ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಇಂದು ಇಂಗ್ಲೆಂಡ್‌– ಪಾಕ್‌ ಸೆಣಸು, ಚುಟುಕು ಕ್ರಿಕೆಟ್‌ ಕಿರೀಟ ಯಾರಿಗೆ?

Last Updated 12 ನವೆಂಬರ್ 2022, 19:18 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಚುಟುಕು ಕ್ರಿಕೆಟ್‌ನ ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ತಂಡಗಳು ಐತಿಹಾಸಿಕ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಭಾನುವಾರ ಪೈಪೋಟಿ ನಡೆಸಲಿವೆ.

ಪೂರ್ಣ ಅವಧಿಯ ಪಂದ್ಯಕ್ಕೆ ಮಳೆ ಅನುವು ಮಾಡಿಕೊಟ್ಟರೆ, ಕ್ರಿಕೆಟ್‌ ಪ್ರೇಮಿಗಳಿಗೆ ರೋಚಕ ಆಟವನ್ನು ಉಣಬಡಿಸಲು ಬಾಬರ್‌ ಅಜಂ ಮತ್ತು ಜೋಸ್‌ ಬಟ್ಲರ್‌ ಬಳಗ ಸಜ್ಜಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮೆಲ್ಬರ್ನ್‌ನಲ್ಲಿ ಭಾನುವಾರ ಹಾಗೂ ಫೈನಲ್ ಪಂದ್ಯದ ಮೀಸಲು ದಿನವಾದ ಸೋಮವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಎರಡೂ ದಿನಗಳಲ್ಲಿ ಆಟ ನಡೆಯದಿದ್ದರೆ, ಉಭಯ ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ.

ಇಂದಿನ ಹಣಾಹಣಿ 30 ವರ್ಷಗಳ ಹಿಂದೆ ಇದೇ ತಾಣದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ಪುನರಾವರ್ತನೆ ಎನಿಸಿಕೊಂಡಿದೆ. 1992ರಲ್ಲಿ ನಡೆದಿದ್ದ ಫೈನಲ್‌ನಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ, ಗ್ರಹಾಂ ಗೂಚ್‌ ನಾಯಕತ್ವದ ಇಂಗ್ಲೆಂಡ್‌ ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿತ್ತು.

ಉಭಯ ತಂಡಗಳಿಗೆ ಈ ಟೂರ್ನಿಯ ಆರಂಭದಲ್ಲಿ ಹಿನ್ನಡೆ ಎದುರಾಗಿದ್ದರೂ, ಅಲ್ಪ ಅದೃಷ್ಟದ ನೆರವಿನೊಂದಿಗೆ ಪುಟಿದೆದ್ದು ನಿಂತು ಫೈನಲ್‌ ಪ್ರವೇಶಿಸಿವೆ.

ಪಾಕಿಸ್ತಾನ ತಂಡ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದ್ದರೆ, ಇಂಗ್ಲೆಂಡ್‌ ತಂಡ ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.

ಏಕದಿನ ವಿಶ್ವಕಪ್‌ ಚಾಂಪಿಯನ್‌ ಆಗಿರುವ ಇಂಗ್ಲೆಂಡ್‌ಗೆ ಇದೀಗ ಟಿ20 ವಿಶ್ವಕಪ್‌ ಕೂಡಾ ಗೆದ್ದು ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಳ್ಳುವ ಉತ್ತಮ ಅವಕಾಶ ಲಭಿಸಿದೆ.

‘ಈ ಪಂದ್ಯಕ್ಕೂ 1992ರ ಫೈನಲ್‌ ಪಂದ್ಯಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ಇಲ್ಲಿ ಚಾಂಪಿಯನ್‌ ಆಗುವುದು ನಮ್ಮ ಗುರಿ. ಏಕೆಂದರೆ ಎಂಸಿಜಿಯಲ್ಲಿ ತಂಡವನ್ನು ಟ್ರೋಫಿಯತ್ತ ಮುನ್ನಡೆಸುವುದು ಹೆಮ್ಮೆಯ ಸಂಗತಿ’ ಎಂದು ಬಾಬರ್‌ ಅಜಂ ಹೇಳಿದ್ದಾರೆ.

ಆರಂಭಿಕ ಜತೆಯಾಟ ನಿರ್ಣಾಯಕ: ಸೆಮಿಫೈನಲ್‌ ಪಂದ್ಯಗಳಲ್ಲಿ ಎರಡೂ ತಂಡಗಳ ಗೆಲುವಿನಲ್ಲಿ ಆರಂಭಿಕ ಜತೆಯಾಟ ನಿರ್ಣಾಯಕ ಪಾತ್ರ ವಹಿಸಿತ್ತು. ಜೋಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಅವರು ಭಾರತದ ವಿರುದ್ಧ 170 ರನ್‌ಗಳ ಜತೆಯಾಟ ನೀಡಿದ್ದರೆ, ಪಾಕಿಸ್ತಾನದ ಬಾಬರ್‌ ಮತ್ತು ಮೊಹಮ್ಮದ್‌ ರಿಜ್ವಾನ್‌ ಅವರು ನ್ಯೂಜಿಲೆಂಡ್‌ ಎದುರು 105 ರನ್‌ಗಳ ಜತೆಯಾಟ ಆಡಿದ್ದರು.

ಫೈನಲ್‌ನಲ್ಲೂ ಉಭಯ ತಂಡಗಳು ಆರಂಭಿಕ ಬ್ಯಾಟರ್‌ಗಳಿಂದ ಉತ್ತಮ ಜತೆಯಾಟ ನಿರೀಕ್ಷಿಸುತ್ತಿದೆ. ಆರಂಭದಲ್ಲೇ ವಿಕೆಟ್‌ ಪಡೆಯಬೇಕೆಂಬ ಒತ್ತಡ ಎರಡೂ ತಂಡಗಳ ಬೌಲರ್‌ಗಳ ಮೇಲಿದೆ.

ಪಾಕಿಸ್ತಾನವು ಸೆಮಿಯಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ. ಇಂಗ್ಲೆಂಡ್‌ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದ್ದು, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡರೆ ವೇಗಿ ಮಾರ್ಕ್‌ ವುಡ್‌ ಮತ್ತು ಮೂರನೇ ಕ್ರಮಾಂಕದ ಬ್ಯಾಟರ್‌ ಡೇವಿಡ್‌ ಮಲಾನ್‌ ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಬಹುದು.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT