ಸೋಮವಾರ, ಜೂನ್ 1, 2020
27 °C

ಕ್ರಿಕೆಟ್ | ಬಿಸಿಸಿಐ ಮತ್ತು ಪಿಸಿಬಿ ನಡುವಿನ ವ್ಯತ್ಯಾಸ ವಿವರಿಸಿದ ವಾಸಿಂ ಅಕ್ರಮ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ರಿಕೆಟ್‌ ಜಗತ್ತು ಕಂಡ ಶ್ರೇಷ್ಠ ವೇಗದ ಬೌಲರ್‌ ಹಾಗೂ ಪಾಕಿಸ್ತಾನದ ಮಾಜಿ ಆಟಗಾರ ವಾಸೀಂ ಅಕ್ರಂ,‌ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಅಕ್ರಂ 2003ರ ಏಕದಿನ ವಿಶ್ವಕಪ್ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅದಾದ ನಂತರ ಪಾಕಿಸ್ತಾನ ಎರಡು ಬಾರಿ ಚಾಂಪಿಯನ್ಸ್ ‌ಟ್ರೋಫಿ ಗೆದ್ದಿದೆಯಾದರೂ, ಪಿಸಿಬಿ ಮತ್ತು ಅಲ್ಲಿನ ಆಟಗಾರರು ಸದಾ ವಿವಾವಗಳನ್ನು ಮೈಮೇಲೆ ಎಳೆದುಕೊಳ್ಳುವುದು ತಪ್ಪಿಲ್ಲ. ಇದೇ ವೇಳೆ ಭಾರತ ದಿನದಿಂದ ದಿನಕ್ಕೆ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ ಸಾಗಿದೆ. ‘ಬಹುತೇಕರು ನಂಬಿರುವಂತೆ ಪಾಕಿಸ್ತಾನ ಒಂದು ಹೆಜ್ಜೆ ಮುಂದಕ್ಕೆ ಇಟ್ಟರೆ, ಎರಡು ಹೆಜ್ಜೆ ಹಿಂದಕ್ಕೆ ಇಡುತ್ತಿದೆ’ ಎಂಬುದು ಅಕ್ರಂ ಅಭಿಪ್ರಾಯ.

ಭಾರತದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಅವರೊಂದಿಗೆ ಯುಟ್ಯೂಬ್‌ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಥಮ ದರ್ಜೆ ಕ್ರಿಕೆಟ್‌ ಸ್ವರೂಪವನ್ನು ಉತ್ತಮಗೊಳಿಸಿದ್ದರಿಂದಲೇ ಭಾರತ ಕ್ರಿಕೆಟ್‌ ಸುಧಾರಣೆ ಸಾಧಿಸಿತು ಎಂದು ಹೇಳಿದ್ದಾರೆ.

‘ಆಗೆಲ್ಲ ಪ್ರಥಮದರ್ಜೆ ಕ್ರಿಕೆಟ್‌ಗೊಂದು ಸ್ವರೂಪವಿರಲಿಲ್ಲ. ಪಾಕ್‌ ಕ್ರಿಕೆಟ್‌ ಮಂಡಳಿಗೆ ಯಾರೇ ಬಂದರೂ ಸಣ್ಣ ಗುರಿಯೊಂದಿಗೆ ಬರುತ್ತಾರೆ. ಹಾಗಾಗಿ ಕಳೆದ 30 ವರ್ಷಗಳಲ್ಲಿ ಏನು ನಡೆದಿದೆಯೋ ಅದರಲ್ಲಿ ಒಂದಿಷ್ಟೂ ಬದಲಾವಣೆಗಳಾಗಿರಲಿಲ್ಲ. ಪಾಕಿಸ್ತಾನದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಇದೀಗ ಪ್ರಥಮದರ್ಜೆ ಕ್ರಿಕೆಟ್‌ ಸ್ವರೂಪ ಬದಲಿಸಲಾಗಿದೆ. ಅದರ ಫಲಿತಾಂಶವನ್ನು ಕಾಣಲು ಇನ್ನೂ 3–4 ವರ್ಷಗಳು ಬೇಕಾಗುತ್ತವೆ’ ಎಂದಿದ್ದಾರೆ.

‘ಭಾರತ ಏನು ಮಾಡಿದೆ? ಐಪಿಎಲ್‌ನಿಂದ ಬಂದ ಹಣವನ್ನು ಪೂರ್ಣ ಮನಸ್ಸಿನಿಂದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೂಡಿದೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನ ಸ್ವರೂಪ, ವೇತನ ಪದ್ದತಿ ಸೇರಿದಂತೆ ಎಲ್ಲವನ್ನೂ ಬದಲಿಸಿದ್ದಾರೆ. ವೃತ್ತಪರರನ್ನು ಕರೆತಂದಿದ್ದಾರೆ. ವಿಶ್ವ ದರ್ಜೆಯ ಫಿಸಿಯೊ ಮತ್ತು ತರಬೇತುದಾರರನ್ನು ತಂಡದಲ್ಲಿರಿಸಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರೂ ಸ್ವತಃ ಉತ್ತಮ ತರಬೇತುದಾರರಾಗಿದ್ದಾರೆ. ಇವೆಲ್ಲವೂ ಈ ಕಾಲದ ಅಗತ್ಯಗಳಾಗಿವೆ. ಇದು ಎರಡೂ ಮಂಡಳಿಗಳ ನಡುವಿನ ವ್ಯತ್ಯಾಸವಾಗಿದೆ’ ಎಂದು ವಿವರಿಸಿದ್ದಾರೆ.

ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆಯೂ ಮಾತನಾಡಿದ್ದಾರೆ. ‘ನಿಸ್ಸಂದೇಹಾವಿ ಅದೊಂದು ಕಠಿಣವಾದ ನಿರ್ಧಾರ. ಯಾವುದೇ ಆಟಗಾರ ಕ್ರೀಡೆಗೆ ವಿದಾಯ ಹೇಳುವುದು ಕಷ್ಟದ ವಿಚಾರ. ಆದರೆ, ಪ್ರತಿಯೊಂದಕ್ಕೂ ಕಾಲಮಿತಿ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು