ಭಾನುವಾರ, ನವೆಂಬರ್ 29, 2020
20 °C

ಹಸಿರು ಅಂಗಳದಲ್ಲಿ ಹಸನಾದ ಹಳ್ಳಿ ಹುಡುಗನ ಬದುಕು

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಹಳ್ಳಿಯ ಹಸಿರಿನಲ್ಲಿ ಬೆಳೆದ ಆ ಬಾಲಕ ದೊಡ್ಡವನಾದಾಗ ಸಂಚಾರದಟ್ಟಣೆಯ ಕೋಲ್ಕತ್ತದ ಬೀದಿಗಳಲ್ಲಿ 'ಹಸಿರು ಪೊಲೀಸ್’ ವೇಷ ತೊಟ್ಟು ವಾಹನಗಳನ್ನು ನಿಯಂತ್ರಿಸುತ್ತ ಜನಸೇವೆ ಮಾಡುವ ತನ್ನ ಕನಸು ನನಸು ಮಾಡಿಕೊಂಡ. ಜೀವನ ನಿರ್ವಹಣೆಗಾಗಿ ಕೆಲಸ ಮಾಡುತ್ತಿದ್ದಾಗಲೂ ಕ್ರಿಕೆಟ್ ಆಡುವ ಆಸೆ ಕೈಬಿಟ್ಟಿರಲಿಲ್ಲ. ಕ್ರಿಕೆಟಿಗನಾಗಲು ಸಾಧ್ಯವಾಗದೇ ಇದ್ದರೂ ಹಸಿರು ಅಂಗಣದಲ್ಲಿ ಖ್ಯಾತ ಆಟಗಾರರಿಗೆ ’ಸಹಾಯ‘ ಮಾಡುವ ಅವಕಾಶ ದೊರಕಿತು. ಭಾರತ ತಂಡದ ನೆರವು ಸಿಬ್ಬಂದಿಯಾಗುವ ಭಾಗ್ಯದ ಬಾಗಿಲು ತೆರೆಯಿತು.

ಪಶ್ಚಿಮ ಬಂಗಾಳದ ದಯಾನಂದ ಗರಾನಿ ಕಂಡ ಕನಸು ನನಸಾದ ಸಂದರ್ಭ ಇದು. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಬಂಜಾಬ್ ತಂಡದ ಥ್ರೋಡೌನ್ ಸಿಬ್ಬಂದಿಯಾಗಿದ್ದ ಅವರು ಈಗ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿರುವ ವಿರಾಟ್ ಕೊಹ್ಲಿ ಬಳಗದೊಂದಿಗೆ ತೆರಳಲು ಆಯ್ಕೆಯಾಗಿದ್ದಾರೆ. 28 ವರ್ಷದ ಗರಾನಿ ಈಗ ದುಬೈನ ಬಯೊಬಬಲ್‌ನಲ್ಲಿ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಅವರಂಥ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ’ಬೌಲಿಂಗ್‘ ಮಾಡುತ್ತಿದ್ದಾರೆ. 

ಪೂರ್ವ ಮೇದಿನಿಪುರ (ಈಸ್ಟ್ ಮಿಡ್ನಾಪುರ್) ಜಿಲ್ಲೆಯ ಕೋಲಾಘಾಟ್‌ನ ಕೃಷಿಕ ಕುಟುಂಬದಲ್ಲಿ ಬೆಳೆದ ದಯಾನಂದ ಅವರು ಪಂಜಾಬ್ ತಂಡ ಐಪಿಎಲ್‌ನಿಂದ ಹೊರಬಿದ್ದಾಗ ಭಾರತಕ್ಕೆ ವಾಪಸಾಗಲು ಸಜ್ಜಾಗಿದ್ದರು. ಅಷ್ಟರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಗಳಿಂದ ಅಚ್ಚರಿಯ ಕರೆ ಬಂತು. ಭಾರತ ತಂಡದ ಜೊತೆ ಇದ್ದ ಕರ್ನಾಟಕದ ರಾಘವೇಂದ್ರ (ರಘು) ಅವರಿಗೆ ಅನಾರೋಗ್ಯ ಕಾಡಿದ್ದರಿಂದ ದಯಾನಂದ ಅವರಿಗೆ ಅಪರೂಪದ ಅವಕಾಶ ದಕ್ಕಿತ್ತು.

ಕೃಷಿಕರ ಕುಟುಂಬದಲ್ಲಿ ಜನಿಸಿದ ದಯಾನಂದ ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಮಧ್ಯಮ ವೇಗದ ಬೌಲರ್ ಆಗಿದ್ದ ಅವರಿಗೆ ಕೋಲ್ಕತ್ತ ಮಹಾನಗರಕ್ಕೆ ತೆರಳಿ ತರಬೇತಿ ಪಡೆಯುವಷ್ಟು ಆರ್ಥಿಕ ಬಲ ಇರಲಿಲ್ಲ. ಆದರೆ ಊರಲ್ಲಿ ನಡೆದ ಟೂರ್ನಿಯೊಂದರ ಉದ್ಘಾಟನೆಗೆ ಬಂದಿದ್ದ ಬೌಲರ್ ಅಶೋಕ್ ದಿಂಡಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ನೀಡಿದ ಸಲಹೆಗಳು ಅವರ ಬದುಕಿನ ದಿಕ್ಕನ್ನೇ ಬದಲಿಸಿದವು. ಅವರು ದಯಾನಂದ ಅವರಿಗೆ ಆರ್ಥಿಕ ನೆರವು ನೀಡಬಲ್ಲವರ ಪರಿಚಯ ಮಾಡಿಕೊಟ್ಟರು. ಹೀಗೆ ಕೋಲ್ಕತ್ತ ತಲುಪಿದ ದಯಾನಂದ, ಬಾರಾನಗರ ಸ್ಪೋರ್ಟಿಂಗ್ ಕ್ಲಬ್ ಮತ್ತು ವೈಟ್ ಬಾರ್ಡರ್ ಸ್ಪೋರ್ಟಿಂಗ್ ಯೂನಿಯನ್‌ ಸೇರಿದರು. 2013ರಿಂದ ಕೋಲ್ಕತ್ತ ಪೊಲೀಸರ ನೆರವಿಗೆ ನಿಂತರು. 2016ರಲ್ಲಿ ಆಂಧ್ರ ರಣಜಿ ತಂಡ ಸೇರಿದರು. ಅಲ್ಲಿ, ಥ್ರೋಡೌನ್ ಕಲೆ ಕರಗತ ಮಾಡಿಕೊಂಡರು. ಹಾಗೆ ಪಂಜಾಬ್‌ನ ಮುನೀಶ್‌ ಬಾಲಿ ಅವರ ಕಣ್ಣಿಗೆ ಬಿದ್ದರು. ಕೋಚ್ ಅನಿಲ್ ಕುಂಬ್ಳೆ, ನಾಯಕ ಕೆ.ಎಲ್‌.ರಾಹುಲ್, ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಮುಂತಾದವರೊಂದಿಗೆ ಡ್ರೆಸಿಂಗ್ ಕೊಠಡಿಯಲ್ಲಿ ಕಳೆದ ದಯಾನಂದ ಅವರ ವೃತ್ತಿಬದುಕು ಈಗ ಮತ್ತೆ ಮಗ್ಗಲು ಬದಲಿಸಿದೆ.

‘ದೇಶಕ್ಕಾಗಿ ಏನಾದರೂ ಮಾಡಬೇಕು ಎಂದು ಮನಸ್ಸು ಸದಾ ತುಡಿಯುತ್ತಿತ್ತು. ಹೀಗಾಗಿ ಸಿವಿಲ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಭಾರತ ಕ್ರಿಕೆಟ್ ತಂಡದ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ದೊಡ್ಡ ಭಾಗ್ಯ. ವಿಷಯ ತಿಳಿದಾಗ ಮೊದಲು ನಂಬಲಾಗಲಿಲ್ಲ. ಕೆಲವು ನಿಮಿಷ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಸುಧಾರಿಸಿಕೊಂಡು ತಂದೆಗೆ ಕರೆ ಮಾಡಿ ಸಂತಸ ಹಂಚಿಕೊಂಡೆ. ಅವರಿಗೆ ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ‘ ಎಂದು ಹೇಳುವಷ್ಟರಲ್ಲಿ ದಯಾನಂದ ಭಾವುಕರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು