ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND VS NZ T20| ಸೂಪರ್‌ ಓವರ್‌; ರೋಹಿತ್‌ ಸ್ಟಾರ್‌!

ಮೂರನೇ ಟಿ–20 ಪಂದ್ಯ, ಸರಣಿ ಗೆದ್ದ ವಿರಾಟ್‌ ಬಳಗ: ನ್ಯೂಜಿಲೆಂಡ್‌ಗೆ ಮತ್ತೆ ನಿರಾಸೆ
Last Updated 29 ಜನವರಿ 2020, 20:05 IST
ಅಕ್ಷರ ಗಾತ್ರ
ADVERTISEMENT
""

ಹ್ಯಾಮಿಲ್ಟನ್‌: ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಸೂಪರ್‌ ಓವರ್‌ನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌ಗೆತ್ತಿದ ರೋಹಿತ್‌ ಶರ್ಮಾ ಭಾರತಕ್ಕೆ ಗೆಲುವನ್ನು ತಂದಿತ್ತರು. ಬುಧವಾರ ಮೂರನೇ ಟಿ–20 ಪಂದ್ಯವನ್ನು ಸೂಪರ್‌ ಓವರ್‌ನಲ್ಲಿ ರೋಮಾಂಚಕವಾಗಿ ಗೆದ್ದ ಭಾರತ, ನ್ಯೂಜಿಲೆಂಡ್‌ ವಿರುದ್ಧ ಮೊದಲ ಬಾರಿ ಚುಟುಕು ಕ್ರಿಕೆಟ್‌ ಸರಣಿಯನ್ನೂ ಗೆದ್ದುಕೊಂಡಿತು.

ಸೆಡನ್‌ ಪಾರ್ಕ್‌ನಲ್ಲಿ ಪಂದ್ಯ ರೋಚಕ ‘ಟೈ’ ಆದ ನಂತರ ಸೂಪರ್‌ ಓವರ್‌ನಲ್ಲಿ ಭಾರತದ ಗೆಲುವಿಗೆ 18 ರನ್‌ಗಳು ಬೇಕಿದ್ದವು. ಶರ್ಮಾ–ಕೆ.ಎಲ್‌.ರಾಹುಲ್‌ ಜೋಡಿಯಿಂದ ಮೊದಲ ನಾಲ್ಕು ಎಸೆತಗಳಲ್ಲಿ 10 ರನ್‌ಗಳಷ್ಟೇ ಬಂದಿದ್ದವು. ಆದರೆ ಐದನೇ ಎಸೆತವನ್ನು ಮಿಡ್‌ ವಿಕೆಟ್‌ ಮೇಲೆ ಎತ್ತಿದ ಶರ್ಮಾ ಕೊನೆಯ ಎಸೆತವನ್ನು ಲಾಂಗ್‌ಆಫ್‌ ಸಿಕ್ಸರ್‌ಗೆ ಎತ್ತುತ್ತಿದ್ದಂತೆ ಭಾರತದ ಆಟಗಾರರು ಸಂಭ್ರಮದಿಂದ ಕ್ರೀಡಾಂಗಣಕ್ಕೆ ಓಡೋಡಿ ಬಂದರು.

ಶರ್ಮಾ, ಇದಕ್ಕೆ ಮೊದಲು ಭಾರತದ ಇನಿಂಗ್ಸ್‌ನಲ್ಲಿ ಅತಿ ಹೆಚ್ಚಿನ (65 ರನ್‌) ಕೊಡುಗೆ ನೀಡಿದ್ದರು.

ಸೂಪರ್‌ ಓವರ್‌ಗೆ ಮೊದಲು, ನಾಯಕ ಕೇನ್‌ ವಿಲಿಯಮ್ಸನ್‌ ಕೇವಲ 48 ಎಸೆತಗಳಲ್ಲಿ ಚಚ್ಚಿದ 95 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್‌ ಆಟದ ಮೇಲೆ ಬಹುತೇಕ ನಿಯಂತ್ರಣ ಸಾಧಿಸಿತ್ತು. ಆದರೆ ಕೊನೆಯ ಓವರ್‌ನಲ್ಲಿ ಎಡವಿತು. ಭಾರತ ಗಳಿಸಿದ್ದ 5 ವಿಕೆಟ್‌ಗೆ 179 ರನ್‌ಗಳನ್ನು ದಾಟಲು ಆತಿಥೇಯರಿಗೆ ಕೊನೆಯ ನಾಲ್ಕು ಎಸೆತಗಳಲ್ಲಿ ಬೇಕಿದ್ದದ್ದು ಎರಡು ರನ್‌ಗಳ ಮಾತ್ರ.

ಆದರೆ ಅನುಭವಿ ಮೊಹಮ್ಮದ್‌ ಶಮಿ ಅವರ ಬಿಗು ಬೌಲಿಂಗ್‌ನಿಂದಾಗಿ ಪಂದ್ಯ ‘ಟೈ’ ಆಯಿತು. ಅವರು ಕೊನೆಯ ಮೂರು ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು. ಒಂದು ರನ್‌ ಬಂದಿದ್ದೂ ಬೈ ಮೂಲಕ (6 ವಿಕೆಟ್‌ಗೆ 179).

ಈ ಪಂದ್ಯ, ಕಳೆದ ವರ್ಷ ಇಂಗ್ಲೆಂಡ್‌ ವಿರುದ್ಧ ಏಕದಿನ ವಿಶ್ವಕಪ್‌ ಫೈನಲ್‌ನಲ್ಲೂ ನ್ಯೂಜಿಲೆಂಡ್‌ ಸೂಪರ್‌ ಓವರ್‌– ನಂತರ ಬೌಂಡರಿ ಕೌಂಟ್‌ ಆಧಾರದಲ್ಲಿ ಟ್ರೋಫಿ ಕಳೆದುಕೊಂಡಿ ದ್ದನ್ನು ನೆನಪಿಸಿತು.

ಭಾರತ, ವರ್ಷದ ಹಿಂದೆ ನಡೆದ ಉಭಯ ತಂಡಗಳ ನಡುವಣ ಮೊದಲ ಟಿ–20 ಸರಣಿಯಲ್ಲಿ 1–2 ಅಂತರದಲ್ಲಿ ಸೋಲನುಭವಿಸಿತ್ತು. ಈಗ ಐದು ಪಂದ್ಯಗಳ ಸರಣಿಯಲ್ಲಿ ಭಾರತ 3–0 ಗೆಲುವಿನ ಮುನ್ನಡೆ ಸಾಧಿಸಿದೆ.

ಭಾರತದ ಮೊತ್ತ ಚೇಸ್‌ ಮಾಡುವಾಗ ಅಮೋಘ ಆಟವಾಡಿದ್ದ ವಿಲಿಯಮ್ಸನ್‌, ಸೂಪರ್‌ ಓವರ್‌ನಲ್ಲೂ 11 ರನ್‌ ಹೊಡೆದರು.ವಿಲಿಯಮ್ಸನ್‌ ಐದು ರನ್‌ಗಳಿಂದ ಶತಕ ವಂಚಿತರಾದರೂ, ಟಿ–20 ಪಂದ್ಯಗಳಲ್ಲಿ ಅವರು ಗಳಿಸಿದ ಅತ್ಯಧಿಕ ಮೊತ್ತ ಇದೆನಿಸಿತು.

ಭಾರತದ ಕ್ಷೇತ್ರರಕ್ಷಣೆ ಗುಣಮಟ್ಟ ಹೊಂದಿರಲಿಲ್ಲ. ಜಡೇಜ ಸುಲಭ ಕ್ಯಾಚ್‌ ನೆಲಕ್ಕೆ ಹಾಕಿದರು. ಜಸ್‌ಪ್ರೀತ್‌ ಬೂಮ್ರಾ (45ಕ್ಕೆ 0) ದುಬಾರಿಯಾದರು.

ಗಪ್ಟಿಲ್‌ (21 ಎಸೆತಗಳಲ್ಲಿ 31) ಮತ್ತು ಕಾಲಿನ್‌ ಮನ್ರೊ (14) 47 ರನ್‌ ಸೇರಿಸಿ ತಮ್ಮ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಇಬ್ಬರೂ ಅಲ್ಪ ಅಂತರದಲ್ಲಿ ನಿರ್ಗಮಿಸಿದರು. ಕ್ರಮಾಂಕದಲ್ಲಿ ಬಡ್ತಿ ಪಡೆದ ಸ್ಯಾಂಟ್ನರ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ವಿಲಿಯಮ್ಸನ್‌ ಇನ್ನೊಂದೆಡೆ ಗಟ್ಟಿಯಾಗಿ ನಿಂತರು.

ಬೂಮ್ರಾ ಮಾಡಿದ ಇನಿಂಗ್ಸ್‌ನ 19ನೇ ಓವರ್‌ನಲ್ಲಿ 11 ರನ್‌ಗಳು ಬಂದವು. ಅಂತಿಮ ಓವರ್‌ನ (ಶಮಿ) ಮೊದಲ ಎಸೆತ ಸಿಕ್ಸರ್‌ ಆಯಿತು. ಆದರೆ ಅದೇ ಓವರ್‌ನಲ್ಲಿ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ (10 ಎಸೆತಗಳಲ್ಲಿ 17) ಅವರ ವಿಕೆಟ್‌ಗಳನ್ನು ಪಡೆದ ಪರಿಣಾಮ ಪಂದ್ಯ ಸೂಪರ್‌ ಓವರ್‌ಗೆ ಬೆಳೆಯಿತು.

ಭಾರತ ಸತತ ಮೂರನೇ ಬಾರಿ ಟಾಸ್‌ ಸೋತಿತ್ತು. ಆದರೆ ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ರೋಹಿತ್‌, ಈ ಪಂದ್ಯದಲ್ಲಿ ಅಮೋಘ ಆರ್ಧಶತಕ ಗಳಿಸಿದರು. ಆರು ಬೌಂಡರಿ, ಮೂರು ಸಿಕ್ಸರ್‌ಗಳನ್ನು ಎತ್ತಿದ ಅವರು, ರಾಹುಲ್‌ ಜೊತೆ ಮೊದಲ ವಿಕೆಟ್‌ಗೆ 89 ರನ್‌ ಸೇರಿಸಿದ್ದರು. ರಾಹುಲ್‌ ನಿರ್ಗಮನದ ನಂತರ, ಶಿವಂ ದುಬೆ ಕ್ರಮಾಂಕದಲ್ಲಿ ಬಡ್ತಿ ನೀಡಿದರೂ ಅದೇನೂ ಫಲ ನೀಡಲಿಲ್ಲ. ಈ ಹಂತದಲ್ಲಿ ಭಾರತದ ರನ್‌ ವೇಗ ಕುಂಠಿತಗೊಂಡಿತು. ಈ ಒತ್ತಡದಲ್ಲಿ ಶರ್ಮಾ ಕೂಡ ಬೆನೆಟ್‌ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ಮೂರು ಓವರುಗಳ ಅಂತರದಲ್ಲಿ ಏಳು ರನ್‌ಗಳಿಗೆ ಮೂರು ವಿಕೆಟ್‌ಗಳು ಉರುಳಿದವು.

ಆದರೆ ನಾಯಕ ವಿರಾಟ್‌ ಕೊಹ್ಲಿ (38, 27 ಎಸೆತ) ಮತ್ತು ಶ್ರೇಯಸ್‌ ಅಯ್ಯರ್‌ (17, 16 ಎಸೆತ) ನಾಲ್ಕನೇ ವಿಕೆಟ್‌ಗೆ 46 ರನ್‌ ಸೇರಿಸಿ ತಂಡ ಕುಸಿಯದಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT