ಮಂಗಳವಾರ, ಜುಲೈ 27, 2021
26 °C
ರಮೀಜ್‌ ರಾಜಾ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ

ನಿವೃತ್ತಿ ನನ್ನ ವೈಯಕ್ತಿಕ ವಿಚಾರ: ಪಾಕ್‌ ಕ್ರಿಕೆಟರ್‌ ಮೊಹಮ್ಮದ್‌ ಹಫೀಜ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕರಾಚಿ: ‘ಕ್ರಿಕೆಟ್‌ ಬದುಕಿಗೆ ಯಾವಾಗ ನಿವೃತ್ತಿ ಪ್ರಕಟಿಸಬೇಕು ಎಂಬುದನ್ನು ನಿರ್ಧರಿಸಬೇಕಿರುವುದು ನಾನು. ಅದು ನನ್ನ ವೈಯಕ್ತಿಕ ವಿಚಾರ. ಈ ವಿಷಯದಲ್ಲಿ ಬೇರೆ ಯಾರೂ ಮೂಗು ತೂರಿಸುವ ಅಗತ್ಯವಿಲ್ಲ. ಯಾರ ಸಲಹೆಯೂ ನನಗೆ ಬೇಕಿಲ್ಲ’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಮೊಹಮ್ಮದ್‌ ಹಫೀಜ್‌ ಅವರು ರಮೀಜ್‌ ರಾಜಾಗೆ ತಿರುಗೇಟು ನೀಡಿದ್ದಾರೆ.

ಹಫೀಜ್‌ ಅವರು ಗೌರವಯುತವಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಬೇಕು ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ರಮೀಜ್‌ ಇತ್ತೀಚೆಗೆ ಹೇಳಿದ್ದರು. 

‘ಯಾರನ್ನೊ ಮೆಚ್ಚಿಸಲು ನಾನು ಕ್ರಿಕೆಟ್‌ ಆಡುತ್ತಿಲ್ಲ. ಇದು ನನ್ನ ಜೀವನ. ವಯಸ್ಸಿನ ಆಧಾರದಲ್ಲಿ ಆಟಗಾರನ ಸಾಮರ್ಥ್ಯ ಅಳೆಯುವುದು ಸರಿಯಲ್ಲ. ಫಿಟ್‌ನೆಸ್‌ ಇದ್ದರೆ ಎಷ್ಟು ಕಾಲ ಬೇಕಿದ್ದರೂ ಕ್ರಿಕೆಟ್‌ ಆಡಬಹುದು’ ಎಂದು ಹಫೀಜ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

39 ವರ್ಷ ವಯಸ್ಸಿನ ಹಫೀಜ್‌, ಸೀಮಿತ ಓವರ್‌ಗಳ ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸುವ ಉದ್ದೇಶದಿಂದ 2018ರಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

‘ಕೋವಿಡ್‌–19 ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದರಿಂದ ಕ್ರಿಕೆಟ್‌ನ ಮೆರುಗು ಕಡಿಮೆಯಾಗುವ ಅಪಾಯವಿದೆ. ಈಗಿನ ಪರಿಸ್ಥಿತಿಯಲ್ಲಿ ಹೊಸ ನಿಯಮಾವಳಿಗಳ ಅನುಸಾರ ಆಡುವುದು ಅನಿವಾರ್ಯ’ ಎಂದಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿರುವ ಟ್ವೆಂಟಿ–20 ವಿಶ್ವಕಪ್‌ ಬಳಿಕ ಚುಟುಕು ಮಾದರಿಗೆ ವಿದಾಯ ಹೇಳಬೇಕೆಂದುಕೊಂಡಿದ್ದೇನೆ. ವಿಶ್ವಕಪ್‌ ಮುಂದಕ್ಕೆ ಹೋದರೆ, ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿಯಬೇಕಾಗಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು