ಸೋಮವಾರ, ಮಾರ್ಚ್ 8, 2021
22 °C

ಕಿವೀಸ್‌ ಕ್ರಿಕೆಟಿಗ ಜಾನ್ ಎಫ್‌. ರೀಡ್‌ ನಿಧನ

ಎಪಿ Updated:

ಅಕ್ಷರ ಗಾತ್ರ : | |

ವೆಲಿಂಗ್ಟನ್‌: ದೀರ್ಘಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಜಾನ್‌ ಎಫ್‌.ರೀಡ್‌ (64) ಮಂಗಳವಾರ ನಿಧನರಾದರು. ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದ ರೀಡ್‌ ತಮ್ಮ ತಂಡದ ಪರ 19 ಟೆಸ್ಟ್‌ಗಳನ್ನು ಆಡಿದ್ದು ಆರು ಶತಕಗಳನ್ನು ಬಾರಿಸಿದ್ದರು.

ಅವರ ಶತಕಗಳಲ್ಲಿ ಒಂದು ಶತಕವು (108), ಕಿವೀಸ್‌ ತಂಡಕ್ಕೆ, ಆಸ್ಟ್ರೇಲಿಯಾದ ವಿರುದ್ಧ 41 ರನ್‌ಗಳ ಪ್ರಸಿದ್ಧ ಟೆಸ್ಟ್‌ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿತ್ತು. ಬ್ರಿಸ್ಬೇನ್‌ನ ಗ್ಯಾಬಾದಲ್ಲಿ 1985ರ ನವೆಂಬರ್‌ನಲ್ಲಿ ನಡೆದ ಆ ಟೆಸ್ಟ್‌ ಪಂದ್ಯದಲ್ಲಿ ರೀಡ್‌, ಮತ್ತೊಬ್ಬ ಮಧ್ಯಮ ಕ್ರಮಾಂಕದ ಆಟಗಾರ ಮಾರ್ಟಿನ್‌ ಕ್ರೋವ್‌ (188) ಜೊತೆ ಮೂರನೇ ವಿಕೆಟ್‌ಗೆ ಆಗಿನ ಕಾಲದ ದಾಖಲೆಯಾದ 225 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ನ್ಯೂಜಿಲೆಂಡ್‌ ತಂಡ 7 ವಿಕೆಟ್‌ಗೆ 553 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ನಂತರ ವೇಗದ ಬೌಲರ್‌ ರಿಚರ್ಡ್‌ ಹ್ಯಾಡ್ಲಿ ಅವರು ಎದುರಾಳಿ ತಂಡದ ಇನಿಂಗ್ಸ್‌ ಧ್ವಂಸಗೊಳಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 52 ರನ್ನಿಗೆ 9 ವಿಕೆಟ್‌ ಕಬಳಿಸಿದ್ದ ಹ್ಯಾಡ್ಲಿ ಎರಡನೇ ಸರದಿಯಲ್ಲಿ 71 ರನ್ನಿಗೆ 6 ವಿಕೆಟ್‌ ಪಡೆದು ಕಾಂಗರೂಗಳನ್ನು ಕಂಗಾಲು ಮಾಡಿದ್ದರು.

ಎಡಗೈ ಆಟಗಾರರಾಗಿದ್ದ ರೀಡ್‌, ಸ್ಪಿನ್‌ ಬೌಲಿಂಗ್ ಎದುರಿಸುವಲ್ಲಿ ಕೌಶಲ ಹೊಂದಿದ್ದರು. ಆದರೆ ಬ್ರಿಸ್ಬೇನ್‌ನ ಆ ಟೆಸ್ಟ್‌, ವೇಗಿಗಳನ್ನೂ ಎದುರಿಸುವ ಅವರ ಸಾಮರ್ಥ್ಯಕ್ಕೆ ವೇದಿಕೆಯಾಯಿತು.

‘ಪಿಚ್‌ ಬೌಲರ್‌ಗಳಿಗೆ ಸ್ನೇಹಿಯಾಗಿದ್ದರೂ ಅಷ್ಟು ಆಡಲು ಆಗಿದ್ದು ವಿಶೇಷವೆನಿಸಿತ್ತು’ ಎಂದು ರೀಡ್‌, ಆ ವಿಜಯದ 30ನೇ ವಾರ್ಷಿಕೋತ್ಸವದ ವೇಳೆ (2015) ನ್ಯೂಜಿಲೆಂಡ್‌ ಹೆರಾಲ್ಡ್‌ ಪತ್ರಿಕೆಗೆ ತಿಳಿಸಿದ್ದರು.

1979 ರಿಂದ 1986ರವರೆಗೆ ಟೆಸ್ಟ್‌ ಕ್ರಿಕೆಟ್‌ ಆಡಿದ್ದ ರೀಡ್‌ 46ರ ಸರಾಸರಿಯಲ್ಲಿ 1,296 ರನ್‌ ಕೂಡಿಹಾಕಿದ್ದರು. ಆಗಿನ ಕಾಲದಲ್ಲಿ ನ್ಯೂಜಿಲೆಂಡ್‌ ದುರ್ಬಲ ತಂಡಗಳಲ್ಲಿ ಒಂದೆನಿಸಿತ್ತು. ರೀಡ್‌ ಜೊತೆ ಜಾನ್‌ ರೈಟ್‌, ಜೆಫ್‌ ಹೋವರ್ತ್‌ ಮತ್ತು ಹ್ಯಾಡ್ಲಿ ಕಿವೀಸ್‌ ಕ್ರಿಕೆಟ್‌ಗೆ ವೃತ್ತಿಪರತೆ ತಂದುಕೊಟ್ಟಿದರು.

ರೀಡ್‌ ಹೆಸರನ್ನೇ ಹೊಂದಿದ್ದ ನ್ಯೂಜಿಲೆಂಡ್‌ನ ಮಾಜಿ ನಾಯಕ, ಪ್ರಸಿದ್ಧ ಆಟಗಾರ ಜಾನ್‌ ಆರ್‌.ರೀಡ್‌ ಅಕ್ಟೋಬರ್‌ನಲ್ಲಿ ನಿಧನರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು