ರಮುಖ ಕಾರಣವಾಗಿತ್ತು. ಇತ್ತೀಚಿನ ದಿನಗಳಲ್ಲಿ ಧೋನಿ ಅವರ ಬ್ಯಾಟಿಂಗ್‌ ಸಾಮರ್ಥ್ಯ ಕುಸಿಯುತ್ತಿದ್ದುದು ಈ ಸಂದೇಹಕ್ಕೆ ಪೂರಕವಾಗಿತ್ತು. ಅಭಿಮಾನಿಗಳ ಸಂಶಯದಲ್ಲೂ ವಾಸ್ತವ ಇದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕು.

ಧೋನಿ ಪ್ರಕರಣದ ಕಾವು ಕಡಿಮೆಯಾಗುತ್ತಿದ್ದಂತೆ ಈಗ ಮಹಿಳಾ ಕ್ರಿಕೆಟ್‌ನಲ್ಲಿ ಇಂಥಹುದೇ ಪ್ರಶ್ನೆಯೊಂದು ಹರಿದಾಡತೊಡಗಿದೆ. ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಮತ್ತು ತಂಡದ ಆಡಳಿತದ ನಡುವೆ ತಲೆದೋರಿರುವ ಬಿಕ್ಕಟ್ಟು ಹಿರಿಯ ಆಟಗಾರ್ತಿಯ ತಲೆದಂಡದೊಂದಿಗೆ ಮುಕ್ತಾಯವಾಗಲಿದೆಯೇ ಎಂಬ ಸಂದೇಹ ಮೂಡತೊಡಗಿದೆ.

ಒಂದೂವರೆ ದಶಕದಿಂದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಧಾರಸ್ತಂಭವಾಗಿರುವ ಮತ್ತು ವಿವಿಧ ದಾಖಲೆಗಳ ಒಡತಿಯಾಗಿರುವ ಮಿಥಾಲಿಗೆ ಈಗ 35ರ ಹರೆಯ. ಇತ್ತೀಚೆಗೆ ಅವರ ಬ್ಯಾಟಿಂಗ್‌ ಸಾಮರ್ಥ್ಯವೂ ನಿರೀಕ್ಷೆಗೆ ತಕ್ಕಂತೆ ಇಲ್ಲ. ಈ ಕಾರಣದಿಂದ ‘ಇನ್ನು ಸಾಕು, ನೀನಾಗಿಯೇ ಬಿಟ್ಟು ಹೋಗು’ ಎಂದು ಆಡಳಿತ ಪರೋಕ್ಷವಾಗಿ ಹೇಳುತ್ತಿದೆಯೇ? ಅಥವಾ ನಿವೃತ್ತಿಗೆ ಮಿಥಾಲಿ ಅವರೇ ಕಾರಣ ಹುಡುಕುತ್ತಿದ್ದಾರೆಯೇ?

ವಿವಾದದ ಆಂತರ್ಯವೇನು?

ವೆಸ್ಟ್ ಇಂಡೀಸ್‌ನಲ್ಲಿ ನಡೆದ ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ನ ಫೈನಲ್‌ ಪಂದ್ಯದಿಂದ ಮಿಥಾಲಿ ರಾಜ್‌ ಅವರನ್ನು ಕೈಬಿಟ್ಟಿದ್ದು ವಿವಾದದ ಮೂಲ. ಅಷ್ಟಕ್ಕೂ ಈ ವಿಷಯವನ್ನು ಎತ್ತಿದವರು ಮಿಥಾಲಿಯೂ ಅಲ್ಲ, ಅವರ ಅಭಿಮಾನಿಗಳೂ ಅಲ್ಲ. ಮಿಥಾಲಿ ಅವರ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಒಬ್ಬರು ಮಹಿಳೆ.

ಇದರ ಬೆನ್ನಲ್ಲೇ ವಾಕ್ಸಮರ ಆರಂಭವಾಯಿತು. ಹಿರಿಯ ಆಟಗಾರ್ತಿ, ಬಿಸಿಸಿಐ ಆಡಳಿತಾಧಿಕಾರಿ ಸಮಿತಿ ಸದಸ್ಯೆ ಡಯಾನಾ ಎಡುಲ್ಜಿ, ಕೋಚ್ ರಮೇಶ್ ಪೊವಾರ್‌ ಮುಂತಾದವರು ಮಾತಿನ ಬಾಣ ಬಿಡಲು ಶುರು ಮಾಡಿದ್ದರಿಂದ ವಿವಾದ ಸ್ಫೋಟಗೊಂಡಿತು.

ತಂಡದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಮಿಥಾಲಿ ರಾಜ್‌ ಹೇಳಿದರೆ, ವೈಯಕ್ತಿಕ ಶ್ರೇಯಸ್ಸಿನ ಬಗ್ಗೆ ಮಾತ್ರ ಗಮನ ನೀಡುತ್ತಿದ್ದ ಮಿಥಾಲಿ ತಂಡದ ಸಾಧನೆಗಾಗಿ ಯಾವುದೇ ಚರ್ಚೆ, ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ ಎಂದು ಕೋಚ್‌ ರಮೇಶ್ ಪೊವಾರ್‌ ದೂರಿದ್ದಾರೆ. ಈ ಎಲ್ಲ ವಾದ–ಪ್ರತಿವಾದವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಿಳಾ ಕ್ರಿಕೆಟ್‌ನ ಆಡಳಿತದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಿತಾಸಕ್ತಿಗಳು, ಪೂರ್ವಗ್ರಹಗಳು ತಂಡದ ಒಳಗೂ ಹೊರಗೂ ತಾಂಡವವಾಡುತ್ತಿವೆಯೇ...?

ಹಳೆಯ ಸೇಡು ಮುಳುವಾಯಿತೇ?

ಮಹಿಳಾ ಕ್ರಿಕೆಟ್ ತಂಡದ ಕೋಚ್‌ ಆಗಿದ್ದ ತುಷಾರ್ ಅರೋತೆ ಅವರನ್ನು ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಮಿಥಾಲಿ ರಾಜ್ ಅವರ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಲಾಗುತ್ತಿದೆ. ಅವರ ತರಬೇತಿ ಶೈಲಿಗೆ ಹಿರಿಯ ಆಟಗಾರ್ತಿಯರು ಅಸಮಾಧಾನಗೊಂಡಿದ್ದರು. ಇದನ್ನು ಸಂಬಂಧಪಟ್ಟವರ ಗಮನಕ್ಕೂ ತಂದಿದ್ದರು. ಇದರ ನೇತೃತ್ವ ವಹಿಸಿದವರು ಮಿಥಾಲಿ ಎಂಬ ವದಂತಿ ಹಬ್ಬಿತ್ತು. ಆ ಸೇಡನ್ನು ತೀರಿಸಲು ಮಿಥಾಲಿ ಅವರನ್ನು ಬಲಿ ಮಾಡಲಾಗುತ್ತಿದೆಯೇ...? ತಂಡದೊಳಗೆ ಗದ್ದಲ, ಗೊಂದಲ ಸೃಷ್ಟಿಸಿ ಮಹಿಳಾ ಕ್ರಿಕೆಟ್‌ಗೆ ಕಳಂಕ ತರಲು ಬಾಹ್ಯ ಶಕ್ತಿಗಳು ಪ್ರಯತ್ನಿಸುತ್ತಿವೆಯೇ ಎಂಬ ಪ್ರಶ್ನೆಗಳ ಸರಣಿಯೂ ಈಗ ಮುಂದುವರಿದಿದೆ.

ಪೊವಾರ್ ಹೇಳಿದ್ದೇನು?

ಮಿಥಾಲಿ ಅವರ ಬಗ್ಗೆ ಕೋಚ್ ರಮೇಶ್ ಪೊವಾರ್ ಕೂಡ ದೂರುಗಳ ಮಳೆಗೈದಿದ್ದಾರೆ. ಅವರ ಪ್ರಮುಖ ಆರೋಪಗಳನ್ನು ಹೀಗೆ ಪಟ್ಟಿ ಮಾಡಬಹುದು:

* ಟ್ವೆಂಟಿ–20 ವಿಶ್ವಕಪ್‌ ಸಂದರ್ಭದಲ್ಲಿ ತಂತ್ರಗಳನ್ನು ಹೆಣೆಯುವ ಸಭೆಗಳಲ್ಲಿ ಮಿಥಾಲಿ ಹೆಚ್ಚು ಮಾತೇ ಆಡುತ್ತಿರಲಿಲ್ಲ.

* ಗುಂಪು ಹಂತದಲ್ಲಿ ತಂಡ ಅಗ್ರ ಸ್ಥಾನಕ್ಕೇರಿದಾಗ ಸಂಭ್ರಮಪಡಲಿಲ್ಲ. ಹಿರಿಯ ಆಟಗಾರ್ತಿ ಎಂಬ ನೆಲೆಯಲ್ಲಿ ಯಾರ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.

* ತಂಡದ ಶ್ರೇಯಸ್ಸಿಗಾಗಿ ಬ್ಯಾಟಿಂಗ್ ಮಾಡುವುದಕ್ಕಿಂತ ವೈಯಕ್ತಿಕ ಹಿತಾಸಕ್ತಿ, ದಾಖಲೆಗಳ ಬಗ್ಗೆ ಮಾತ್ರ ಅವರ ಗಮನ ಇತ್ತು.

* ತಮ್ಮ ಸಾಮರ್ಥ್ಯವನ್ನು ಪೂರ್ತಿಯಾಗಿ ಹೊರಗೆಡಹುತ್ತಿರಲಿಲ್ಲ. ಇದರಿಂದ ಇತರ ಬ್ಯಾಟ್ಸ್‌ವುಮನ್‌ಗಳ ಬ್ಯಾಟಿಂಗ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತಿತ್ತು.

* ಅಭ್ಯಾಸ ಪಂದ್ಯಗಳಲ್ಲಿ ರನ್‌ ಗಳಿಸುತ್ತಿರಲಿಲ್ಲ. ನಿಧಾನಗತಿಯ ಪಿಚ್‌ಗಳಲ್ಲಿ ಲಯ ಕಂಡುಕೊಳ್ಳಲು ಹೆಣಗಾಡುತ್ತಿದ್ದರು.

* ಈ ಹಿಂದೆ ಮಧ್ಯಮ ಕ್ರಮಾಂಕದಲ್ಲಿ ಆಡುವುದಾಗಿ ಸ್ಥಾನ ಕೇಳಿ ಪಡೆದುಕೊಂಡಿದ್ದರು. ಆದರೆ ಟ್ವೆಂಟಿ–20 ವಿಶ್ವಕಪ್ ಸಂದರ್ಭದಲ್ಲಿ ಆರಂಭಿಕ ಬ್ಯಾಟ್ಸ್‌ವುಮನ್ ಆಗಿ ಕಳುಹಿಸಬೇಕೆಂದು ಹಠ ತೊಟ್ಟಿದ್ದರು.

* ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಆಗದೇ ಇದ್ದರೆ ತಂಡ ತೊರೆಯುವು ದಾಗಿಯೂ, ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಾಗಿಯೂ ‘ಬೆದರಿಕೆ’ ಹಾಕಿದ್ದರು. 

***

ಯಾವ ಪಂದ್ಯದಲ್ಲಿ ಮತ್ತು ಎಂಥ ಪಿಚ್‌ಗಳಲ್ಲಿ ಯಾರು ಆಡಬೇಕೆಂಬುದನ್ನು ನಿರ್ಧರಿಸುವ ಹಕ್ಕು ಆಯ್ಕೆ ಮಂಡಳಿಯದ್ದು. ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಅಸಮಾಧಾನಪಟ್ಟು ಪ್ರಯೋಜನವೂ ಇಲ್ಲ.

–ಡಯಾನ ಎಡುಲ್ಜಿ, ಭಾರತದ ಹಿರಿಯ ಆಟಗಾರ್ತಿ

ಡಯಾನ ಅವರು ಪೂರ್ವಗ್ರಹಪೀಡಿತರಾಗಿದ್ದಾರೆ. ಪಕ್ಷಪಾತಿಯೂ ಆಗಿದ್ದಾರೆ. ಅಧಿಕಾರದ ದುರ್ಬಳಕೆ ಮಾಡಿ ನನ್ನನ್ನು ಮುಗಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಬಗ್ಗೆ ನನಗೆ ಭಿನ್ನಾಭಿಪ್ರಾಯ ಇಲ್ಲ.

–ಮಿಥಾಲಿ ರಾಜ್‌, ಭಾರತ ತಂಡದ ಆಟಗಾರ್ತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು