ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋ ರೂಟ್, ಸ್ಮಿತ್, ಕೇನ್‌ಗೆ ಬೌಲ್ ಮಾಡುವುದು ಇಷ್ಟ: ರವಿಚಂದ್ರನ್ ಅಶ್ವಿನ್

Published 5 ಮಾರ್ಚ್ 2024, 14:13 IST
Last Updated 5 ಮಾರ್ಚ್ 2024, 14:13 IST
ಅಕ್ಷರ ಗಾತ್ರ

ಧರ್ಮಶಾಲಾ: ‘ಜೋ ರೂಟ್‌, ಸ್ಟೀವನ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಅವರಿಗೆ ಬೌಲಿಂಗ್ ಮಾಡುವುದನ್ನು ನಾನು  ಖುಷಿಪಡುತ್ತೇನೆ. ಅವರು ಈಗ ವಿಶ್ವದ ಕೆಲವು ಅತ್ಯುತ್ತಮ ಬ್ಯಾಟರ್‌ಗಳಾಗಿದ್ದಾರೆ’ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟರು.

ಧರ್ಮಶಾಲಾದಲ್ಲಿ ಇಂಗ್ಲೆಂಡ್‌ ವಿರುದ್ಧ ಮಾರ್ಚ್‌ 7 ರಿಂದ ನಡೆಯಲಿರುವ ಟೆಸ್ಟ್‌ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಅಶ್ವಿನ್ ಪಾಲಿಗೆ ನೂರನೇ ಟೆಸ್ಟ್‌ ಆಗಲಿದೆ. 37 ವರ್ಷದ ಸ್ಪಿನ್ನರ್‌ 13 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸ್ಮರಣೀಯ ಕ್ಷಣ, ಕಲಿತ ಪಾಠಗಳನ್ನು ಮಾಧ್ಯಮಗೋಷ್ಠಿಯಲ್ಲಿ ತೆರೆದಿಟ್ಟರು.

‘ಪ್ರಥಮ ದರ್ಜೆ ಪಂದ್ಯವನ್ನಾಡುವ ಮೊದಲು ನಾನು ತಮಿಳುನಾಡು ತಂಡದ ‘ನೆಟ್ಸ್‌’ನಲ್ಲಿ ಎಸ್‌.ಬದರೀನಾಥ್ ಅವರಿಗೆ ಬೌಲ್ ಮಾಡಿದ್ದೆ. ಅವರು ಸ್ಪಿನ್ ಎದುರು ಅತ್ಯುತ್ತಮ ಆಟಗಾರ. ಹಾಗೆಯೇ ಮಿಥುನ್ ಮನ್ಹಾಸ್ ಮತ್ತು ರಜತ್ ಭಾಟಿಯಾ (ಇಬ್ಬರೂ ದೆಹಲಿ) ಅವರಿಗೂ ಬೌಲ್ ಮಾಡಿದ್ದೆ. ಈ ಮೂವರೂ ಸ್ಪಿನ್‌ ಎದುರಿಸುವಲ್ಲಿ ಚಾಣಾಕ್ಷರು. ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುವ ಮೊದಲು ನನಗೆ ಒಂದು ಹಂತದ ‘ಶಾಲಾ ಶಿಕ್ಷಣ’ ಇವರಿಂದ ದೊರಕಿತ್ತು’ ಎಂದು ಅಶ್ವಿನ್ ಹೇಳಿದರು. ಈ ಮೂವರು ನನಗೆ ಅಮೂಲ್ಯ ಪಾಠಗಳನ್ನು ಕಲಿಸಿದರು ಎಂದರು.

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೊದಲೇ ಅವರು ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಆಡಿದ್ದರು. ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಪರ ಪ್ರದರ್ಶನ ಅವರಿಗೆ ಈ ಅವಕಾಶ ನೀಡಿತ್ತು.

ಆದರೆ ಚುಟುಕು ಕ್ರಿಕೆಟ್‌ನಿಂದಾಗಿಯಷ್ಟೇ ತಮಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು ಎಂಬುದನ್ನು ಅವರು ಒಪ್ಪಲಿಲ್ಲ.‘ನಾನು ಟಿ20 ಕ್ರಿಕೆಟ್‌ನಿಂದಾಗಿ ಭಾರತ ತಂಡಕ್ಕೆ ಬಂದಿದ್ದೇನೆ ಎಂಬುದು ಸರಿಯಲ್ಲ. ಪ್ರಥಮ ದರ್ಜೆ ಕ್ರಿಎಕಟ್‌ನಲ್ಲಿ 30–40 ಪಂದ್ಯಗಳನ್ನು ಆಡಿದ್ದೆ. ನಂತರವಷ್ಟೇ ತಂಡಕ್ಕೆ ಆಯ್ಕೆಯಾದೆ’ ಎಂದರು.

‘ಭಾರತ ತಂಡಕ್ಕೆ ಆಯ್ಕೆಯಾದ ವರ್ಷವೇ (2011) ಟೆಸ್ಟ್ ತಂಡಕ್ಕೂ ಪದಾರ್ಪಣೆ ಮಾಡಿದ್ದೆ. ಇರಾನಿ ಟ್ರೋಫಿಯಲ್ಲಿ ಭಾರತ ಇತರರ ತಂಡದ ಪರ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದೆ. ಚೆನ್ನೈನಲ್ಲಿ 3–4 ವರ್ಷ ಕ್ಲಬ್ ಕ್ರಿಕೆಟ್‌ ಕೂಡ ಆಡಿದ್ದೆ. ಅಲ್ಲಿ ನಾನು ಮಾಡುತ್ತಿದ್ದ ತಪ್ಪುಗಳನ್ನು ಹೇಳುತ್ತಿದ್ದರು. ಶಿಸ್ತನ್ನು ಕಲಿಸಿದರು. ದೀರ್ಘ ಸ್ಪೆಲ್‌ ಮಾಡುತ್ತಿದ್ದೆ’ ಎಂದರು.

‘50 ಓವರುಗಳ ಪಂದ್ಯವೊಂದರಲ್ಲಿ ನಾನು ಐದು ವಿಕೆಟ್ ಪಡೆದಿದ್ದರಿಂದ ನನಗೆ ಸಿಎಸ್‌ಕೆ ಪರ ಆಡುವ ಅವಕಾಶ ದೊರೆಯಿತು’ ಎಂದರು.

ಅನಿಲ್ ಕುಂಬ್ಳೆ ಬಿಟ್ಟರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT