ಸೋಮವಾರ, ಆಗಸ್ಟ್ 15, 2022
22 °C
ತಂಡದಲ್ಲಿ ಮೂವರು ಆಟಗಾರರು, ನಾಲ್ವರು ಸಿಬ್ಬಂದಿಗೂ ಸೋಂಕು

ಪಾಕ್ ವಿರುದ್ಧದ ಏಕದಿನ ಸರಣಿ: ಇಂಗ್ಲೆಂಡ್‌ನ ಹೊಸ ತಂಡಕ್ಕೆ ಬೆನ್ ಸ್ಟೋಕ್ಸ್‌ ನಾಯಕ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಪಾಕಿಸ್ತಾನ ತಂಡದೆದುರು ಗುರುವಾರದಿಂದ ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಗೆ ಆತಿಥೇಯ ಇಂಗ್ಲೆಂಡ್ ಮಂಗಳವಾರ ‘ಪರಿಷ್ಕೃತ‘ ತಂಡವನ್ನು ರಚಿಸಿತು.

ಎರಡು ದಿನಗಳ ಹಿಂದಷ್ಟೇ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಆಡಿತ್ತು. ಅದೇ ತಂಡವು ಪಾಕ್ ವಿರುದ್ಧವೂ ಕಣಕ್ಕಿಳಿಯಬೇಕಿತ್ತು. ಆದರೆ ಸೋಮವಾರ ಕೋವಿಡ್ ಪರೀಕ್ಷೆಯಲ್ಲಿ ತಂಡದ ಮೂವರು ಆಟಗಾರರು ಮತ್ತು ನಾಲ್ವರು ನೆರವು ಸಿಬ್ಬಂದಿಗೆ ಸೋಂಕು ದೃಢಪಟ್ಟಿತ್ತು. ಆದ್ದರಿಂದ ತಂಡವನ್ನು ಪ್ರತ್ಯೇಕವಾಸಕ್ಕೆ ಒಳಪಡಿಸಲಾಗಿದೆ. 

ಸೋಂಕಿಗೊಳಗಾದವರ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಅವರೊಂದಿಗಿದ್ದ ಉಳಿದ ಆಟಗಾರರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಲಾಗಿದೆ.

ಇದೇ ಗುರುವಾರ ಪಾಕ್ ವಿರುದ್ಧ ಕಾರ್ಡಿಫ್‌ನಲ್ಲಿ ಮೊದಲ ಏಕದಿನ ಪಂದ್ಯವನ್ನು ಹೊಸ ತಂಡವು ಆಡಲಿದ್ದು, ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ನಾಯಕತ್ವ ವಹಿಸಲಿದೆ. ಕ್ರಿಸ್ ಸಿಲ್ವರ್ ಹುಡ್ ಕೋಚ್ ಆಗಿದ್ದಾರೆ.

ಜುಲೈ 16ರಂದು ಪಾಕ್ ಎದುರು ಆರಂಭವಾಗುವ ಟಿ20 ಸರಣಿಗೆ ಮೊದಲಿನ ತಂಡವೇ ಕಣಕ್ಕೆ ಮರಳಲಿದೆ ಎಂದು ತಿಳಿಸಲಾಗಿದೆ.

‘ಇದೊಂದು ಅನಿರೀಕ್ಷಿತವಾದ ಸಂದರ್ಭವಾಗಿದೆ. ಇಡೀ ತಂಡ ಮತ್ತು ವ್ಯವಸ್ಥಾಪಕ ಸಿಬ್ಬಂದಿಯನ್ನು ಐಸೋಲೆಟ್ ಮಾಡುವ ಪರಿಸ್ಥಿತಿ ಬಂದೊದಗಿದೆ. ಆದರೆ ಈ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಪರಿಸ್ಥಿತಿಯನ್ನು ಮುಂದಾಗಿರುವುದು ಹೆಮ್ಮೆ ಮೂಡಿಸಿದೆ. ಪರಿಷ್ಕೃತ ತಂಡವನ್ನು ಕಣಕ್ಕಿಳಿಸಲಾಗುತ್ತಿದೆ‘ ಎಂದು ಇಂಗ್ಲೆಂಡ್ ಪುರುಷರ ತಂಡದ ನಿರ್ದೇಶಕ ಆ್ಯಷ್ಲೆ ಗೈಲ್ಸ್‌ ಹೇಳಿದ್ದಾರೆ.

ತಂಡದಲ್ಲಿರುವ ಎಲ್ಲ ಆಟಗಾರರೂ ಕೋವಿಡ್ ತಡೆ ಲಸಿಕೆಯ ಕನಿಷ್ಠ ಒಂದು ಡೋಸ್ ತೆಗೆದುಕೊಂಡಿದ್ದಾರೆ. ಸೋಂಕು ಪತ್ತೆಯದವರಲ್ಲಿ ಗಂಭೀರ ಲಕ್ಷಣಗಳಿಲ್ಲ ಎಂದು ಮಂಡಳಿಯು ತಿಳಿಸಿದೆ.

‘ಡೆಲ್ಟಾ ವೈರಸ್‌ ಪ್ರಸರಣವು ವೇಗದಲ್ಲಿ ಆಗುತ್ತಿರುವುದರ ಬಗ್ಗೆ ನಮಗೆ ಅರಿವು ಇದೆ. ಜೀವರಕ್ಷಕ ವಾತಾವರಣದಲ್ಲಿ ಒಮ್ಮೆ ವೈರಸ್ ಪ್ರವೇಶಿಸಿದರೆ ಪ್ರಸರಣವು ವೇಗವಾಗಿ ಆಗುವ ಅಪಾಯ ಇರುತ್ತದೆ‘ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್ ಹೇಳಿದ್ದಾರೆ.

ಹೊಸ ತಂಡದಲ್ಲಿ 18 ಆಟಗಾರರು ಮತ್ತು ಸಿಬ್ಬಂದಿ ಇದ್ದಾರೆ. ಕಾರ್ಡಿಫ್‌ಗೆ ತೆರಳುವ ಮುನ್ನ ಅವರೆಲ್ಲರೂ ಕೋವಿಡ್ ತಪಾಸಣೆಗೆ ಒಳಗಾಗಲಿದ್ದಾರೆ. ನೆಗೆಟಿವ್ ವರದಿ ನಂತರವಷ್ಟೇ ಬಯೋಬಬಲ್ ಪ್ರವೇಶಿಸುವರು.

ಈ ಪಂದ್ಯದಲ್ಲಿ ಕ್ರೀಡಾಂಗಣದ ಗ್ಯಾಲರಿಯ ಶೇ 50ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. 

ತಂಡ: ಬೆನ್ ಸ್ಟೋಕ್ಸ್‌ (ನಾಯಕ), ಜೇಕ್ ಬಾಲ್, ಡ್ಯಾನಿ ಬ್ರಿಗ್ಸ್, ಬ್ರೈಡನ್ ಕಾರ್ಸ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಲೂಯಿಸ್ ಗ್ರೆಗರಿ, ಟಾಮ್ ಹೆಲ್ಮ್, ವಿಲ್ ಜ್ಯಾಕ್ಸ್, ಡ್ಯಾನ್ ಲಾರೆನ್ಸ್, ಸಕೀಬ್ ಮೆಹಮೂದ್, ಡೇವಿಡ್ ಮಲಾನ್, ಕ್ರೆಗ್ ಓವರ್ಟನ್, ಮ್ಯಾಟ್ ಪಾರ್ಕಿನ್ಸನ್, ಡೇವಿಡ್ ಪೈನಿ, ಫಿಲ್ ಸಾಲ್ಟ್, ಜಾನ್ ಸಿಮ್ಸನ್, ಜೇಮ್ಸ್ ವಿನ್ಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು