ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಕ್ಕಿ ಮೌಸ್ ಆಯ್ಕೆ ಸಮಿತಿ’: ಫಾರೂಕ್ ವ್ಯಂಗ್ಯ

ಅನುಷ್ಕಾ ಶರ್ಮಾಗೆ ಚಹಾ ಕೊಟ್ಟಿದ್ದ ಆಯ್ಕೆ ಸಮಿತಿ ಸದಸ್ಯ; ಹಿರಿಯ ಕ್ರಿಕೆಟಿಗ ಕಿಡಿ
Last Updated 31 ಅಕ್ಟೋಬರ್ 2019, 19:54 IST
ಅಕ್ಷರ ಗಾತ್ರ

ಪುಣೆ:’ಇಂಗ್ಲೆಂಡ್‌ನಲ್ಲಿ ಈಚೆಗೆ ನಡೆದಿದ್ದ ಕ್ರಿಕೆಟ್‌ ಪಂದ್ಯವೊಂದರಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಚಹಾ ಸರಬರಾಜು ಮಾಡುತ್ತಿದ್ದರು. ಅದೊಂದು ಮಿಕ್ಕಿ ಮೌಸ್‌ ಆಯ್ಕೆ ಸಮಿತಿ’ ಎಂದು ಹಿರಿಯ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಕಿಡಿ ಕಾರಿದ್ದಾರೆ.
ಗುರುವಾರ ಇಲ್ಲಿ ಭಾರತ ತಂಡದ ಮಾಜಿ ಆಟಗಾರ ದಿಲೀಪ್ ವೆಂಗಸರ್ಕಾರ್ ಅವರ ಕ್ರಿಕೆಟ್ ತರಬೇತಿ ಅಕಾಡೆಮಿಯನ್ನು ಉದ್ಘಾಟಿಸಿದ ಇಂಜಿನಿಯರ್, ಆಂಗ್ಲ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ರೀತಿ ಹೇಳಿದ್ದಾರೆ. ಇತ್ತೀಚೆಗೆ ನಿರ್ಗಮಿಸಿದ ಸಿಒಎ (ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ)ಯನ್ನು ಟೀಕಿಸಿರುವ 82 ವರ್ಷದ ಎಂಜಿನಿಯರ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.

‘ತಂಡದ ಆಯ್ಕೆಯಲ್ಲಿ ವಿರಾಟ್ ಕೊಹ್ಲಿಯ ಅಭಿಪ್ರಾಯವೇ ಹೆಚ್ಚಿನ ಪ್ರಮಾಣದಲ್ಲಿದೆ. ಅದು ಒಳ್ಳೆಯದೇ. ಆದರೆ, ಆಯ್ಕೆ ಸಮಿತಿಯ ಸದಸ್ಯರ ಅರ್ಹತೆ ಏನು? 10–12 ಟೆಸ್ಟ್ ಪಂದ್ಯಗಳನ್ನೂ ಆಡದವರು ಸಮಿತಿಯಲ್ಲಿದ್ದಾರೆ. ಈಚೆಗೆ ವಿಶ್ವಕಪ್ ಟೂರ್ನಿ ಸಂದರ್ಭದಲ್ಲಿ ಭಾರತ ತಂಡದ ಪೋಷಾಕು ಧರಿಸಿದ್ದ ವ್ಯಕ್ತಿಯೊಬ್ಬ ಅನುಷ್ಕಾಗೆ ಚಹಾ ನೀಡುತ್ತಿದ್ದ. ಆತ ಆಯ್ಕೆ ಸಮಿತಿಯ ಸದಸ್ಯ ಎಂದು ಕೆಲವರು ನನಗೆ ಮಾಹಿತಿ ನೀಡಿದ್ದರು. ಇಂತಹವರು ಸಮಿತಿಯಲ್ಲಿರಬೇಕೆ? ವೆಂಗಸರ್ಕರ್ ಅವರಂತಹ ಹಿರಿಯರು ಸಮಿತಿಯನ್ನು ಮುನ್ನಡೆಸಬೇಕು’ ಎಂದರು.

‘ಆಯ್ಕೆಗಾರರು ರಿಷಭ್ ಪಂತ್ ಅವರಿಗೆ ಉತ್ತಮ ಅವಕಾಶ ನೀಡಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ರಿಷಭ್‌ಗೆ ದಿನೇಶ್ ಕಾರ್ತಿಕ್ ಬದಲು ಅವಕಾಶ ನೀಡಬೇಕಾಗಿತ್ತು’ ಎಂದರು.

‘ಎರಡೂವರೆ ವರ್ಷಗಳ ಕಾಲ ಸಿಒಎ ಕಾರ್ಯನಿರ್ವಹಿಸಿದ್ದು ಮತ್ತು ಅವರಿಗೆ ತಲಾ ₹ 3.5 ಕೋಟಿ ನೀಡಿದ್ದು ಕೂಡ ವ್ಯರ್ಥ. ಅವರಿಗೆ ಕ್ರಿಕೆಟ್‌ ಕುರಿತು ಏನೂ ಗೊತ್ತಿಲ್ಲ. ಈ ಅವಧಿಯು ಅವರಿಗೆ ಒಂದು ರೀತಿಯ ಹನಿಮೂನ್ ಆಗಿತ್ತು’ ಎಂದು ವ್ಯಂಗ್ಯವಾಡಿದರು.

ಪ್ರಸಾದ್ ಕಿಡಿ: ಫಾರೂಕ್ ಅವರು ಮಾತುಗಳು ಕ್ಷುಲ್ಲಕವಾಗಿವೆ. ಆಯ್ಕೆ ಸಮಿತಿ, ಭಾರತ ತಂಡದ ನಾಯಕ ಮತ್ತು ಅವರ ಪತ್ನಿಯ ಕುರಿತು ಅಗೌರವಯುತವಾಗಿ ಮಾತನಾಡಿದ್ದಾರೆ. ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಕಿಡಿ ಕಾರಿದ್ದಾರೆ.

ಅನುಷ್ಕಾ ಆಕ್ರೋಶ: ‘ವಿಶ್ವಕಪ್ ಟೂರ್ನಿಯಲ್ಲಿ ನಾನು ಬಂದಿದ್ದು ಒಂದೇ ಪಂದ್ಯಕ್ಕೆ. ಅದೂ ಕುಟುಂಬಕ್ಕೆ ಮೀಸಲಾದ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದೆ. ಆಯ್ಕೆ ಸಮಿತಿಯ ಗ್ಯಾಲರಿಯಲ್ಲಿ ಕುಳಿತಿರಲಿಲ್ಲ. ನಿಮಗೆ (ಫಾರೂಕ್) ಆಯ್ಕೆ ಸಮಿತಿಯ ಅರ್ಹತೆ ಕುರಿತು ಹೇಳಿಕೆ ನೀಡುವುದಿದ್ದರೆ ನೀಡಿ. ನನ್ನ ಹೆಸರು ಎಳೆದು ವಿಷಯವನ್ನು ಅತಿರಂಜಿತಗೊಳಿಸುವುದು ನಿಮಗೆ ಶೋಭೆ ತರುವುದಿಲ್ಲ’ ಎಂದು ವಿರಾಟ್ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT