ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LSG vs DC | ಜಯದ ಓಟ ಮುಂದುವರಿಸುವತ್ತ ರಾಹುಲ್ ಚಿತ್ತ

ಲಖನೌ ಸೂಪರ್‌ಜೈಂಟ್ಸ್‌–ಡೆಲ್ಲಿ ಕ್ಯಾಪಿಟಲ್ಸ್‌ ಹಣಾಹಣಿ ಇಂದು; ಪೂರನ್, ಸ್ಟಬ್ಸ್‌ ಮೇಲೆ ಕಣ್ಣು
Published 12 ಏಪ್ರಿಲ್ 2024, 0:03 IST
Last Updated 12 ಏಪ್ರಿಲ್ 2024, 0:03 IST
ಅಕ್ಷರ ಗಾತ್ರ

ಲಖನೌ: ಸತತ ಮೂರು ಪಂದ್ಯಗಳಲ್ಲಿ ಗೆದ್ದು ತುಂಬು ಆತ್ಮವಿಶ್ವಾಸದಲ್ಲಿ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಕಣಕ್ಕಿಳಿಯಲಿದೆ. 

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡವು ಐದು ಪಂದ್ಯಗಳಲ್ಲಿ ಆಡಿದೆ. ಒಂದರಲ್ಲಿ ಗೆದ್ದು, ಉಳಿದ ಪಂದ್ಯಗಳಲ್ಲಿ ಸೋತಿದೆ. ರಾಹುಲ್ ಬಳಗವು ಮೂರನೇ ಸ್ಥಾನದಲ್ಲಿದೆ. ಎಲ್ಲ ವಿಭಾಗಗಳಲ್ಲಿಯೂ ಸಮತೋಲನ ಸಾಧಿಸಿರುವ ಲಖನೌ ತಂಡವು ಮೇಲ್ನೋಟಕ್ಕೆ ಡೆಲ್ಲಿಗಿಂತ ಬಲಿಷ್ಠವಾಗಿದೆ.

ಆದರೆ ತಂಡದ ಯುವ ವೇಗಿ ಮಯಂಕ್ ಯಾದವ್ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. 150 ಕಿಲೋಮೀಟರ್ಸ್‌ಗಿಂತಲೂ ಹೆಚ್ಚು ವೇಗದ ಎಸೆತಗಳನ್ನು ಪ್ರಯೋಗಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಲಖನೌ ತಂಡವು ಎರಡು ಪಂದ್ಯಗಳಲ್ಲಿ ಜಯಿಸಲು 21 ವರ್ಷದ ಬೌಲರ್ ಕಾರಣರಾಗಿದ್ದರು.  ಕಳೆದ ಪಂದ್ಯದಲ್ಲಿ ಅವರು ಗುಜರಾತ್ ಟೈಟನ್ಸ್ ಎದುರು ಒಂದು ಓವರ್ ಮಾತ್ರ ಹಾಕಿದ್ದರು. ಹೊಟ್ಟೆನೋವಿನಿಂದಾಗಿ ಅಂಗಳ ತೊರೆದು ವಿಶ್ರಾಂತಿಗೆ ತೆರಳಿದ್ದರು. ಅವರ ಗೈರು ಹಾಜರಿಯಲ್ಲಿ ಯಶ್ ಠಾಕೂರ್ ಐದು ವಿಕೆಟ್ ಗಳಿಸಿ ಮಿಂಚಿದ್ದರು. 

ಅವರೊಂದಿಗೆ ನವೀನ್ ಉಲ್ ಹಕ್, ಕೃಣಾಲ್ ಪಾಂಡ್ಯ ಮತ್ತು ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿ  ಅವರು ಬೌಲಿಂಗ್ ಹೊಣೆ ನಿಭಾಯಿಸುವರು. ಬ್ಯಾಟಿಂಗ್‌ ಕೂಡ ಬಲಿಷ್ಠವಾಗಿದೆ. ಕ್ವಿಂಟನ್ ಡಿ ಕಾಕ್ ಮತ್ತು  ರಾಹುಲ್ ಉತ್ತಮ ಆರಂಭ ನೀಡುವ ಸಮರ್ಥರು. ಕ್ವಿಂಟನ್ ಈಗಾಗಲೇ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ.  ನಿಕೊಲಸ್ ಪೂರನ್ ಅಂತೂ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಅವರಿಂದಾಗಿ ತಂಡಕ್ಕೆ ಕೊನೆ ಹಂತದ ಓವರ್‌ಗಳಲ್ಲಿ ರನ್‌ಗಳು ಸರಾಗವಾಗಿ ಹರಿದು ಬರುತ್ತಿವೆ. ಆದರೆ ಕನ್ನಡಿಗ ದೇವದತ್ತ ಪಡಿಕ್ಕಲ್ ಇನ್ನೂ ಲಯ ಕಂಡುಕೊಳ್ಳಬೇಕಿದೆ. 

ಈಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದ ಡೆಲ್ಲಿ ಬೌಲರ್‌ಗಳು ಸೋಲಿಗೆ ಕಾರಣರಾಗಿದ್ದರು. ಅನುಭವಿ ಇಶಾಂತ್ ಶರ್ಮಾ, ಖಲೀಲ್ ಅಹಮದ್, ಸ್ಪಿನ್ನರ್ ಅಕ್ಷರ್ ಪಟೇಲ್ ಹಾಗೂ ಹೆನ್ರಿಚ್ ನಾಕಿಯಾ ಅವರು ಪ್ರಮುಖ ಬೌಲರ್‌ಗಳಾಗಿದ್ದಾರೆ. 

ಆದರೆ ನಾಯಕ ರಿಷಭ್ ಬ್ಯಾಟಿಂಗ್ ಲಯಕ್ಕೆ ಮರಳಿರುವುದು ತಂಡದಲ್ಲಿ ಸಮಾಧಾನ ಮೂಡಿಸಿದೆ. ತಂಡದಲ್ಲಿರುವ ಪಟಾಕಿಯಂತೆ ಸಿಕ್ಸರ್, ಬೌಂಡರಿ ಸಿಡಿಸುವ ಟ್ರಿಸ್ಟನ್ ಸ್ಟಬ್ಸ್‌ ಅವರಿಂದಾಗಿ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಅಭಿಷೆಕ್ ಪೊರೆಲ್ ಕೂಡ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಆದರೆ ಉಳಿದವರಿಂದ ನಿರೀಕ್ಷೆಯ ಮಟ್ಟದಲ್ಲಿ ರನ್‌ಗಳು ಹರಿದಿಲ್ಲ.  

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ:ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಿಸ್ಟನ್ ಸ್ಟಬ್ಸ್‌   –ಪಿಟಿಐ ಚಿತ್ರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಿಸ್ಟನ್ ಸ್ಟಬ್ಸ್‌   –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT