ಬುಧವಾರ, ಆಗಸ್ಟ್ 12, 2020
25 °C
ಏಕದಿನ ಕ್ರಿಕೆಟ್

ಬೆಸ್ಟೊ, ವಿಲ್ಲಿ ಸಾಹಸ | ಐರ್ಲೆಂಡ್ ವಿರುದ್ಧ‌ ಸರಣಿ ಗೆದ್ದ ಇಂಗ್ಲೆಂಡ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಆರಂಭದ ಆಟಗಾರ ಜಾನಿ ಬೆಸ್ಟೊ ಅವರ ಸ್ಫೋಟಕ ಅರ್ಧಶತಕ (82, 41 ಎ, 14 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್‌ ವಿಲ್ಲಿ ಅವರ ಆಲ್‌ರೌಂಡ್‌ ಆಟದ ಬಲದಿಂದ ಇಂಗ್ಲೆಂಡ್‌ ತಂಡವು ಐರ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾನುವಾರ 4 ವಿಕೆಟ್‌ಗಳಿಂದ ಗೆದ್ದಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು.

ಇಲ್ಲಿನ ರೋಸ್‌ಬೌಲ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ಐರ್ಲೆಂಡ್‌ 9 ವಿಕೆಟ್‌ ಕಳೆದುಕೊಂಡು 212 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರೂ ವಿಲ್ಲಿ ಹಾಗೂ ಸ್ಯಾಮ್‌ ಬಿಲಿಂಗ್ಸ್‌ ಅವರ‌ ಜೊತೆಯಾಟದ ನೆರವಿನಿಂದ ಜಯ ಒಲಿಸಿಕೊಂಡಿತು.

ಈ ಪಂದ್ಯದ ಮೂಲಕ ಇಂಗ್ಲೆಂಡ್‌ನ ಆದಿಲ್‌ ರಶೀದ್‌ (34ಕ್ಕೆ 3) ಏಕದಿನ ಮಾದರಿಯಲ್ಲಿ 150 ವಿಕೆಟ್‌ಗಳ ಸಾಧನೆ ಮಾಡಿದರೆ, ಬೆಸ್ಟೊ ಅವರು 21 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ತಮ್ಮ ತಂಡದ ನಾಯಕ ಇಯಾನ್‌ ಮಾರ್ಗನ್ ಅವರ‌ ದಾಖಲೆ ಸರಿಗಟ್ಟಿದರು.

ಪಂದ್ಯದಲ್ಲಿ ಇಂಗ್ಲೆಂಡ್‌ ಒಂದು ಹಂತದಲ್ಲಿ 3 ವಿಕೆಟ್‌ಗೆ 131 ರನ್‌ ಗಳಿಸಿ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಆರು ರನ್‌ ಅಂತರದಲ್ಲಿ ಬೆಸ್ಟೊ, ಮಾರ್ಗನ್‌ ಹಾಗೂ ಮೊಯಿನ್‌ ಅಲಿ ವಿಕೆಟ್‌ಗಳು ಪತನವಾಗುವುದರ ಮೂಲಕ ಆತಂಕಕ್ಕೆ ಒಳಗಾಯಿತು.

ಮುರಿಯದ ಏಳನೇ ವಿಕೆಟ್‌ ಜೊತೆಯಾಟದಲ್ಲಿ ಬಿಲ್ಲಿಂಗ್ಸ್‌ (ಔಟಾಗದೆ 46 ) ಹಾಗೂ ವಿಲ್ಲಿ (ಔಟಾಗದೆ 47) 79 ರನ್‌ ಸೇರಿಸಿ 17 ಓವರ್‌ಗಳು ಉಳಿದಿರುವಂತೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ವಿಲ್ಲಿ ಎರಡು ವಿಕೆಟ್‌ ಕೂಡ ಕಿತ್ತರು.

ಐರ್ಲೆಂಡ್‌ ತಂಡದ ಬ್ಯಾಟಿಂಗ್‌ನಲ್ಲಿ ಕರ್ಟಿಸ್ ಕ್ಯಾಂಫರ್‌ (68) ಅವರ ಹೋರಾಟ ಗಮನ ಸೆಳೆಯಿತು.

ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಮಂಗಳವಾರ (ಆಗಸ್ಟ್ 4) ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌: 50 ಓವರ್‌ಗಳಲ್ಲಿ 9ಕ್ಕೆ 212 (ಕರ್ಟಿಸ್‌ ಕ್ಯಾಂಫರ್‌ 68, ಹ್ಯಾರಿ ಟೆಕ್ಟರ್‌ 28, ಸಿಮಿ ಸಿಂಗ್‌ 25; ಆದಿಲ್‌ ರಶೀದ್‌ 34ಕ್ಕೆ 3, ಡೇವಿಡ್‌ ವಿಲ್ಲಿ 48ಕ್ಕೆ 2, ಸಕೀಬ್‌ ಮೆಹಮೂದ್‌ 45ಕ್ಕೆ 2). ಇಂಗ್ಲೆಂಡ್‌ 32.3 ಓವರ್‌ಗಳಲ್ಲಿ 6ಕ್ಕೆ 216 (ಜಾನಿ ಬೆಸ್ಟೊ 82, ಸ್ಯಾಮ್‌ ಬಿಲಿಂಗ್ಸ್‌ 46, ಡೇವಿಡ್‌ ವಿಲ್ಲಿ 47; ಜೋಷ್‌ ಲಿಟಲ್‌ 60ಕ್ಕೆ 3, ಕರ್ಟಿಸ್‌ ಕ್ಯಾಂಫರ್‌ 50ಕ್ಕೆ 2). ಫಲಿತಾಂಶ: ಇಂಗ್ಲೆಂಡ್‌ಗೆ ನಾಲ್ಕು ವಿಕೆಟ್‌ಗಳ ಗೆಲುವು, ಸರಣಿಯಲ್ಲಿ 2–0 ಮುನ್ನಡೆ. ಮುಂದಿನ ಪಂದ್ಯ: ಆಗಸ್ಟ್‌ 4, ಸೌತಾಂಪ್ಟನ್‌ನಲ್ಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು