ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಐಪಿಎಲ್: ಬೌಂಡರಿ ಗೆರೆಯ ಬಳಿ ಫೀಲ್ಡರ್‌ಗಳ ಜಾದೂ

Last Updated 26 ಅಕ್ಟೋಬರ್ 2020, 7:33 IST
ಅಕ್ಷರ ಗಾತ್ರ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಹಾಲಿ 13ನೇ ಆವೃತ್ತಿಯ ಪಂದ್ಯ. ಸೆಪ್ಟೆಂಬರ್ 27ರಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಹಣಾಹಣಿ. ರಾಜಸ್ಥಾನ ರಾಯಲ್ಸ್ ಇನಿಂಗ್ಸ್‌ನ ಎಂಟನೇ ಓವರ್‌. ಸ್ಪಿನ್ನರ್ ಮುರುಗನ್ ಅಶ್ವಿನ್ ಹಾಕಿದ ಎಸೆತವನ್ನು ಬ್ಯಾಕ್‌ಫುಟ್‌ನಲ್ಲಿ ಆಡಿದ ಸಂಜು ಸ್ಯಾಮ್ಸನ್ ಚೆಂಡನ್ನು ಮಿಡ್ ಆನ್ ಮತ್ತು ಮಿಡ್‌ವಿಕೆಟ್ ನಡುವಿನಿಂದ ಬೌಂಡರಿಯಾಚೆ ಎತ್ತಲು ಯತ್ನಿಸಿದರು. ಇನ್ನೇನು ಚೆಂಡು ಬೌಂಡರಿ ಗೆರೆಯಿಂದ ಆಚೆ ಬಿದ್ದೇ ಬಿಟ್ಟಿತು ಎಂದುಕೊಂಡಿದ್ದವರು ಕೊನೆಯಲ್ಲಿ ನಡೆದ ‘ಮ್ಯಾಜಿಕ್’ಗೆ ದಂಗಾದರು. ಬೌಂಡರಿ ಗೆರೆ ಬಳಿ ಇದ್ದ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಚೆಂಡನ್ನು ಕ್ಯಾಚ್ ಮಾಡಲು ಪ್ರಯತ್ನಿಸಿದರು. ಗಾಳಿಯಲ್ಲೇ ಬೌಂಡರಿ ಗೆರೆಯನ್ನು ದಾಟಿ ಜಿಗಿದರು. ಚೆಂಡು ಕೈಸೇರಿತು. ಆದರೆ ಆಗ ಅವರ ದೇಹ ಬೌಂಡರಿ ಗೆರೆಯಿಂದ ತುಂಬ ಆಚೆ ಇತ್ತು. ಇನ್ನೇನು ನೆಲಕ್ಕೆ ಬೀಳುವುದು ಖಚಿತ ಎಂದು ಮನವರಿಕೆಯಾದಾಕ್ಷಣ ಚೆಂಡನ್ನು ಅಂಗಣದ ಒಳಗೆ ಎಸೆದರು; ಸ್ಯಾಮ್ಸನ್ ಖಾತೆಗೆ ಸೇರಬೇಕಾದ ಸಿಕ್ಸರ್ ಕಸಿದುಕೊಂಡು, ಕಿಂಗ್ಸ್ ಇಲೆವನ್‌ಗೆ ’ಉಳಿತಾಯ’ ಮಾಡಿಕೊಟ್ಟರು.

ರೋಚಕತೆಯೇ ತುಂಬಿರುವ ಚುಟುಕು ಕ್ರಿಕೆಟ್‌ನಲ್ಲಿ ಇಂಥ ನೋಟಗಳು ಸಾಮಾನ್ಯ ಎಂಬಂತೆ ಕಾಣಸಿಗುತ್ತವೆ. ಐಪಿಎಲ್‌ ಟೂರ್ನಿಯಲ್ಲಂತೂ ಫೀಲ್ಡರ್‌ಗಳ ಚುರುಕಿನ ಆಟ ಸವಿಯುವ ಅದೃಷ್ಟ ಸಾಕಷ್ಟಿದೆ. ಹಿಂದೆಲ್ಲ ಒಂದು ರನ್ನಿಂಗ್ ಕ್ಯಾಚ್, ಡೈವ್ ಮಾಡಿ ಒಂದೋ ಎರಡೋ ರನ್ ಉಳಿಸುವುದು, ಬೌಂಡರಿ ಗೆರೆ ದಾಟಲು ಮುನ್ನುಗ್ಗುವ ಚೆಂಡನ್ನು ಓಡಿಬಂದು ಕಾಲಲ್ಲಿ ತಡೆಯುವುದು ಮುಂತಾದವನ್ನು ಮಹಾನ್ ಸಾಧನೆಯೆಂದೇ ಪರಿಗಣಿಸಲಾಗುತ್ತಿತ್ತು. ಆದರೆ ಜಾಂಟಿ ರೋಡ್ಸ್ ಅವರಂಥ ದಿಗ್ಗಜರ ರಂಗಪ್ರವೇಶ ಆದ ನಂತರ ಫೀಲ್ಡಿಂಗ್‌ನಲ್ಲಿ ಹೊಸ ಹೊಸ ಪ್ರಯೋಗಗಳು ಆರಂಭಗೊಂಡವು. ಚೆಂಡನ್ನು ತಡೆಯುವ ಕಲೆ ಹೊಸ ವ್ಯಾಖ್ಯಾನ ಪಡೆದುಕೊಂಡಿತು. ಚುಟುಕು ಕ್ರಿಕೆಟ್‌ನಲ್ಲಿ ಇದು ವಿಸ್ತಾರಗೊಳ್ಳುತ್ತ ಸಾಗಿತು. ಐಪಿಎಲ್‌ನ 2018ರ ಆವೃತ್ತಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಟ್ರೆಂಟ್ ಬೌಲ್ಟ್ ಪಡೆದ ಎರಡು ಕ್ಯಾಚ್‌ಗಳು ಭಾರಿ ಸಂಚಲನ ಉಂಟುಮಾಡಿದ್ದವು.

ಸನ್‌ರೈಸರ್ಸ್ ತಂಡದ ಅಲೆಕ್ಸ್ ಹೇಲ್ಸ್ ಅವರು ಹೊಡೆದ ಚೆಂಡನ್ನು ಬೌಂಡರಿ ಗೆರೆಯಲ್ಲಿ ಗಾಳಿಯಲ್ಲಿ ತೇಲಿ ಹಿಡಿತಕ್ಕೆ ಪಡೆದುಕೊಂಡು ಅದೇ ಲಯದಲ್ಲಿ ವಾಪಸ್ ಅಂಗಣದೊಳಗೆ ’ಲ್ಯಾಂಡ್‘ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡಿವಿಲಿಯರ್ಸ್ ಅಂದು ಭಾರಿ ಸುದ್ದಿಯಾಗಿದ್ದರು. ಅದೇ ರೀತಿ ಆಗ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿದ್ದ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕ್ಯಾಚ್ ಪಡೆದದ್ದು ಕೂಡ ಫೀಲ್ಡರ್‌ಗಳ ಚಾಣಾಕ್ಷತೆಗೆ ಕನ್ನಡಿಯಾಗಿತ್ತು. 2013ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ರಿಕಿ ಪಾಂಟಿಂಗ್, 2014ರಲ್ಲಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತದ ಕ್ರಿಸ್ ಲಿನ್, 2015ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಫಾಫ್ ಡು ಪ್ಲೆಸಿ, ಅದೇ ವರ್ಷ ಕಿಂಗ್ಸ್ ಇಲೆವನ್‌ ಎದುರಿನ ಪಂದ್ಯದಲ್ಲಿರಾಜಸ್ಥಾನ ರಾಯಲ್ಸ್‌ನ ಟಿಮ್ ಸೌಥಿ ಮತ್ತು ಕರುಣ್ ನಾಯರ್ ಜೋಡಿ ಪಡೆದ ಕ್ಯಾಚ್‌ಗಳು, 2017ರಲ್ಲಿ ಕೋಲ್ಕತ್ತ ಎದುರಿನ ಪಂದ್ಯದಲ್ಲಿ ಡೆಲ್ಲಿ ತಂಡದ ಸಂಜು ಸ್ಯಾಮ್ಸನ್, ಈ ಬಾರಿ ನಿಕೋಲಸ್ ಪೂರನ್ ಮಾಡಿದಂತೆ ಸಿಕ್ಸರ್‌ ’ಸೇವ್’ ಮಾಡಿದ್ದು ಕೂಡ ಐಪಿಎಲ್‌ನ ರೋಚಕ ಕ್ಯಾಚ್‌ಗಳ ಪಟ್ಟಿಯಲ್ಲಿ ದಾಖಲಾಗಿವೆ.

ಯುಎಇಯಲ್ಲಿ ರೋಮಾಂಚ‌ಕ ಪ್ರದರ್ಶನ

ಯುಎಇಯಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್‌ನಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡರ್‌ಗಳು ರೋಮಾಂಚಕಾರಿ ಪ್ರದರ್ಶನ ನೀಡಿದ್ದಾರೆ. ಈ ಪೈಕಿ ರಿಲೆ ಕ್ಯಾಚ್‌ಗಳು ಕ್ರಿಕೆಟ್ ಪ್ರಿಯರ ಮನಸೂರೆಗೊಂಡಿವೆ. ಕೋಲ್ಕತ್ತದ ಸುನಿಲ್ ನಾರಾಯಣ್ ಮಿಡ್‌ವಿಕೆಟ್‌ ಕಡೆಗೆ ಎತ್ತಿದ ಚೆಂಡನ್ನು ಬೌಂಡರಿ ಗೆರೆ ಬಳಿ ಡೈವ್ ಮಾಡಿ ಹಿಡಿತಕ್ಕೆ ಪಡೆದುಕೊಂಡು ಒಂದು ಮೀಟರ್ ದೂರದ ವರೆಗೆ ಜಾರಿಕೊಂಡು ಹೋದ ಚೆನ್ನೈ ಸೂಪರ್ ಕಿಂಗ್ಸ್‌ನ ರವೀಂದ್ರ ಜಡೇಜ ಬೌಂಡರಿ ಗೆರೆಗೆ ಮೈ ಸೋಕುವ ಹಂತದಲ್ಲಿ ಫಾಫ್ ಡು ಪ್ಲೆಸಿಯತ್ತ ಚೆಂಡು ಎಸೆದ ನೋಟ ನಯನಮನೋಹರವಾಗಿತ್ತು.

ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್ ಮಿಡ್‌ಆನ್‌ನತ್ತ ಬಾರಿಸಿದ ಚೆಂಡನ್ನು ಬೌಂಡರಿ ಗೆರೆಯ ಬಳಿ ಮೇಲಕ್ಕೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಮಾಡಿದ ಮುಂಬೈ ಇಂಡಿಯನ್ಸ್‌ನ ಕೀರನ್ ಪೊಲಾರ್ಡ್ ಚೆಂಡು ಕೈಯಿಂದ ಜಾರುತ್ತಿದ್ದಂತೆ ಎಚ್ಚರಗೊಂಡು ಎಡಕ್ಕೆ ಬಾಗಿ ಮತ್ತೊಂದು ಕೈಯ ಮುಷ್ಠಿಯೊಳಗೆ ಸೇರಿಸಿದ್ದು ಕೂಡ ಕ್ರಿಕೆಟ್ ಪ್ರಿಯರನ್ನು ಮುದಗೊಳಿಸಿತ್ತು. ಸನ್‌ರೈಸರ್ಸ್‌ನ ಡೇವಿಡ್ ವಾರ್ನರ್ ಮಿಡ್‌ಆನ್‌ ಮೇಲೆ ಎತ್ತಿದ ಚೆಂಡನ್ನು ಬೌಂಡರಿ ಗೆರೆ ಬಳಿ ಕ್ಯಾಚ್ ಪಡೆದು ಗಾಳಿಯಲ್ಲಿ ತೇಲಿಬಿಟ್ಟು ಹೊರಗೆ ಹೋಗಿ ವಾಪಸ್ ಬಂದು ಮತ್ತೆ ಕ್ಯಾಚ್‌ ಪಡೆದ ಫಾಫ್ ಡು ಪ್ಲೆಸಿ ಅವರ ಸಾಧನೆ, ನಿಕೋಲಸ್ ಪೂರನ್ ಹೊಡೆದ ಚೆಂಡನ್ನು ವಶಕ್ಕೆ ಪಡೆದು ’ಬೌಂಡರಿ’ ದಾಟದಂತೆ ತಮ್ಮನ್ನು ತಾವು ನಿಯಂತ್ರಿಸಿದ ರವೀಂದ್ರ ಜಡೇಜ ತೋರಿದ ಸಾಮರ್ಥ್ಯವೇನು ಕಡಿಮೆಯೇ...? ಕೋಲ್ಕತ್ತದ ಆ್ಯಂಡ್ರೆ ರಸೆಲ್ ಲಾಫ್ಟ್ ಮಾಡಿದ ಚೆಂಡನ್ನು ಗಾಳಿಯಲ್ಲಿ ತೇಲಿ ಹಿಡಿತಕ್ಕೆ ಪಡೆದು ಅಂಗಣದೊಳಗೆ ಹಾಕುವಷ್ಟರಲ್ಲಿ ಬೆಂಗಳೂರು ತಂಡದ ದೇವದತ್ತ ಪಡಿಕ್ಕಲ್ ಬೌಂಡರಿ ಗೆರೆ ತುಳಿದಿದ್ದರೂ ಆ ‍ಪ್ರಯತ್ನವನ್ನು ಕೋಟ್ಯಂತರ ಕ್ರೀಡಾಪ್ರೇಮಿಗಳು ಮೆಚ್ಚಿದ್ದರು. ಮುಂಬೈ ಇಂಡಿಯನ್ಸ್ ಎದುರಿನ ಸೂಪರ್ ಓವರ್‌ನಲ್ಲಂತೂ ಒತ್ತಡದ ನಡುವೆಯೂ ಗಾಳಿಯಲ್ಲಿ ತೇಲಿ ಸಿಕ್ಸರ್ ತಡೆದು ಚೆಂಡನ್ನು ವಾಲಿಬಾಲ್ ಮಾದರಿಯಲ್ಲಿ ಅಂಗಣದ ಒಳಗೆ ಎಸೆದ ಮಯಂಕ್ ಅಗರವಾಲ್ ಅವರ ಸಮಯಪ್ರಜ್ಞೆಯ ಆಟ ಎಂಥವರನ್ನೂ ಚಕಿತಗೊಳಿಸದೇ ಇರದು. ಹೆಚ್ಚೇಕೆ, ಶನಿವಾರ ರಾತ್ರಿ ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬದಲಿ ಆಟಗಾರ ಜೆ.ಸುಚಿತ್ ಬೌಂಡರಿ ಗೆರೆಯ ಬಳಿ ಪಡೆದ ಅದ್ಭುತ ಕ್ಯಾಚ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಕಿಂಗ್ಸ್‌ಗೆ ಗೆಲುವು ತಂದುಕೊಡಲಿಲ್ಲವೇ...?

ಕಿಂಗ್ಸ್ ಇಲೆವನ್ ಎದುರಿನ ಪಂದ್ಯದಲ್ಲಿ ಬೌಂಡರಿ ಗೆರೆಯ ಆಚೆಯಿಂದ ಚೆಂಡು ಹಿಡಿದು ಅಂಗಣದ ಒಳಗೆ ಎಸೆದು ರನ್ ಉಳಿಸಿದ ರಾಜಸ್ಥಾನ ರಾಯಲ್ಸ್‌ನ ರಿಯಾನ್ ಪರಾಗ್, ರಾಜಸ್ಥಾನ ರಾಯಲ್ಸ್‌ನ ರಾಹುಲ್ ತೆವಾಟಿಯಾ ಹೊಡೆದ ಚೆಂಡನ್ನು ಕ್ಯಾಚ್‌ ಪಡೆದು ಸೀಮೆ ದಾಟುವ ಮುನ್ನ ಒಳಗೆ ಎಸೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಮೂಲ್ಯ ರನ್ ಉಳಿಸಿಕೊಟ್ಟ ಅಜಿಂಕ್ಯ ರಹಾನೆ, ರಾಜಸ್ಥಾನ ರಾಯಲ್ಸ್‌ನ ಸ್ಟೀವನ್ ಸ್ಮಿತ್ ಪಾಯಿಂಟ್ ಕಡೆಗೆ ಹಾಯಿಸಿದ ಚೆಂಡನ್ನು ಕ್ಯಾಚ್ ಮಾಡಿ ಬೌಂಡರಿ ಗೆರೆ ಬಳಿ ತಮ್ಮನ್ನು ತಾವೇ ನಿಯಂತ್ರಿಸಿಕೊಂಡ ಬೆಂಗಳೂರು ತಂಡದ ಶಹಬಾಸ್ ಅಹಮ್ಮದ್ ಮುಂತಾದವರು ಕೂಡ ಫೀಲ್ಡಿಂಗ್‌ನ ಹೀರೊಗಳಾಗಿ ಮಿಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT