ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್‌, ಚಾಕಲೇಟ್‌ ಮತ್ತು ಒಣದ್ರಾಕ್ಷಿ...ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಸ್ಟೋಕ್ಸ್‌

Last Updated 26 ಆಗಸ್ಟ್ 2019, 17:10 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ವೀರಾವೇಷದಿಂದ ಹೋರಾಡಿ ಇಂಗ್ಲೆಂಡ್‌ ತಂಡಕ್ಕೆ ಪವಾಡಸದೃಶ ಗೆಲುವು ತಂದುಕೊಟ್ಟಿದ್ದ ಎಡಗೈ ಬ್ಯಾಟ್ಸ್‌ಮನ್‌ ಬೆನ್‌ ಸ್ಟೋಕ್ಸ್‌, ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ.

ಶನಿವಾರ ರಾತ್ರಿ ತಿಂದಿದ್ದ ಫ್ರೈಡ್‌ ಚಿಕನ್‌ ಮತ್ತು ಎರಡು ಚಾಕೊಲೆಟ್‌ ಬಾರ್‌, ದೇಹಕ್ಕೆ ಹೆಚ್ಚು ಶಕ್ತಿ ನೀಡಿದ್ದಾಗಿ ನುಡಿದಿದ್ದಾರೆ.

ಮೂರನೇ ಪಂದ್ಯದಲ್ಲಿ ಅಜೇಯ 135ರನ್‌ ಗಳಿಸಿದ್ದ ಆಲ್‌ರೌಂಡರ್‌ ಸ್ಟೋಕ್ಸ್‌, ಇಂಗ್ಲೆಂಡ್‌ ತಂಡದ ಗೆಲುವಿನ ರೂವಾರಿಯಾಗಿದ್ದರು.

ಶನಿವಾರದ ಆಟದ ವೇಳೆ ಜೋಫ್ರಾ ಆರ್ಚರ್‌ ಗಾಯಗೊಂಡಿದ್ದರು. ಹೀಗಾಗಿ ಹೆಚ್ಚುವರಿ ಓವರ್‌ಗಳನ್ನು ಹಾಕುವ ಹೊಣೆ ಸ್ಟೋಕ್ಸ್‌ ಹೆಗಲೇರಿತ್ತು. 24.2 ಓವರ್‌ ಬೌಲ್‌ ಮಾಡಿದ್ದ ಅವರು 56 ರನ್ ಬಿಟ್ಟುಕೊಟ್ಟು 3 ವಿಕೆಟ್‌ ಉರುಳಿಸಿದ್ದರು. ಇದರ ಬೆನ್ನಲ್ಲೇ ಬ್ಯಾಟಿಂಗ್‌ಗೆ ಬಂದಿದ್ದ ಅವರು ತಂಡವು ವಿಕೆಟ್‌ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದ್ದರು. 50 ಎಸೆತಗಳನ್ನು ಆಡಿ ಎರಡು ರನ್‌ ಗಳಿಸಿದ್ದು ಇದಕ್ಕೆ ಸಾಕ್ಷಿ.

‘ಶನಿವಾರ ರಾತ್ರಿ ಫ್ರೈಡ್‌ ಚಿಕನ್‌, ಯಾರ್ಕಿ ಬಿಸ್ಕಟ್‌ನ ಎರಡು ಚಾಕೊಲೆಟ್‌ ಬಾರ್‌ ಮತ್ತು ಒಣ ದ್ರಾಕ್ಷಿ ಸೇವಿಸಿದ್ದೆ. ಭಾನುವಾರ ಬೆಳಿಗ್ಗೆ ಹಲವು ಬಾರಿ ಕಾಫಿ ಹೀರಿದ್ದೆ. ಹೀಗಾಗಿ ಎರಡನೇ ಇನಿಂಗ್ಸ್‌ನಲ್ಲಿ ಹೆಚ್ಚು ದಣಿಯದೆ, ನಿರಾತಂಕವಾಗಿ ಬ್ಯಾಟಿಂಗ್‌ ಮಾಡಲು ಸಾಧ್ಯವಾಯಿತು’ ಎಂದಿದ್ದಾರೆ.

‘ಪಂದ್ಯ ಗೆದ್ದು ಪೆವಿಲಿಯನ್‌ನತ್ತ ಹೋಗುತ್ತಿದ್ದಾಗ ಕ್ರೀಡಾಂಗಣದ ಗ್ಯಾಲರಿಗಳಲ್ಲಿ ಕುಳಿತಿದ್ದ ಪ್ರೇಕ್ಷಕರೆಲ್ಲಾ ಮೇಲೆದ್ದು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು. ಆಗ ತುಂಬಾ ಆನಂದವಾಯಿತು. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಲೀಚ್‌ಗೆ ಉಚಿತ ಕನ್ನಡಕ!
ಆ್ಯಷಸ್‌ ಸರಣಿಯ ಪ್ರಾಯೋಜಕತ್ವ ಪಡೆದಿರುವ ಸ್ಪೆಕ್‌ಸೇವರ್ಸ್‌ ಕಂಪನಿಯು ಇಂಗ್ಲೆಂಡ್‌ ತಂಡದ ಸ್ಪಿನ್ನರ್‌ ಜಾಕ್‌ ಲೀಚ್‌ಗೆ ಜೀವಮಾನವಿಡೀ ಉಚಿತವಾಗಿ ಕನ್ನಡಕ ನೀಡುವುದಾಗಿ ಟ್ವೀಟ್‌ ಮಾಡಿದೆ.

ಭಾನುವಾರದ ಆಟದ ವೇಳೆ ಲೀಚ್‌ ಅವರು ಬೆನ್‌ ಸ್ಟೋಕ್ಸ್‌ಗೆ ಉತ್ತಮ ಬೆಂಬಲ ನೀಡಿದ್ದರು. ಅವರು ಪ್ರತಿ ಬಾರಿಯೂ ಚೆಂಡು ಎದುರಿಸುವ ಮುನ್ನ ಕನ್ನಡಕವನ್ನು ಒರೆಸಿ ಹಾಕಿಕೊಳ್ಳುತ್ತಿದ್ದರು.ಇದನ್ನು ಗಮನಿಸಿದ್ದ ಸ್ಟೋಕ್ಸ್‌ ‘ಸ್ಪೆಕ್‌ಸೇವರ್ಸ್‌ ಕಂಪನಿಯವರೇ, ದಯಮಾಡಿ ಲೀಚ್‌ಗೆ ಉಚಿತ ಕನ್ನಡಕ ಒದಗಿಸಿ’ ಎಂದು ಪಂದ್ಯದ ನಂತರ ಟ್ವೀಟ್‌ ಮಾಡಿದ್ದರು.

ಆಸ್ಟ್ರೇಲಿಯಾ ಮಾಡಿಕೊಂಡ ಎಡವಟ್ಟು: ಮೂರನೇ ಟೆಸ್ಟ್‌ ಗೆದ್ದು ಸರಣಿಯಲ್ಲಿ 2–0 ಮುನ್ನಡೆ ಗಳಿಸಲು ಆಸ್ಟ್ರೇಲಿಯಾಕ್ಕೆ ಉತ್ತಮ ಅವಕಾಶ ಇತ್ತು.

ನಿರ್ಣಾಯಕ ಘಟ್ಟದಲ್ಲಿ ಮಾಡಿಕೊಂಡ ಎಡವಟ್ಟುಗಳು ಪ್ರವಾಸಿ ಪಡೆಗೆ ಮುಳುವಾದವು.

ಪ್ಯಾಟ್‌ ಕಮಿನ್ಸ್‌ ಹಾಕಿದ 124ನೇ ಓವರ್‌ನ ಕೊನೆಯ ಎಸೆತ ಇಂಗ್ಲೆಂಡ್‌ ತಂಡದ ಜ್ಯಾಕ್‌ ಲೀಚ್‌ ಅವರ ಪ್ಯಾಡಿಗೆ ಬಡಿದಿತ್ತು. ಆಸ್ಟ್ರೇಲಿಯಾದ ಆಟಗಾರರ ಮನವಿಯನ್ನು ಅಂಗಳದ ಅಂಪೈರ್‌ ಪುರಸ್ಕರಿಸಲಿಲ್ಲ. ಆದರೆ ಟಿಮ್ ಪೇನ್‌ ಪಡೆ ಅಷ್ಟಕ್ಕೆ ಸುಮ್ಮನಾಗಿದ್ದರೆ ಪಂದ್ಯ ಅವರ ಪಾಲಾಗುತ್ತಿತ್ತೇನೊ. ಆದರೆ ತಂಡ ಡಿಆರ್‌ಎಸ್‌ ತೆಗೆದುಕೊಂಡು ಕೈಸುಟ್ಟುಕೊಂಡಿತು.

ನೇಥನ್‌ ಲಯಮ್‌ ಬೌಲ್‌ ಮಾಡಿದ ಮರು ಓವರ್‌ನ (125) ಕೊನೆಯ ಎಸೆತವನ್ನು ಸ್ಟೋಕ್ಸ್‌ ಸ್ವೀಪ್‌ ಮಾಡಲು ಪ್ರಯತ್ನಿಸಿದರು. ಚೆಂಡು ಅವರ ಪ್ಯಾಡ್‌ಗೆ ಬಡಿದಿತ್ತು. ಆಸ್ಟ್ರೇಲಿಯಾ ಆಟಗಾರರ ಎಲ್‌ಬಿಡಬ್ಲ್ಯು ಮನವಿಯನ್ನು ಅಂಪೈರ್‌ ಜೋಯೆಲ್‌ ವಿಲ್ಸನ್‌ ಪುರಸ್ಕರಿಸಲಿಲ್ಲ. ಸ್ಟೋಕ್ಸ್‌ ಔಟ್‌ ಆಗಿರುವುದು ಟಿ.ವಿ.ರಿಪ್ಲೆಯಲ್ಲಿ ಸ್ಪಷ್ಟವಾಗಿತ್ತು. ತನ್ನ ಪಾಲಿನ ಎರಡು ಅವಕಾಶಗಳನ್ನು (ಡಿಆರ್‌ಎಸ್‌) ಅದಾಗಲೇ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಸುಮ್ಮನಾಯಿತು. ಅದಕ್ಕೂ ಮುನ್ನ ಲಯನ್‌ ಅವರು ರನ್‌ಔಟ್‌ ಅವಕಾಶವನ್ನು ಕೈಚೆಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT