ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ ಇಂದಿನಿಂದ: ಆಯ್ಕೆಗಾರರ ಗಮನ ಸೆಳೆಯುವತ್ತ ಚಿತ್ತ

ಗಿಲ್–ಈಶ್ವರನ್ ಮುಖಾಮುಖಿ; ಪಂತ್ ಮೇಲೆ ಕಣ್ಣು
Published 4 ಸೆಪ್ಟೆಂಬರ್ 2024, 23:30 IST
Last Updated 4 ಸೆಪ್ಟೆಂಬರ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕಾಗಿ ಭರದ ತಯಾರಿ ನಡೆಯುತ್ತಿರುವ ಹೊತ್ತಿನಲ್ಲಿ ದೇಶಿ ಕ್ರಿಕೆಟ್ ಋತುವಿನ ಸಂಭ್ರಮ ಗರಿಗೆದರುತ್ತಿದೆ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರದಿಂದ ಕೆಂಪು ಚೆಂಡು ಪುಟಿಯಲಿದೆ. ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ಇಲ್ಲಿ ಮತ್ತು ನೆರೆಯ ರಾಜ್ಯದಲ್ಲಿರುವ ಅನಂತಪುರದಲ್ಲಿ ನಡೆಯಲಿವೆ. 

ಬೆಂಗಳೂರಿನ ಪಂದ್ಯದಲ್ಲಿ ಭಾರತ ಎ ಮತ್ತು ಭಾರತ ಬಿ ತಂಡಗಳು ಮುಖಾಮುಖಿಯಾಗಲಿವೆ. ಅನಂತಪುರದಲ್ಲಿ ಸಿ ಹಾಗೂ ಡಿ ತಂಡಗಳು ಮುಖಾಮುಖಿಯಾಗಲಿವೆ.

ಈ ತಂಡಗಳಲ್ಲಿರುವ ಉದಯೋನ್ಮುಖ ಆಟಗಾರರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ತವಕ. ಸೀನಿಯರ್ ಆಟಗಾರರಿಗೆ ರಾಷ್ಟ್ರೀಯ ಬಳಗಕ್ಕೆ ಮರಳುವ ಛಲ. ಅಜಿತ್ ಅಗರಕರ್ ಮುಖ್ಯಸ್ಥರಾಗಿರುವ ರಾಷ್ಟ್ರೀಯ ಆಯ್ಕೆ ಸಮಿತಿಯು ಈ ಟೂರ್ನಿಯ ಮೇಲೆ ನಿಗಾ ವಹಿಸಿದ್ದು, ಮುಂಬರುವ ಮಹತ್ವದ ಟೆಸ್ಟ್ ಸರಣಿಗಳಿಗೆ ತಂಡವನ್ನು ಕಟ್ಟುವತ್ತ ಚಿತ್ತ ನೆಟ್ಟಿದ್ದಾರೆ. 

ಈ ರೇಸ್‌ನಲ್ಲಿ ಕರ್ನಾಟಕದ ಪ್ರಮುಖರೂ ಇದ್ದಾರೆ. ಭಾರತ ಎ ತಂಡದಲ್ಲಿ ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ವೇಗಿ ಪ್ರಸಿದ್ಧಕೃಷ್ಣ ಹಾಗೂ ವಿದ್ವತ್ ಕಾವೇರಪ್ಪ ಅವರೂ ಇದ್ದಾರೆ. ಸಿ ತಂಡದಲ್ಲಿ ವೈಶಾಖ ವಿಜಯಕುಮಾರ್, ಡಿ ತಂಡದಲ್ಲಿ ದೇವದತ್ತ ಪಡಿಕ್ಕಲ್ ಕೂಡ ತಮ್ಮ ಅದೃಷ್ಟ ಪಣಕ್ಕೊಡ್ಡಲು ಸಿದ್ಧರಾಗಿದ್ದಾರೆ. 

ಭಾರತ ತಂಡದಲ್ಲಿರುವ ಖ್ಯಾತ ಆಟಗಾರರೂ ದೇಶಿ ಟೂರ್ನಿಗಳಲ್ಲಿ ಭಾಗವಹಿಸಬೇಕು ಎಂಬ ಬಿಸಿಸಿಐ ಸೂಚನೆಯು ಫಲ ನೀಡಿದಂತೆ ಕಾಣುತ್ತಿದೆ. ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿ ಕೆಲವರಿಗೆ ವಿನಾಯಿತಿ ಕೂಡ ನೀಡಲಾಗಿದೆ. ಅದರಿಂದಾಗಿ ಸ್ಪಿನ್ ಜೋಡಿ ಆರ್. ಅಶ್ವಿನ್, ರವೀಂದ್ರ ಜಡೇಜ ಕಣಕ್ಕಿಳಿಯುತ್ತಿಲ್ಲ. 

ಪಂತ್ ಮೇಲೆ ಕಣ್ಣು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ದೀರ್ಘ ಸಮಯ ಆರೈಕೆ ಪಡೆದ ನಂತರ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಮರಳಿದ್ದ ವಿಕೆಟ್‌ಕೀಪರ್–ಬ್ಯಾಟರ್ ರಿಷಭ್ ಪಂತ್ ಈಗ ಕೆಂಪು ಚೆಂಡಿನ ಮಾದರಿಯಲ್ಲಿ ಪರೀಕ್ಷೆ ನೀಡಲು ಸಿದ್ಧರಾಗಿದ್ದಾರೆ. 

ಅಭಿಮನ್ಯು ಈಶ್ವರನ್ ನಾಯಕತ್ವದ ತಂಡದಲ್ಲಿ ಅವರು ಆಡಲಿದ್ದಾರೆ.  ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸೈ  ಎನಿಸಿಕೊಂಡಿರುವ ರಿಷಭ್ ಈಗ ದೀರ್ಘ ಮಾದರಿಗೆ ಸಿದ್ಧವಾಗಬೇಕಿದೆ. ಈಚೆಗೆ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಅವರು ಅಮೋಘವಾಗಿ ಆಡಿದ್ದರು. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಅವರು ಇಲ್ಲಿ ಉತ್ತಮವಾಗಿ ಆಡಬೇಕಿದೆ. 

ತಂಡಗಳು ಭಾರತ ಎ: ಶುಭಮನ್ ಗಿಲ್ (ನಾಯಕ) ಮಯಂಕ್ ಅಗರವಾಲ್ ರಿಯಾನ್ ಪರಾಗ್ ಧ್ರುವ ಜುರೇಲ್ (ವಿಕೆಟ್‌ಕೀಪರ್) ಕೆ.ಎಲ್. ರಾಹುಲ್ ತಿಲಕ್ ವರ್ಮಾ ಶಿವಂ ದುಬೆ ತನುಷ್ ಕೋಟ್ಯಾನ ಕುಲದೀಪ್ ಯಾದವ್ ಆಕಾಶದೀಪ್ ಪ್ರಸಿದ್ಧಕೃಷ್ಣ ಖಲೀಲ್ ಅಹಮದ್ ಆವೇಶ್ ಖಾನ್ ವಿದ್ವತ್ ಕಾವೇರಪ್ಪ ಕುಮಾರ ಖುಶಾಗ್ರ ಶಾಶ್ವತ್ ರಾವತ್. 

ಭಾರತ ಬಿ: ಅಭಿಮನ್ಯು ಈಶ್ವರನ್ (ನಾಯಕ) ಯಶಸ್ವಿ ಜೈಸ್ವಾಲ್ ಸರ್ಫರಾಜ್ ಖಾನ್ ರಿಷಭ್ ಪಂತ್ (ವಿಕೆಟ್‌ಕೀಪರ್) ಮುಷೀರ್ ಖಾನ್ ನಿತೀಶ್ ಕುಮಾರ್ ರೆಡ್ಡಿ ವಾಷಿಂಗ್ಟನ್ ಸುಂದರ್ ನವದೀಪ್ ಸೈನಿ ಯಶ್ ದಯಾಳ್ ಮುಖೇಶ್ ಕುಮಾರ್ ರಾಹುಲ್ ಚಾಹರ್ ಆರ್. ಸಾಯಿಕಿಶೋರ್ ಮೋಹಿತ್ ಅವಸ್ತಿ ಎನ್. ಜಗದೀಶನ್ (ವಿಕೆಟ್‌ಕೀಪರ್) 

ಭಾರತ ಸಿ: ಋತುರಾಜ್ ಗಾಯಕವಾಡ (ನಾಯಕ) ಸಾಯಿ ಸುದರ್ಶನ್ ರಜತ್ ಪಾಟೀದಾರ್ ಅಭಿಷೇಕ್ ಪೊರೆಲ್ (ವಿಕೆಟ್‌ಕೀಪರ್) ಸೂರ್ಯಕುಮಾರ್ ಯಾದವ್ ಬಿ. ಇಂದ್ರಜೀತ್ ಹೃತಿಕ್ ಶೋಕೀನ್ ಮಾನವ ಸುತಾರ್ ಗೌರವ್ ಯಾದವ್ ವೈಶಾಖ ವಿಜಯಕುಮಾರ್ ಅನ್ಷುಲ್ ಕಾಂಬೋಜ್ ಹಿಮಾಂಶು ಚವ್ಹಾಣ ಮಯಂಕ್ ಮಾರ್ಕಂಡೆ ಆರ್ಯನ್ ಜುಯಾಲ್ (ವಿಕೆಟ್‌ಕೀಪರ್) ಸಂದೀಪ್ ವಾರಿಯರ್. 

ಭಾರತ ಡಿ: ಶ್ರೇಯಸ್ ಅಯ್ಯರ್ (ನಾಯಕ) ಅಥರ್ವ ತೈಡೆ ಯಶ್ ದುಬೆ ದೇವದತ್ತ ಪಡಿಕ್ಕಲ್ ಇಶಾನ್ ಕಿಶನ್ ಕೆ.ಎಸ್. ಭರತ್ (ಇಬ್ಬರೂ ವಿಕೆಟ್‌ಕೀಪರ್) ರಿಕಿ ಭುಯ್ ಸಾರಾಂಶ್ ಜೈನ್ ಅಕ್ಷರ್ ಪಟೇಲ್ ಅರ್ಷದೀಪ್ ಸಿಂಗ್ ಆದಿತ್ಯ ಠಾಕ್ರೆ ಹರ್ಷಿತ್ ರಾಣಾ ತುಷಾರ್ ದೇಶಪಾಂಡೆ ಆಕಾಶ್ ಸೇನ್‌ಗುಪ್ತಾ ಸೌರಭ್ ಕುಮಾರ್.   ಪಂದ್ಯ ಆರಂಭ: ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT