ಬುಧವಾರ, ಆಗಸ್ಟ್ 10, 2022
24 °C

ಕ್ರಿಕೆಟ್ | ಶ್ರೀಲಂಕಾ ಪ್ರವಾಸ: ಭಾರತ ತಂಡಕ್ಕೆ ದ್ರಾವಿಡ್ ಕೋಚ್‌

ಪಿಟಿಐ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಕೊಲಂಬೊ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

ಭಾರತ ‘ಎ’ ಮತ್ತು 19 ವರ್ಷದೊಳಗಿನವರ ತಂಡದ ಕೋಚ್‌ ಆಗಿದ್ದ ದ್ರಾವಿಡ್ ಬೆಂಗಳೂರಿನಲ್ಲಿರುವ ಎನ್‌ಸಿಎ ಮುಖ್ಯಸ್ಥರಾದ ನಂತರ ಕೋಚ್ ಹುದ್ದೆ ತೊರೆದಿದ್ದರು. ವಿರಾಟ್ ಕೊಹ್ಲಿ ಬಳಗ ಇಂಗ್ಲೆಂಡ್‌ ಎದುರಿನ ಟೆಸ್ಟ್ ಸರಣಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಪಾಲ್ಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ತಂಡ ಶ್ರೀಲಂಕಾಗೆ ತೆರಳಲಿದೆ. ಇದನ್ನು ‘ಬಿ’ ತಂಡ ಎಂದೇ ಹೇಳಲಾಗುತ್ತಿದೆ. ಮುಖ್ಯ ಕೋಚ್‌ ರವಿಶಾಸ್ತ್ರಿ ಅವರು ಕೊಹ್ಲಿ ಬಳಗದೊಂದಿಗೆ ಇರುವರು.

ಶ್ರೀಲಂಕಾ ಪ್ರವಾಸ ಕೈಗೊಳ್ಳುವ ತಂಡಕ್ಕೆ ಕೋಚ್‌ ಆಗಿ ರಾಹುಲ್ ದ್ರಾವಿಡ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ ಎಂಬ ವದಂತಿ ಇತ್ತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ಇದನ್ನು ಖಚಿತಪಡಿಸಿದೆ. ಪಾರಸ್ ಮ್ಹಾಂಬ್ರೆ ಅವರು ಬೌಲಿಂಗ್ ಕೋಚ್ ಆಗಿರುವರು ಎಂದು ತಿಳಿಸಲಾಗಿದೆ.

ಶ್ರೀಲಂಕಾದಲ್ಲಿ ಭಾರತ ತಂಡ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ವೇಳಾಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ. ತಂಡದಲ್ಲಿ ಅನೇಕ ಯುವ ಆಟಗಾರರು ಮತ್ತು ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಪಳಗಿರುವವರು ಇದ್ದಾರೆ. ನಾಯಕ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಅವರ ಪೈಕಿ ಒಬ್ಬರನ್ನು ಪರಿಗಣಿಸುವ ಸಾಧ್ಯತೆ ಇದೆ. ಭುಜನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್  ಈ ಸಂದರ್ಭದಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯೂ ಇದೆ.

ಹೆಚ್ಚುವರಿ ಪಂದ್ಯಗಳ ಸಾಧ್ಯತೆ

ಕೋವಿಡ್‌ನಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಪ್ರವಾಸಿ ತಂಡಗಳೊಂದಿಗೆ ಹೆಚ್ಚುವರಿ ಪಂದ್ಯಗಳನ್ನು ಆಯೋಜಿಸಲು ಶ್ರೀಲಂಕಾ ಕ್ರಿಕೆಟ್ ನಿರ್ಧರಿಸಿದೆ. ಹೀಗಾಗಿ ಭಾರತ ತಂಡ ಹೆಚ್ಚುವರಿಯಾಗಿ ಮೂರು ಏಕದಿನ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ.

ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು, ಸೆಪ್ಟೆಂಬರ್‌ನಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಮತ್ತು ನವೆಂಬರ್‌ನಲ್ಲಿ ಅಫ್ಗಾನಿಸ್ಥಾನ ವಿರುದ್ಧ ಶ್ರೀಲಂಕಾದ ಸರಣಿಗಳು ನಡೆಯಲಿವೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡ್‌ ತಂಡ ಲಂಕಾ ಪ್ರವಾಸವನ್ನು ರದ್ದುಗೊಳಿಸಿತ್ತು. ಆದರೆ ಡಿಸೆಂಬರ್‌ನಲ್ಲಿ ಸರಣಿ ನಡೆದಿತ್ತು. ಆ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ಇರಲಿಲ್ಲ. ಶ್ರೀಲಂಕಾ ತಂಡ ಸದ್ಯ ಬಾಂಗ್ಲಾದೇಶದಲ್ಲಿದ್ದು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

ಶಮ್ಮಿ ಸಿಲ್ವಾ ಎರಡನೇ ಬಾರಿ ಆಯ್ಕೆ

ಕೊಲಂಬೊ (ಪಿಟಿಐ): ಶ್ರೀಲಂಕಾ ಕ್ರಿಕೆಟ್‌ನ ಅಧ್ಯಕ್ಷರಾಗಿ ಮತ್ತೊಮ್ಮೆ ಶಮ್ಮಿ ಸಿಲ್ವಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಸಮಿತಿ ಗುರುವಾರ ತಿಳಿಸಿದೆ. 2023ರ ವರೆಗೆ ಅವರು ಈ ಹುದ್ದೆಯಲ್ಲಿರುತ್ತಾರೆ. 2019ರಲ್ಲಿ ಅವರು ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಉಪಾಧ್ಯಕ್ಷರಾಗಿದ್ದರು.

ಉಪಾಧ್ಯಕ್ಷರಾಗಿ ರವಿನ್ ವಿಕ್ರಮರತ್ನೆ ಮತ್ತು ಜಯಂತ ಧರ್ಮದಾಸ, ಕಾರ್ಯದರ್ಶಿಯಾಗಿ ಮೋಹನ್ ಡಿ ಸಿಲ್ವಾ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು