ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್ ನಡೆದದ್ದೇ ಹಾದಿ...

Last Updated 9 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ದೆಹಲಿ ಕ್ರಿಕೆಟ್‌ ಅಂಗಳದಲ್ಲಿ ಒಂದು ಸುತ್ತು ಹಾಕಿ ಬಂದರೆ ಸುಮಾರು 4–5 ಸಾವಿರ ಹುಡುಗರು ಅಂತರರಾಷ್ಟ್ರೀಯ ಆಟಗಾರರಾಗುವ ಕನಸು ಕಾಣುತ್ತ ಆಡುವ ದೃಶ್ಯ ಸಾಮಾನ್ಯ. ನೂರಾರು ಕ್ಲಬ್‌ಗಳು, ಹಲವಾರು ಕೋಚ್‌ಗಳು ತಮ್ಮ ಶಿಷ್ಯಂದಿರನ್ನು ಬೆಳೆಸುವ ಪೈಪೋಟಿಯಲ್ಲಿ ನಿರತರಾಗಿರುತ್ತಾರೆ. ಈ ಸ್ಪರ್ಧೆಯಲ್ಲಿಯೇ ಹಲವು ಪ್ರತಿಭಾವಂತರು ಹೊರಹೊಮ್ಮುತ್ತಾರೆ. ಪೈಪೋಟಿಯ ಜೊತೆಗೆ ದೆಹಲಿ ಕ್ರಿಕೆಟ್ ಸಂಸ್ಥೆಯ ರಾಜಕೀಯವನ್ನೂ ಮೀರಿ ಬೆಳೆಯುವುದು ಸುಲಭವಲ್ಲ. ಆದರೂ ಭಾರತ ತಂಡದಲ್ಲಿ ದೆಹಲಿಯ ಆಟಗಾರರು ಇದ್ದೇ ಇರುತ್ತಾರೆ. ತಮ್ಮ ಛಾಪು ಮೂಡಿಸುತ್ತಾರೆ. 1936ರ ಅಬ್ದುಲ್ ಹಾಯ್‌ ಅವರಿಂದ ಇವತ್ತಿನ ರಿಷಭ್ ಪಂತ್ ವರೆಗೂ ದೊಡ್ಡ ಪಟ್ಟಿಯೇ ಸಿಗುತ್ತದೆ. ಅದರಲ್ಲಿ ದಿಗ್ಗಜರಾಗಿ ಬೆಳೆದವರಲ್ಲಿ ಗೌತಮ್ ಗಂಭೀರ್ ಅವರೂ ಒಬ್ಬರು.

ಎಲ್ಲ ಮಾದರಿಯ ಕ್ರಿಕೆಟ್‌ಗೂ ಅವರು ಈಗ ವಿದಾಯ ಹೇಳಿ ದ್ದಾರೆ. ಬಾಲ್ಯದಲ್ಲಿ ತಮ್ಮ ಚಿಕ್ಕಪ್ಪನ ಪ್ರೇರಣೆಯಿಂದ ಬ್ಯಾಟ್‌ ಹಿಡಿದ ಗೌತಮ್ ಇಲ್ಲಿಯವರೆಗೂ ನಡೆದು ಬಂದ ಹಾದಿ ಸರಳವಾದುದದಲ್ಲ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಾಲಿಟ್ಟಾಗಿಂದಲೂ ಅವರು ತಮ್ಮ ತಂಡದೊಳಗೆ ಮತ್ತು ಹೊರಗೆ ಅಪಾರ ಪೈಪೋಟಿಯನ್ನು ಎದುರಿಸಿದವರು. 2003-04ರ ಸಾಲಿನ ಭಾರತ ಕ್ರಿಕೆಟ್ ತಂಡದಲ್ಲಿ ಇದ್ದ ಸಚಿನ್‌ ತೆಂಡೂಲ್ಕರ್‌ರಿಂದ ಜಹೀರ್ ಖಾನ್‌ವರೆಗೆ ಎಲ್ಲರೂ ತಾರಾ ವರ್ಚಸ್ಸಿನವರೇ. ಇವರೆಲ್ಲರ ನಡುವೆ ತಂಡದಲ್ಲಿ ಹೆಜ್ಜೆಯೂರಿ ನಿಲ್ಲುವ ಸವಾಲನ್ನು ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಮೀರಿ ನಿಂತರು.

ದೆಹಲಿಯ ಗಣ್ಯ ಉದ್ಯಮಿ ದೀಪಕ್ ಗಂಭೀರ್ ಮತ್ತು ಸೀಮಾ ಗಂಭೀರ್ ದಂಪತಿಯ ಮಗ ಗೌತಮ್ ಕ್ರಿಕೆಟ್‌ ಪ್ರಿಯರ ‘ಗೌತಿ’ ಆಗಿ ಬೆಳೆಯಲು ಅವರ ಪ್ರತಿಭೆ, ಪರಿಶ್ರಮಗಳೇ ಕಾರಣ. 2003ರಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ಅವರು ತಮ್ಮ ತವರಿನ ಗೆಳೆಯ ವೀರೇಂದ್ರ ಸೆಹ್ವಾಗ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದರು. ಟೆಸ್ಟ್‌ನಲ್ಲಿಯೂ ವೀರೂ ಅವರೇ ಜೊತೆಗಾರ. ಸೌರವ್ ಗಂಗೂಲಿ ನಾಯಕತ್ವದಲ್ಲಿ ಪದಾರ್ಪಣೆ ಮಾಡಿದ್ದ ಗೌತಿ ಒಂದು ಹಂತದಲ್ಲಿ ತಂಡದ ‘ಭಾವಿ ನಾಯಕ’ ಎಂದೂ ಬಿಂಬಿತವಾಗಿದ್ದರು. ಆದರೆ, ಮಹೇಂದ್ರ ಸಿಂಗ್ ಧೋನಿ ತಂಡದ ಚುಕ್ಕಾಣಿ ಹಿಡಿದ ನಂತರ ಗಂಭೀರ್ ಅವರಿಂದ ನಾಯಕ ಪಟ್ಟ ದೂರ ಉಳಿದಿದ್ದು ಇತಿಹಾಸ.

ಧೋನಿ ನಾಯಕತ್ವದ ಯಶಸ್ಸಿನಲ್ಲಿ ಗೌತಮ್ ಕಾಣಿಕೆಗಳೂ ಇವೆ. ಗಾಯದ ಸಮಸ್ಯೆ, ತಂಡದ ಸಹ ಆಟಗಾರರೊಂದಿಗೆ ಹೆಚ್ಚು ಬೆರೆಯದ ಸ್ವಭಾವ ಮತ್ತು ಗಾಂಭೀರ್ಯ ಗುಣಗಳು ಗೌತಮ್ ಅವರಿಗೆ ಶತ್ರುಗಳಾದವು ಎಂಬ ಮಾತುಗಳು ಅವರ ಆಪ್ತವಲಯದಲ್ಲಿ ಕೇಳಿ ಬರುತ್ತವೆ. ಆದರೆ ಅವರ ಬ್ಯಾಟಿಂಗ್ ಶೈಲಿಗೆ ಮಾರುಹೋದವರು ಅನೇಕರು. ನಿಗದಿಯ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು ಸೆಹ್ವಾಗ್‌ ಅವರಷ್ಟೇ ಆಕ್ರಮಣಕಾರಿಯಾಗಿದ್ದರು. ಅದೇ ಟೆಸ್ಟ್ ಮತ್ತು ದೇಶಿ ಕ್ರಿಕೆಟ್‌ನಲ್ಲಿ ತಾಳ್ಮೆಯ ಬ್ಯಾಟ್ಸ್‌ಮನ್ ಆಗಿದ್ದವರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು ಹತ್ತು ಸಾವಿರಕ್ಕೂ ಹೆಚ್ಚು ರನ್‌ಗಳು ಅವರ ಖಾತೆಯಲ್ಲಿವೆ.

ದೇಶಿ ಮತ್ತು ಐಪಿಎಲ್‌ ಟೂರ್ನಿಗಳಲ್ಲಿಯೂ ರನ್‌ಗಳ ರಾಶಿ ಪೇರಿಸಿದ್ದಾರೆ. 2012ರಲ್ಲಿ ಟ್ವೆಂಟಿ–20, 2013ರಲ್ಲಿ ಏಕದಿನ ಮತ್ತು 2016ರಲ್ಲಿ ಟೆಸ್ಟ್‌ ಮಾದರಿಗಳಲ್ಲಿ ಕೊನೆಯ ಪಂದ್ಯಗಳನ್ನು ಆಡಿದ್ದರು. ಅವರದ್ದೇ ಊರಿನ ಶಿಖರ್ ಧವನ್, ತಮಿಳುನಾಡಿನ ಮುರಳಿ ವಿಜಯ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಅವರು ಪ್ರವರ್ಧಮಾನಕ್ಕೆ ಬಂದ ನಂತರ ಗೌತಮ್‌ ಅವಕಾಶಗಳಿಗೆ ‘ಬ್ರೆಕ್‌’ ಬಿದ್ದಿತ್ತು. ದೆಹಲಿಯಲ್ಲಿ ಅವರ ಜೂನಿಯರ್ ಆಗಿದ್ದ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2016ರಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಆಡಿದ್ದರು. ಅದೇ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಆದರೆ ಈ ಏಳು–ಬೀಳಿನ ಹಾದಿಯಲ್ಲಿ ಅವರ ಅಚ್ಚಳಿಯದ ಕೆಲವು ಇನಿಂಗ್ಸ್‌ಗಳು ಸದಾ ಕಾಡುತ್ತವೆ. ಅವುಗಳಲ್ಲಿ ಪ್ರಮುಖ ಇನಿಂಗ್ಸ್‌ಗಳು ಇಲ್ಲಿವೆ.

ಟ್ವೆಂಟಿ–20 ವಿಶ್ವಕಪ್: ಜೋಹಾನ್ಸ್‌ಬರ್ಗ್‌ನಲ್ಲಿ 2007ರಲ್ಲಿ ಟ್ವೆಂಟಿ–20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಅವರು ಹೊಡೆದಿದ್ದ 75 ರನ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವು. ಆ ರೋಚಕ ಪಂದ್ಯದಲ್ಲಿ ಗುರಿ ಬೆನ್ನತ್ತಿದ್ದ ಪಾಕ್ ತಂಡವು ಕೊನೆಯ ಓವರ್‌ನಲ್ಲಿ ಗೆಲ್ಲುವು ಛಲದಲ್ಲಿತ್ತು. ಆದರೆ ಆ ಓವರ್‌ ಬೌಲಿಂಗ್ ಮಾಡಿದ್ದ ಜೋಗಿಂದರ್ ಸಿಂಗ್ ರಾತ್ರಿ ಬೆಳಗಾಗುವುದರೊಳಗೆ ಮನೆ ಮಾತಾದರು.

ತವರಿನಂಗಳದಲ್ಲಿ ಮಿಂಚು: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 2008ರಲ್ಲಿ ಆಸ್ಟ್ರೇಲಿಯಾ ಎದುರಿನ ಬಾರ್ಡರ್‌–ಗಾವಸ್ಕರ್ ಟ್ರೋಫಿ ಸರಣಿಯ ಟೆಸ್ಟ್‌ ಪಂದ್ಯದಲ್ಲಿ ಗೌತಿ ದ್ವಿಶತಕ (206 ರನ್)ಬಾರಿಸಿದ್ದರು. ವೀರೂ ಮತ್ತು ರಾಹುಲ್ ದ್ರಾವಿಡ್ ಬೇಗನೆ ಔಟಾಗಿದ್ದರು. ಸಚಿನ್ ಜೊತೆಗೆ 130 ಮತ್ತು ವಿವಿಎಸ್ ಲಕ್ಷ್ಮಣ್ ಜೊತೆಗೆ 278 ರನ್‌ಗಳ ಪಾಲುದಾರಿಕೆ ಆಟವಾಡಿದ್ದರು. ಭಾರತ ತಂಡ 613 ರನ್‌ ಗಳಿಸಿ ಡಿಕ್ಲೆರ್ ಮಾಡಿಕೊಂಡಿತ್ತು.

ಕೊಹ್ಲಿಯೊಂದಿಗೆ ಜೊತೆಯಾಟ: 2009ರ ಈಡನ್‌ ಗಾರ್ಡನ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಕುಮಾರ ಸಂಗಕ್ಕಾರ ನಾಯಕತ್ವದ ಶ್ರೀಲಂಕಾ 315 ರನ್‌ಗಳ ಗುರಿ ನೀಡಿತ್ತು. ಆರಂಭಿಕ ಜೋಡಿ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್‌ ಬೇಗನೆ ಔಟಾದಾಗ ಈ ಗುರಿ ಬೆಟ್ಟದಷ್ಟು ದೊಡ್ಡದಾಗಿ ಕಂಡಿತ್ತು. ಆದರೆ, ಗೌತಿ ಮತ್ತು ವಿರಾಟ್ ಕೊಹ್ಲಿ (107ರನ್)ಜೊತೆಯಾಟ ಭಾರತಕ್ಕೆ ದೊಡ್ಡ ಜಯದ ಕಾಣಿಕೆ ನೀಡಿತ್ತು. ಅಜೇಯ 150 ರನ್‌ ಗಳಿಸಿದ್ದ ಗೌತಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಕಣ್ಮಣಿಯಾಗಿದ್ದರು. ಇವರಿಬ್ಬರ ಜೊತೆಯಾಟದಲ್ಲಿ 224 ರನ್‌ಗಳು ಸೇರಿದ್ದವು. ತಂಡ ಗೆದ್ದಿತ್ತು.

ವಿಶ್ವ ಗೆದ್ದ ದಿನ: 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ನೆನಪಿಸಿಕೊಂಡಾಗಲೆಲ್ಲ ಗೌತಮ್ ಗಂಭೀರ್ ಮತ್ತು ಧೋನಿಯ ಆಟ ಕಣ್ಣೆದುರು ಕುಣಿಯುತ್ತದೆ. ಕೇವಲ ಮೂರು ರನ್‌ಗಳಿಂದ ಶತಕವಂಚಿತರಾಗಿದ್ದ ಗೌತಿ ಭಾರತದ ಗೆಲುವಿಗೆ ಭದ್ರಬುನಾದಿ ಹಾಕಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಉತ್ತಮ ಆರಂಭ ಕೊಟ್ಟಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಧೋನಿ ಫಿನಿಷರ್ ಪಾತ್ರ ನಿಭಾಯಿಸಿದ್ದರು. ಇತಿಹಾಸ ರಚನೆಯಾಗಿತ್ತು

ಸಿಬಿ ಸರಣಿಯ ಆ ಆಟ: 2012ರ ಆ ದಿನ ಅಡಿಲೇಡ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಬ್ಯಾಂಕ್ ಸರಣಿಯ ಏಕದಿನ ಪಂದ್ಯದಲ್ಲಿ ಭಾರತ 4
ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಎದುರು ಗೆದ್ದಿತ್ತು. ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತವು ಸರಣಿಯಲ್ಲಿ 1–1ರ ಸಮಬಲ ಸಾಧಿಸಲು ಗಂಭೀರ್ ಗಳಿಸಿದ್ದ 92 ರನ್‌ಗಳು ಕಾರಣವಾಗಿದ್ದವು. ಪ್ರಮುಖ ಆಟಗಾರರು ಬೇಗನೆ ಪೆವಿಲಿಯನ್‌ ಸೇರಿದಾಗ ಗೌತಿ ಮಿಂಚಿದ್ದರು. ವಿದೇಶಿ ನೆಲದಲ್ಲಿಯೂ ದಿಟ್ಟತನ ಮೆರೆದಿದ್ದರು.

ವಿದಾಯದ ಪಂದ್ಯ: ಅವರು ಡಿಸೆಂಬರ್‌ 6ರಿಂದ ದೆಹಲಿಯಲ್ಲಿ ಆಂಧ್ರದ ಎದುರು ಆಡಿದ ತಮ್ಮ ಕೊನೆಯ ರಣಜಿ ಪಂದ್ಯದಲ್ಲಿಯೂ ಅಮೋಘ ಆಟವಾಡಿದರು. ಪದಾರ್ಪಣೆಯ ಪಂದ್ಯದಲ್ಲಿ ಆಡಿದಂತೆಯೇ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರು. ಸುಂದರ ಹೊಡೆತಗಳ ಮೂಲಕ ತಮ್ಮ ಕ್ರಿಕೆಟ್‌ ಜೀವನಕ್ಕೆ ಮತ್ತೊಂದು ಅಮೂಲ್ಯ ರತ್ನವನ್ನು ಸೇರ್ಪಡೆ ಮಾಡಿಕೊಂಡರು. ಹಿತೇನ್ ದಲಾಲ್ ಅವರೊಂದಿಗೆ ಮೊದಲ ವಿಕೆಟ್‌ಗೆ 108 ರನ್‌ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT