ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಡಕ್ವರ್ಥ್ ಲೂಯಿಸ್ ನಿಯಮ? ಕ್ರಿಕೆಟ್ ಪ್ರೇಮಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ

Last Updated 16 ಜುಲೈ 2019, 13:10 IST
ಅಕ್ಷರ ಗಾತ್ರ

ಬೆಂಗಳೂರು:ಏನಿದು ಡಕ್ವರ್ಥ್ ಲೂಯಿಸ್ ನಿಯಮ? ಇದರ ಮರ್ಮವೇನು? ಈ ನಿಯಮದ ಅನ್ವಯ ಯಾವ ರೀತಿ ಟಾರ್ಗೆಟ್ ಲೆಕ್ಕಾಚಾರ ಹಾಕುತ್ತಾರೆ? ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದಕ್ಕೆ ಮಳೆಯಿಂದ ಅಡಚಣೆಯಾದರೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಮನದಲ್ಲಿಯೂ ಈ‍ಪ್ರಶ್ನೆಗಳು ಹಾದುಹೋಗುತ್ತವೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕೆ ಅಡಚಣೆಯಾಗಿ ಓವರ್‌ಗಳನ್ನು ಕಡಿತಗೊಳಿಸಬೇಕಾಗಿ ಬಂದಾಗ ಟಾರ್ಗೆಟ್ ನಿಗದಿಪಡಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸದ್ಯಡಕ್ವರ್ಥ್ ಲೂಯಿಸ್ ನಿಯಮ ಅನುಸರಿಸುತ್ತಿದೆ.

ನಿಯಮ ರೂಪಿಸಿದ್ದು ಯಾರು?

ಈ ನಿಯಮದ ಪೂರ್ಣ ಹೆಸರು ‘ಡಕ್ವರ್ಥ್ ಲೂಯಿಸ್–ಸ್ಟರ್ನ್‌ ಮೆಥಡ್’ ಎಂದು. ಬ್ರಿಟನ್‌ನ ಸಂಖ್ಯಾಶಾಸ್ತ್ರಜ್ಞರಾದ ಫ್ರಾಂಕ್‌ಡಕ್ವರ್ಥ್ ಮತ್ತು ಟೋನಿ ಲೂಯಿಸ್ ಅವರು ಮೊದಲು ಈ ನಿಯಮವನ್ನು ರೂಪಿಸಿದವರು. ನಂತರ ಈ ನಿಯಮವನ್ನು ಪ್ರೊಫೆಸರ್ ಸ್ಟೀವನ್ ಸ್ಟರ್ನ್‌ ಪರಿಷ್ಕರಿಸಿದ್ದಾರೆ. ಹೀಗಾಗಿ 2014ರ ನವೆಂಬರ್ ನಂತರ ಈ ನಿಯಮವನ್ನು ‘ಡಕ್ವರ್ಥ್ ಲೂಯಿಸ್–ಸ್ಟರ್ನ್‌ ಮೆಥಡ್’ ಎಂದು ಕರೆಯಲಾಗುತ್ತಿದೆ.

ಯಾವಾಗ ಅಸ್ತಿತ್ವಕ್ಕೆ ಬಂತು?

ಡಕ್ವರ್ಥ್ ಲೂಯಿಸ್ ನಿಯಮ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲು ‘ಸರಾಸರಿ ರನ್‌ರೇಟ್ ವಿಧಾನ’ ಮತ್ತು ‘ಮೋಸ್ಟ್‌ ಪ್ರಡಕ್ಟೀವ್ ಮೆಥಡ್’ ಮೂಲಕ ಟಾರ್ಗೆಟ್ ಲೆಕ್ಕಾಚಾರ ಹಾಕುತ್ತಿದ್ದರು. ಆದರೆ ಇವೆರಡೂ ವಿಧಾನಗಳಲ್ಲಿ ಎರಡನೇ ಇನ್ನಿಂಗ್ಸ್ ಆಡುತ್ತಿರುವ ತಂಡಗಳ ಸರಾಸರಿ ರನ್‌ ಲೆಕ್ಕ ಹಾಕಲಾಗುತ್ತಿತ್ತೇ ವಿನಃ ಪತನಗೊಂಡ ವಿಕೆಟ್‌ಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. 1992ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯಕ್ಕೆ ಮಳೆಯಿಂದ ಅಡಚಣೆಯುಂಟಾಗಿತ್ತು. ಪಂದ್ಯ ಸ್ಥಗಿತಗೊಂಡಾಗ ದಕ್ಷಿಣ ಆಫ್ರಿಕಾ ತಂಡಕ್ಕೆ 13 ಬಾಲ್‌ಗಳಿಂದ 22 ರನ್‌ಗಳ ಅವಶ್ಯಕತೆಯಿತ್ತು. ಒಟ್ಟು 12 ನಿಮಿಷ ಪಂದ್ಯ ಸ್ಥಗಿತಗೊಂಡಿದ್ದು, ಎರಡು ಓವರ್‌ (12 ಬಾಲ್) ಕಡಿತಗೊಳಿಸಲಾಗಿತ್ತು. ಒಂದು ಬಾಲ್‌ನಲ್ಲಿ 22 ರನ್ ಗುರಿ ನಿಗದಿಪಡಿಸಲಾಗಿತ್ತು! ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು (ಡಕ್ವರ್ಥ್ ಲೂಯಿಸ್ ವಿಧಾನದ ಮೂಲಕವಾದರೆ ದಕ್ಷಿಣ ಆಫ್ರಿಕಾಗೆ 5 ರನ್‌ ಗುರಿ ಇರುತ್ತಿತ್ತು ಎನ್ನಲಾಗಿದೆ).‘ಇದೊಂದು ಲೆಕ್ಕಾಚಾರದ ಸಮಸ್ಯೆಯಾಗಿದ್ದು, ಇದಕ್ಕೆ ಲೆಕ್ಕಾಚಾರದ ಮೂಲಕವೇ ಪರಿಹಾರ ಹುಡುಕಬೇಕೆಂಬುದನ್ನು ಮನಗಂಡೆ’ ಎಂದು ಆಗಡಕ್ವರ್ಥ್ ಹೇಳಿದ್ದರು. ಅಲ್ಲದೆ, ಪರಿಷ್ಕೃತ ಲೆಕ್ಕಾಚಾರದ ವಿಧಾನ ರೂಪಿಸಿದರು.

1997ರ ಜನವರಿ 1ರಂದು ಜಿಂಬಾಬ್ವೆ ಮತ್ತು ಇಂಗ್ಲೆಂಡ್ ನಡುವಣ‍ಪಂದ್ಯದಲ್ಲಿಡಕ್ವರ್ಥ್ ಲೂಯಿಸ್ ನಿಯಮವನ್ನು ಮೊದಲ ಬಾರಿ ಬಳಸಲಾಗಿತ್ತು. ಆ ಪಂದ್ಯದಲ್ಲಿ ಜಿಂಬಾಬ್ವೆ ತಂಡ 7 ರನ್‌ಗಳಿಂದ ಜಯ ಗಳಿಸಿತ್ತು. ಆದರೆ,ಡಕ್ವರ್ಥ್ ಲೂಯಿಸ್ ನಿಯಮವನ್ನುಐಸಿಸಿ ಅಧಿಕೃತವಾಗಿ ಅಸ್ತಿತ್ವಕ್ಕೆ ತಂದಿದ್ದು 1999ರಲ್ಲಿ.

ಲೆಕ್ಕಾಚಾರ ಹೇಗೆ?

ಸಾಮಾನ್ಯವಾಗಿ,‘ಸರಾಸರಿ ರನ್‌ರೇಟ್ ವಿಧಾನ’ ಮತ್ತು ‘ಮೋಸ್ಟ್‌ ಪ್ರಡಕ್ಟೀವ್ ಮೆಥಡ್’ ಮೂಲಕ ಟಾರ್ಗೆಟ್ ಲೆಕ್ಕಾಚಾರ ಹಾಕುವಾಗಎರಡನೇ ಇನ್ನಿಂಗ್ಸ್ ಆಡುತ್ತಿರುವ ತಂಡಗಳ ಸರಾಸರಿ ರನ್‌ಗಳನ್ನಷ್ಟೇ ಗಣನೆಗೆ ತೆಗೆದುಕೊಳ್ಳುತ್ತಾರೆ. ವಿಕೆಟ್‌ಗಳನ್ನು ಪರಿಗಣಿಸುವುದಿಲ್ಲ. ಆದರೆ ಟಾರ್ಗೆಟ್ ಚೇಸ್ ಮಾಡುವ ಸಂದರ್ಭದಲ್ಲಿ ಪತನವಾದ ವಿಕೆಟ್ ಸಹ ಮುಖ್ಯವಾಗುತ್ತವೆ. ಹೆಚ್ಚು ವಿಕೆಟ್‌ ತಂಡದ ಬಳಿ ಇದ್ದಾಗ ಕೊನೆಯ ಓವರ್‌ಗಳಲ್ಲಿ ಹೆಚ್ಚು ರನ್ ಹೊಡೆಯುವ ಸಾಧ್ಯತೆ ಹೆಚ್ಚು. ‘ಹೆಚ್ಚು ವಿಕೆಟ್ ಇದ್ದಾಗ ಬಾಕಿ ಉಳಿದಿರುವ ಬಾಲ್‌ಗಳೂ ಜಾಸ್ತಿ ಇದ್ದರೆ ತಂಡವೊಂದು ಹೆಚ್ಚು ರನ್ ಗಳಿಸಲು ಸಮರ್ಥ’ ಎನ್ನುವ ನಂಬಿಕೆಯ ಆಧಾರದ ಮೇಲೆ ಡಕ್ವರ್ಥ್ ಲೂಯಿಸ್ ನಿಯಮ ರೂಪುಗೊಂಡಿದೆ.ಡಕ್ವರ್ಥ್ ಲೂಯಿಸ್ ನಿಯಮವು ‘ರಿಸೋರ್ಸ್’ ಆಧಾರದಲ್ಲಿ ಲೆಕ್ಕಹಾಕುತ್ತದೆ. ಇಲ್ಲಿ‘ರಿಸೋರ್ಸ್’ ಎಂದರೆ ತಂಡದ ಬಳಿ ಬಾಕಿ ಉಳಿದಿರುವ ವಿಕೆಟ್‌ಗಳು ಮತ್ತು ಓವರ್‌ಗಳು ಅಥವಾ ಬಾಲ್‌ಗಳು.

ಆಕ್ಷೇಪಕ್ಕೆ ಹೊರತಲ್ಲ...

ಡಕ್ವರ್ಥ್ ಲೂಯಿಸ್ ನಿಯಮಕ್ಕೂ ಆಟಗಾರರು, ಪ್ರೇಕ್ಷಕರಿಂದ ಹಲವು ಬಾರಿ ಆಕ್ಷೇಪ ವ್ಯಕ್ತವಾಗಿದೆ. ಮೊದಲ ಇನ್ನಿಂಗ್ಸ್‌ ಪೂರ್ಣಗೊಂಡು ಎರಡನೇ ಇನ್ನಿಂಗ್ಸ್‌ಗೆ ಅಡಚಣೆಯಾದಾಗ ಲೆಕ್ಕಾಚಾರ ಹಾಕುವುದೇನೋ ಸರಿ. ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿಯೇ ಪಂದ್ಯ ಅರ್ಧಕ್ಕೆ ಮೊಟಕುಗೊಂಡು ಮೊದಲು ಬ್ಯಾಟ್ ಮಾಡಿದ ತಂಡ ಆಡಿದ್ದಕ್ಕಿಂತಲೂ ಕಡಿಮೆ ಓವರ್‌ ನಿಗದಿಪಡಿಸುವಂತಹ ಸಂದರ್ಭ ಬಂದಾಗ ನಿಗದಿಪಡಿಸಿದ ಟಾರ್ಗೆಟ್ ಬಗ್ಗೆ ಅನೇಕ ಬಾರಿ ಆಕ್ಷೇಪ ವ್ಯಕ್ತವಾಗಿದ್ದೂ ಇದೆ.

ಉದಾಹರಣೆಗೆ:2008ರಲ್ಲಿ ಭಾರತ–ಇಂಗ್ಲೆಂಡ್ ನಡುವೆ ನಡೆದ ಪಂದ್ಯವೊಂದರಲ್ಲಿ ಭಾರತ ಮೊದಲು ಬ್ಯಾಟ್ ಮಾಡಿತ್ತು. ಪಂದ್ಯಕ್ಕೆ ಎರಡು ಬಾರಿ ಮಳೆ ಅಡ್ಡಿಯಾಗಿತ್ತು. ಎರಡನೇ ಬಾರಿ ಮಳೆಯಿಂದ ಅಡಚಣೆಯಾದಾಗ ಭಾರತ ತಂಡ 4 ವಿಕೆಟ್‌ ಪತನಗೊಂಡು 166 ರನ್‌ ಗಳಿಸಿ ಆಡುತ್ತಿತ್ತು. ಪಂದ್ಯವನ್ನು 22 ಓವರ್‌ಗಳಿಗೆ ಸೀಮಿತಗೊಳಿಸಿಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ಇಂಗ್ಲೆಂಡ್‌ಗೆ 22 ಓವರ್‌ಗಳಲ್ಲಿ 198 ರನ್ ಗುರಿ ನಿಗದಿಪಡಿಸಲಾಯಿತು. ತನಗೆ ಕೇವಲ 22 ಓವರ್ ಇರುವುದು ಎಂಬುದನ್ನು ಪಂದ್ಯದ ಆರಂಭದಲ್ಲೇ ತಿಳಿದ ಇಂಗ್ಲೆಂಡ್ ಕೈಯಲ್ಲಿ 10 ವಿಕೆಟ್ ಹೊಂದಿರುವುದರಿಂದ ಹೆಚ್ಚು ರನ್ ಹೊಡೆಯಬಲ್ಲದು. ಆದರೆ ಭಾರತ 50 ಓವರ್‌ ಅನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಆಡುತ್ತಿತ್ತು ಎಂಬುದು ಈ ಗುರಿ ನಿಗದಿಪಡಿಸುವ ಹಿಂದಿನ ಲೆಕ್ಕಾಚಾರ. ಪಂದ್ಯದ ಕೊನೆಗೆ ಇಂಗ್ಲೆಂಡ್ ತಂಡ 22 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿದ್ದರೂ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 166 ರನ್‌ ಗಳಿಸಿದ ಭಾರತದ ವಿರುದ್ಧ ಸೋತಿತ್ತು!

ಎಂ.ಎಸ್‌.ಧೋನಿ, ವಿರಾಟ್ ಕೊಹ್ಲಿಸೇರಿದಂತೆ ಅನೇಕ ಹಿರಿಯ ಕ್ರಿಕೆಟಿಗರಿಗೂಡಕ್ವರ್ಥ್ ಲೂಯಿಸ್ ನಿಯಮದ ಬಗ್ಗೆ ಗೊಂದಲ ಇರುವುದೂ ನಿಜ. ‘ನನಗೆ ಬಿಡಿ,ಡಕ್ವರ್ಥ್ ಲೂಯಿಸ್ ನಿಯಮದ ಬಗ್ಗೆ ಐಸಿಸಿಗೇ ಸರಿಯಾಗಿ ತಿಳಿದಿದೆ ಎಂದು ನನಗನಿಸುವುದಿಲ್ಲ’ ಎಂದು 2017ರಲ್ಲಿ ಎಂ.ಎಸ್‌.ಧೋನಿ ಹೇಳಿದ್ದರು. ‘ಡಕ್ವರ್ಥ್ ಲೂಯಿಸ್ ನಿಯಮ ನನಗೆ ನಿಜವಾಗಿಯೂ ಸರಿಯಾಗಿ ಅರ್ಥವಾಗುತ್ತಿಲ್ಲ’ ಎಂದು ವಿರಾಟ್ ಕೊಹ್ಲಿ ಕಳೆದ ವರ್ಷ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT