ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಸಿಐ ಆಯ್ಕೆ ಸಮಿತಿಗೆ ಅಜಯ್‌ ರಾತ್ರಾ

Published 3 ಸೆಪ್ಟೆಂಬರ್ 2024, 15:58 IST
Last Updated 3 ಸೆಪ್ಟೆಂಬರ್ 2024, 15:58 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ ಅವರು ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ  ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಐವರು ಸದಸ್ಯರ ಸಮಿತಿಯಲ್ಲಿ ಸಲೀಲ್ ಅಂಕೋಲಾ ಅವರ ಬದಲಿಗೆ ರಾತ್ರಾ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೇಮಿಸಿದೆ.

ಅಜಿತ್ ಅಗರ್‌ಕರ್ ನೇತೃತ್ವದ ಸಮಿತಿಯಲ್ಲಿ ರಾತ್ರಾ ಅವರು ಉತ್ತರ ವಲಯದ ಪ್ರತಿನಿಧಿಯಾಗಿದ್ದಾರೆ.

ಕಳೆದ ವರ್ಷ ಅಗರ್‌ಕರ್‌ ಅವರನ್ನು ಮುಖ್ಯ ಆಯ್ಕೆಗಾರರಾಗಿ ನೇಮಿಸಿದ ನಂತರ ಆಯ್ಕೆ ಸಮಿತಿಯು ಪಶ್ಚಿಮ ವಲಯದಿಂದ ಅಂಕೋಲಾ ಸೇರಿಂತೆ ಇಬ್ಬರು ಆಯ್ಕೆಗಾರರನ್ನು ಹೊಂದಿತ್ತು.

‘ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯು ಮಂಗಳವಾರ ರಾತ್ರಾ ಅವರನ್ನು ಸಮಿತಿಯ ಹೊಸ ಸದಸ್ಯರನ್ನಾಗಿ ಹೆಸರಿಸಿದೆ. ರಾತ್ರಾ ಅವರು ಸಲಿಲ್ ಅಂಕೋಲಾ ಅವರ ಸ್ಥಾನ ತುಂಬಲಿದ್ದಾರೆ’ ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.

‘ನನಗೆ ಇದೊಂದು ದೊಡ್ಡ ಗೌರವ ಮತ್ತು ಸವಾಲು. ನಾನು ಭಾರತೀಯ ಕ್ರಿಕೆಟ್‌ಗೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ’ ಎಂದು 42 ವರ್ಷ ವಯಸ್ಸಿನ ರಾತ್ರಾ ಪಿಟಿಐಗೆ ತಿಳಿಸಿದ್ದಾರೆ.

ಬಿಸಿಸಿಐ ಜನವರಿಯಲ್ಲಿ ಆಯ್ಕೆಗಾರರ ​​ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ರಾತ್ರಾ, ರೀತಿಂದರ್ ಸಿಂಗ್ ಸೋಧಿ, ಅಜಯ್ ಮೆಹ್ರಾ ಮತ್ತು ಶಕ್ತಿ ಸಿಂಗ್ ಸೇರಿದಂತೆ ನಾಲ್ವರು ಅಭ್ಯರ್ಥಿಗಳನ್ನು ಅಶೋಕ್ ಮಲ್ಹೋತ್ರಾ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಜೂನ್‌ನಲ್ಲಿ ಸಂದರ್ಶನ ನಡೆಸಿತ್ತು.

2023ರ ಫೆಬ್ರುವರಿಯಲ್ಲಿ ಚೇತನ್ ಶರ್ಮಾ ಅವರು ನಿರ್ಗಮಿಸಿದ ನಂತರ ಆಯ್ಕೆ ಸಮಿತಿಯು ಉತ್ತರ ವಲಯದಿಂದ ಪ್ರಾತಿನಿಧ್ಯ ಹೊಂದಿರಲಿಲ್ಲ.

ರಾತ್ರಾ ಅವರು 2002ರಲ್ಲಿ ಆರು ಟೆಸ್ಟ್‌ ಮತ್ತು 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಆ್ಯಂಟೀಗಾದಲ್ಲಿ ನಡೆದ ಟೆಸ್ಟ್‌ನಲ್ಲಿ ಔಟಾಗದೆ 115 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT