ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಾಲ್‌ ಬದ್ಲು ನಾಯಿ, ಬೆಕ್ಕುಗಳನ್ನೇಕೆ ತಿಂತೀರೋ?: ಚೀನೀಯರಿಗೆ ಶೋಯಬ್‌ ಅಖ್ತರ್‌

Last Updated 14 ಮಾರ್ಚ್ 2020, 10:37 IST
ಅಕ್ಷರ ಗಾತ್ರ

ನವದೆಹಲಿ:ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹಾಗೂ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಟೂರ್ನಿಗಳ ಮೇಲೆ ಕೋವಿಡ್–19 ಪರಿಣಾಮ ಉಂಟುಮಾಡಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿರುವಪಾಕಿಸ್ತಾನ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌, ಈ ವೈರಸ್‌ಭಾರತವನ್ನು ತಲುಪದಿರಲಿ ಎಂದಿದ್ದಾರೆ.

ಈ ಸಂಬಂಧ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಅವರು,‘ಹಲವು ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲಾಗುತ್ತಿದೆ. ಸಂಕಷ್ಟದ ಸನ್ನಿವೇಶದ ನಡುವೆಯೂ ಇದೇ ಮೊದಲ ಸಲ ಪಾಕಿಸ್ತಾನದಲ್ಲಿ ಪಿಎಸ್‌ಎಲ್‌ ನಡೆಯುತ್ತಿದೆ. ಇದೀಗ ಆ ಟೂರ್ನಿಯ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ನೋಡಲು ಪ್ರೇಕ್ಷಕರಿಗೆ ಅವಕಾಶ ನಿರಾಕರಿಸುವ ಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಇಡೀ ಪ್ರಪಂಚ ಸಂಕಷ್ಟಕ್ಕೆ ಸಿಲುಕಿದೆ. ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಆರ್ಥಿಕತೆ ಮೇಲೂ ಕೆಟ್ಟ ಪರಿಣಾಮ ಉಂಟಾಗಿದೆ. ಇಡೀ ಜಗತ್ತು ಕುಸಿತದತ್ತ ಸಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ನೀವು ಯಾಕಾದರೂ ಬಾವಲಿಗಳನ್ನು ತಿನ್ನುವಿರೊ, ಅವುಗಳ ರಕ್ತ ಮತ್ತು ಮೂತ್ರ ಕುಡಿಯುತ್ತಿರೊ, ಇದರಿಂದಾಗಿ ವಿಶ್ವದಾದ್ಯಂತ ವೈರಸ್‌ ಸೋಂಕು ಹರಡುತ್ತಿದೆ. ನಾನು ಮಾತನಾಡುತ್ತಿರುವುದು ಚೀನಾ ಪ್ರಜೆಗಳ ಬಗ್ಗೆ. ಅವರು ಜಗತ್ತನ್ನೇ ಆತಂಕಕ್ಕೆ ದೂಡಿದ್ದಾರೆ. ಅದ್ಹೇಗೆ ನೀವು ಬಾವಲಿಗಳು, ಬೆಕ್ಕು ಮತ್ತು ನಾಯಿಗಳನ್ನು ತಿನ್ನುತ್ತೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನಂತು ಕೋಪಗೊಂಡಿದ್ದೇನೆ’ ಎಂದು ಕಿಡಿಕಾರಿದ್ದಾರೆ.

ಆಹಾರ ಪದ್ದತಿಯ ಕುರಿತು ಹೊಸ ಕಾನೂನು ರೂಪಿಸುವಂತೆ ಮನವಿ ಮಾಡಿರುವ ಅವರು, ‘ನಾನು ಚೀನಾ ಪ್ರಜೆಗಳನ್ನು ವಿರೋಧಿಸುತ್ತಿಲ್ಲ. ಬದಲಾಗಿ ಪ್ರಾಣಿಗಳ ಬಗೆಗಿನ ಕಾನೂನುಗಳ ವಿರುದ್ಧವಾಗಿದ್ದೀನಿ. ಬಹುಶಃ ಅದು (ತಿನ್ನುವ ಅಭ್ಯಾಸ) ನಿಮ್ಮ ಸಂಸ್ಕೃತಿ ಇರಬಹುದೆಂದು ಅರ್ಥಮಾಡಿಕೊಳ್ಳುತ್ತೇನೆ. ಆದರೆ, ಅದು ಈಗ ನಿಮಗೆ ಅನುಕೂಲಕರವಾಗಿಲ್ಲ. ಮನುಷ್ಯತ್ವವನ್ನೇ ಕೊಲ್ಲುತ್ತಿದೆ. ನಾನು ಚೀನಿಯರನ್ನು ನಿರ್ಬಂಧಿಸಿ ಎಂದು ಹೇಳುತ್ತಿಲ್ಲ. ಅದರೆ, ಕೆಲವು ಕಾನೂನುಗಳ ಅಗತ್ಯವಿದೆ ಎಂದು ತಿಳಿಸುತ್ತಿದ್ದೇನೆ. ನೀವು ಏನನ್ನಾದರೂ ಅಥವಾ ಎಲ್ಲವನ್ನೂ ತಿನ್ನಲು ಸಾಧ್ಯವಿಲ್ಲ’ ಎಂದು ವಾದಿಸಿದ್ದಾರೆ.

ಐಪಿಎಲ್‌ ಟೂರ್ನಿ ಏಪ್ರಿಲ್‌ 15ರ ವರೆಗೆ ಮುಂದೂಡಲಾಗಿದೆ ಎಂದು ಕೇಳಲ್ಪಟ್ಟಿದ್ದೇನೆ. ಇದರಿಂದಾಗಿ ಟೂರ್ನಿಯ ಪ್ರಾಯೋಜಕರು, ಪ್ರಸಾರಕರು,ಹೋಟೆಲ್‌ ಉದ್ಯಮ ಹಾಗೂ ಸಾರಿಗೆ ಸೇರಿದಂತೆ ಎಲ್ಲದರ ಮೇಲೂ ಪರಿಣಾಮ ಉಂಟಾಗಲಿದೆ ಎಂದಿದ್ದಾರೆ.

ಮುಂದುವರಿದು,‘ದೇವರೇ ಈ ವೈರಸ್‌ ಭಾರತಕ್ಕೆ ತಲುಪದಂತೆ ನಿಷೇದಿಸು. ಅಲ್ಲಿ 130 ಕೋಟಿ ಜನರಿದ್ದಾರೆ. ಭಾರತದಲ್ಲಿನ ಸ್ನೇಹಿತರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಅವರಿಗೆಲ್ಲ ಒಳ್ಳೆಯದಾಗಲಿ’ ಎಂದೂ ಹಾರೈಸಿದ್ದಾರೆ.

ಪ್ರಪಂಚದಾದ್ಯಂತ ಸುಮಾರು 1.3 ಲಕ್ಷ ಜನರಲ್ಲಿ ಕಾಣಿಸಿಕೊಂಡಿರುವ ಹಾಗೂ 5 ಸಾವಿರ ಮಂದಿಯನ್ನು ಕೋವಿಡ್‌–19 ವೈರಸ್‌ ಬಲಿಪಡೆದಿದೆ. ಭಾರತದಲ್ಲಿ ಸುಮಾರು 80ಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಹೀಗಾಗಿ ಭಾರತದಲ್ಲಿ ಇದೇ ತಿಂಗಳು 29ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಏಪ್ರಿಲ್‌ 15ರ ವರೆಗೆ ಮುಂದೂಡಲಾಗಿದೆ. ಮಾತ್ರವಲ್ಲದೆ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಿಎಸ್‌ಎಲ್‌ ಟೂರ್ನಿಯನ್ನು ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡದೆ ನಡೆಸಲು ನಿರ್ಧರಿಸಲಾಗಿದೆ.

ಮಾತ್ರವಲ್ಲದೆ,ಭಾರತ–ದಕ್ಷಿಣ ಆಫ್ರಿಕಾ ಏಕದಿನ ಸರಣಿ, ಶ್ರೀಲಂಕಾ–ಇಂಗ್ಲೆಂಡ್‌ ಟೆಸ್ಟ್ ಸರಣಿ ಸೇರಿದಂತೆ ಹಲವು ಕ್ರೀಡಾಕೂಟಗಳೂ ರದ್ದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT