ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಕೆ.ಎಲ್. ರಾಹುಲ್ ಅಗತ್ಯವಿದೆಯೇ: ಕಿವೀಸ್ ಮಾಜಿ ಕ್ರಿಕೆಟಿಗ ಪ್ರಶ್ನೆ

Last Updated 5 ಆಗಸ್ಟ್ 2022, 9:48 IST
ಅಕ್ಷರ ಗಾತ್ರ

ನವದೆಹಲಿ: ಫಿಟ್ನೆಸ್ ಮತ್ತು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಅವರು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

ಕೆ.ಎಲ್‌.ರಾಹುಲ್‌ ಅವರು ಜೂನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್‌ ವಿರುದ್ಧದ ಟಿ–20 ಸರಣಿಗೆ ಆಯ್ಕೆಯಾಗಿದ್ದ ಅವರು ಅಭ್ಯಾಸ ಆರಂಭಿಸಿದ ಬೆನ್ನಲ್ಲೇ ಕೋವಿಡ್‌ಗೆ ತುತ್ತಾಗಿದ್ದರು. ಇದೀಗ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಸೇರಿದಂತೆ ಇತರೆ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಇದೀಗ ‘ಭಾರತ ತಂಡಕ್ಕೆ ನಿಜವಾಗಿಯೂ ರಾಹುಲ್‌ ಅಗತ್ಯವಿದೆಯೇ’ ಎಂದು ಆಯ್ಕೆ ಸಮಿತಿಯವರು ಯೋಚಿಸುತ್ತಿದ್ದಾರೆ ಎಂದು ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

‘ಇದು ಆಟಗಾರರ ವಿಭಿನ್ನ ಮನಸ್ಥಿತಿಯಾಗಿದೆ. ಏಕೆಂದರೆ, ಯಾವ ಆಟಗಾರರು ಕೂಡ ತಂಡದಿಂದ ಹೊರಗುಳಿಯಲು ಬಯಸುವುದಿಲ್ಲ. ಭಾರತ ತಂಡದ ಆಟಗಾರರು ಉತ್ತಮ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬುದು ನನಗೆ ತಿಳಿದಿದೆ’ ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ.

ಸದ್ಯ ರಾಹುಲ್‌, ಗಾಯದ ಸಮಸ್ಯೆಯಿಂದಾಗಿ ತಂಡದಿಂದ ದೂರವಿದ್ದಾರೆ. ಇದೇ ವೇಳೆ ಇತರ ಆಟಗಾರರಾದ ಸೂರ್ಯಕುಮಾರ್ ಏನು ಮಾಡುತ್ತಿದ್ದಾರೆ, ರಿಷಬ್ ಪಂತ್ ಏನು ಮಾಡುತ್ತಿದ್ದಾರೆ ಎನ್ನುವುದನ್ನು ನಾವು ನೋಡಬೇಕು. ಅವರು ಈಗಾಗಲೇ ತಂಡದಲ್ಲಿ ಅವಕಾಶವನ್ನು ಪಡೆದು ರನ್ ಗಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮಗೆ ನಿಜವಾಗಿಯೂ ರಾಹುಲ್‌ ಅಗತ್ಯವಿದೆಯೇ? ಒಂದು ವೇಳೆ ರಾಹುಲ್ ತಂಡಕ್ಕೆ ಹಿಂತಿರುಗಿದಲ್ಲಿ ಉತ್ತಮ ಫಾರ್ಮ್‌ನಲ್ಲಿ ಇರುತ್ತಾರೆಯೇ? ಹೀಗೆ ಹಲವು ಪ್ರಶ್ನೆಗಳು ಎದುರಾಗುತ್ತವೆ. ಹಾಗಾಗಿ ಇತರ ಆಟಗಾರರಿಗೆ ಆ ಅವಕಾಶವನ್ನು ನೀಡಬೇಕು’ ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ.

ಆಗಸ್ಟ್ 18ರಿಂದ ಪ್ರಾರಂಭವಾಗುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ.

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದೇ ಇರುವುದರ ಬಗ್ಗೆ ಕೆ.ಎಲ್ ರಾಹುಲ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು.

‘ನನ್ನ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ನಾನು ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಜೂನ್‌ನಲ್ಲಿ ನನಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್‌ನ ವಿರುದ್ಧದ ಪ್ರವಾಸಕ್ಕಾಗಿ ತಂಡಕ್ಕೆ ಮರಳುವ ವಿಶ್ವಾಸದೊಂದಿಗೆ ನಾನು ಅಭ್ಯಾಸವನ್ನೂ ಆರಂಭಿಸಿದ್ದೆ. ದುರದೃಷ್ಟವಶಾತ್, ಸಂಪೂರ್ಣ ಫಿಟ್‌ನೆಸ್‌ ಹೊಂದುತ್ತಲೇ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿತು. ಸ್ವಾಭಾವಿಕವಾಗಿ ನನಗೆ ಹಿನ್ನಡೆಯಾಯಿತು’ ಎಂದು ರಾಹುಲ್ ತಿಳಿಸಿದ್ದರು.

‘ನಾನು ಬೇಗನೆ ಚೇತರಿಸಿಕೊಳ್ಳುವ ಗುರಿ ಹೊಂದಿದ್ದೇನೆ. ಶೀಘ್ರದಲ್ಲೇ ಆಯ್ಕೆಗೆ ಲಭ್ಯವಾಗುತ್ತೇನೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಅತ್ಯುನ್ನತ ಗೌರವ. ತಂಡಕ್ಕೆ ಮರಳಲು ನಾನು ಕಾತರನಾಗಿದ್ದೇನೆ’ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT