ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತಾಸಕ್ತಿ ಸಂಘರ್ಷ: ಎಟಿಕೆ ಮೋಹನ್ ಬಾಗನ್ ನಿರ್ದೇಶಕ ಹುದ್ದೆ ತ್ಯಜಿಸಲಿರುವ ಗಂಗೂಲಿ

Last Updated 28 ಅಕ್ಟೋಬರ್ 2021, 10:19 IST
ಅಕ್ಷರ ಗಾತ್ರ

ಕೋಲ್ಕತ್ತ: ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ(ಐಎಸ್‌ಎಲ್) ಎಟಿಕೆ ಮೋಹನ್ ಬಾಗನ್ ಫ್ರಾಂಚೈಸಿಯ ನಿರ್ದೇಶಕ ಹುದ್ದೆಯನ್ನು ತೊರೆಯಲು ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಕೋಲ್ಕತ್ತ ತಳಹದಿಯ ಉದ್ಯಮಿ ಆರ್.ಪಿ. ಸಂಜೀವ್ ಗೋಯೆಂಕಾ ಅವರ ನೇತೃತ್ವದ ಆರ್‌ಪಿಎಸ್‌ಜಿ ಕಂಪನಿಯು ಬರೋಬ್ಬರಿ ₹7,090 ಕೋಟಿಗೆ ನೂತನ ಲಖನೌ ಫ್ರಾಂಚೈಸಿಯನ್ನು ಖರೀದಿಸಿತ್ತು.

ಎಟಿಕೆ ಮೋಹನ್ ಬಾಗನ್ ಮಾಲಿಕತ್ವವನ್ನು ಹೊಂದಿರುವ ಗೋಯೆಂಕಾ, ಈಗ ಐಪಿಎಲ್ ತಂಡವನ್ನು ಖರೀದಿಸಿದ್ದಾರೆ. ಇದರಿಂದಾಗಿ ಗಂಗೂಲಿ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯನ್ನು ಎದುರಿಸುತ್ತಿದ್ದಾರೆ. ಇದಾದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ, ಎಟಿಕೆ ಮೋಹನ್ ಬಾಗನ್ ಫ್ರಾಂಚೈಸಿಯ ನಿರ್ದೇಶಕ ಹುದ್ದೆಯನ್ನು ಹೊಂದಿದ್ದಾರೆ.

ಈ ಕುರಿತು 'ಸಿಎನ್‌ಬಿಸಿ-ಟಿವಿ 18' ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಸಂಜೀವ್ ಗೋಯೆಂಕಾ, 'ಮೋಹನ್ ಬಾಗನ್ ಹುದ್ದೆಯಿಂದ ಸೌರವ್ ಗಂಗೂಲಿ ಸಂಪೂರ್ಣವಾಗಿ ಕೆಳಗಿಳಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಸೌರವ್ ಗಂಗೂಲಿ ಈ ಕುರಿತು ಘೋಷಣೆ ಮಾಡಬೇಕಿದೆ. ಕ್ಷಮಿಸಿ, ನಾನು ಮೊದಲೇ ಹೇಳಿದ್ದೇನೆ' ಎಂದು ತಿಳಿಸಿದ್ದಾರೆ.

ಎಟಿಕೆ ಮೋಹನ್ ಬಾಗನ್ ಫ್ರಾಂಚೈಸಿಯಲ್ಲಿ ಷೇರನ್ನು ಹೊಂದಿರುವ ಗಂಗೂಲಿ, ತಮ್ಮ ಹುದ್ದೆಯನ್ನು ತೊರೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

2019ರಲ್ಲೂ ಸೌರವ್ ಗಂಗೂಲಿ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ಆರೋಪವನ್ನು ಎದುರಿಸಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಅಧ್ಯಕ್ಷ ಹುದ್ದೆಯ ಜೊತೆಗೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT