ಸೋಮವಾರ, ಡಿಸೆಂಬರ್ 5, 2022
21 °C

T20 WC: ಸೆಮಿಫೈನಲ್‌ಗೆ ಇಂಗ್ಲೆಂಡ್, ಹಾಲಿ ಚಾಂಪಿಯನ್ ಆಸಿಸ್ ಟೂರ್ನಿಯಿಂದ ಔಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಸಿಡ್ನಿ: ಶ್ರೀಲಂಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್‌ ತಂಡ ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಹಾಲಿ ಚಾಂಪಿಯನ್‌ ಮತ್ತು ಆತಿಥೇಯ ತಂಡ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ.

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 141 ರನ್ ಕಲೆಹಾಕಿತ್ತು. ಆರಂಭಿಕ ಬ್ಯಾಟರ್‌ ಪಾಥುಮ್ ನಿಶಾಂಕ ಹೊರತು ಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. 45 ಎಸೆತಗಳನ್ನು ಎದುರಿಸಿದ ನಿಶಾಂಕ 2 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 67 ರನ್ ಕಲೆಹಾಕಿದರು.

ಈ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡಕ್ಕೆ ಆರಂಭಿಕ ಜಾಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 77 ರನ್‌ ಕಲೆಹಾಕಿತು. ಬಟ್ಲರ್‌ 28 ರನ್‌ ಗಳಿಸಿದರೆ, ಬಿರುಸಾಗಿ ಬ್ಯಾಟ್‌ ಬೀಸಿದ ಹೇಲ್ಸ್‌ ಕೇವಲ 29 ಎಸೆತಗಳಲ್ಲಿ 47ರನ್ ಚಚ್ಚಿ ಔಟಾದರು.

ಬಳಿಕ ಚೇತರಿಸಿಕೊಂಡ ಶ್ರೀಲಂಕಾ, ಕೊನೆವರೆಗೂ ಹೋರಾಟ ನಡೆಸಿತು.

ಹ್ಯಾರಿ ಬ್ರೂಕ್ಸ್‌ (4), ಲಿಯಾಮ್‌ ಲಿವಿಂಗ್‌ಸ್ಟೋನ್‌ (4), ಮೋಯಿನ್‌ ಅಲಿ (1) ಮತ್ತು ಸ್ಯಾಮ್‌ ಕರನ್‌ (6) ವಿಕೆಟ್‌ಗಳನ್ನು ಬೇಗನೆ ಉರುಳಿಸಿ ಸೋಲಿನ ಭೀತಿ ಉಟ್ಟಿಸಿತು.

ಆದರೆ, ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಗಟ್ಟಿಯಾಗಿ ನಿಂತು ಆಡಿದ ಬೆನ್‌ ಸ್ಟೋಕ್ಸ್ ಇಂಗ್ಲೆಂಡ್‌ ಇನಿಂಗ್ಸ್‌ಗೆ ಬಲ ತುಂಬಿದರು. 36 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿದ ಸ್ಟೋಕ್ಸ್‌ ಆಟದ ನೆರವಿನಿಂದ, ಇಂಗ್ಲೆಂಡ್‌ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ 144 ರನ್ ಗಳಿಸಿ 4 ವಿಕೆಟ್‌ ಅಂತರದ ಜಯ ಸಾಧಿಸಿತು.

ಆಸ್ಟ್ರೇಲಿಯಾ ಔಟ್
'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ನ್ಯೂಜಿಲೆಂಡ್‌, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು 'ಸೂಪರ್‌ 12' ಹಂತದಲ್ಲಿ ಆಡಿರುವ ತಲಾ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿವೆ. ತಲಾ ಒಂದೊಂದು ಪಂದ್ಯದಲ್ಲಿ ಸೋಲು ಅನುಭವಿಸಿದ್ದರೆ, ಉಳಿದೊಂದು ಪಂದ್ಯ ಮಳೆಯಿಂದಾಗಿ ರದ್ಧಾಗಿದೆ.

ಹೀಗಾಗಿ ಮೂರೂ ತಂಡಗಳು ಸಮಾನ (7) ಅಂಕಗಳನ್ನು ಗಳಿಸಿಕೊಂಡಿವೆ. ಆದರೆ, ರನ್‌ರೇಟ್‌ ಆಧಾರದಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇಂಗ್ಲೆಂಡ್‌ ನಂತರದ ಸ್ಥಾನದಲ್ಲಿದೆ. ಮೂರನೇ ಸ್ಥಾನಕ್ಕೆ ಕುಸಿದಿರುವ ಆಸ್ಟ್ರೇಲಿಯಾ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ.

'ಬಿ' ಗುಂಪಿನಿಂದ ಯಾವ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ ಎಂಬುದು ಇನ್ನೂ ಖಚಿತವಾಗಿಲ್ಲ. ಕ್ರಮವಾಗಿ 6 ಮತ್ತು 5 ಅಂಕ ಹೊಂದಿರುವ ಭಾರತ, ದಕ್ಷಿಣ ಆಫ್ರಿಕಾ ಮೊದಲೆರಡು ಸ್ಥಾನಗಳಲ್ಲಿವೆ. ತಲಾ ನಾಲ್ಕು ಅಂಕ ಗಳಿಸಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ರನ್‌ರೇಟ್‌ ಆಧಾರದಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಯಾವ ಎರಡು ತಂಡಗಳು 'ಬಿ' ಗುಂಪಿನಿಂದ ಸೆಮಿ ತಲುಪಲಿವೆ ಎಂಬುದು ನಾಳೆ (ನವೆಂಬರ್‌ 6ರಂದು) ನಿರ್ಧಾರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು