ಮಂಗಳವಾರ, ನವೆಂಬರ್ 24, 2020
22 °C

PV Web Exclusive: ಗೇಲ್ ‘ಯೂನಿವರ್ಸ್ ಬಾಸ್’ ಆದದ್ದು ಹೀಗೆ...

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಬ್ರಯಾನ್ ಲಾರಾ ಪಾದಚಲನೆ, ರನ್ ಗಳಿಕೆಯ ವೇಗದಲ್ಲಿ ಬೆವರ ಹನಿಗಳು ಹೊಮ್ಮುತ್ತಿದ್ದವು. ಅದೇ ದೇಶವನ್ನು ಪ್ರತಿನಿಧಿಸಿದ ಕ್ರಿಸ್ ಗೇಲ್ ನಿಂತಲ್ಲೇ ಸಿಕ್ಸರ್ ಹೊಡೆದು ಮುಖ ಅರಳಿಸುತ್ತಾರೆ. ತಮ್ಮನ್ನು ತಾವೇ ‘ಯೂನಿವರ್ಸ್ ಬಾಸ್’ ಎಂದು ಅವರು ಕರೆದುಕೊಂಡಿದ್ದಾರೆ. ಅವರು ಹೊಡೆದಿರುವ ಸಿಕ್ಸರ್‌ಗಳನ್ನು ಎಣಿಸುತ್ತಾ ಬಂದರೆ ಆ ಮಾತಿನಲ್ಲಿ ಇರುವುದು ಆತ್ಮವಿಶ್ವಾಸ ಎನ್ನುವುದು ಸ್ಪಷ್ಟವಾಗುತ್ತದೆ.

ಬ್ರಯಾನ್ ಲಾರಾಗೆ ಒಂದು ಬಿರುದಿತ್ತು, ‘ಪ್ರಿನ್ಸ್ ಆಫ್ ವೆಸ್ಟ್ಇಂಡೀಸ್’ ಅಂತ. ಕ್ರಿಸ್‌ ಗೇಲ್ 2013ರಲ್ಲಿ ತಮಗೆ ತಾವೇ ಒಂದು ಬಿರುದು ಕೊಟ್ಟುಕೊಂಡರು, ‘ಯೂನಿವರ್ಸ್ ಬಾಸ್’ ಅಂತ. ಬ್ಯಾಟ್‌ನ ಹಿಂಬದಿಯಲ್ಲಿ ಕೂಡ ‘ದಿ ಬಾಸ್’ ಎಂದು ಬರೆದುಕೊಂಡು ಓಡಾಡುವಷ್ಟು ನಿಸ್ಸಂಕೋಚಿ. ಲಾರಾ ಮುಖದ ನಿರಿಗೆಗಳ ನಡುವೆ ಸದಾ ಸಂಕೋಚ ತುಳುಕುವಂತೆ ಕಾಣುತ್ತಿತ್ತು. ಗೇಲ್ ರಕ್ಕಸ ವಂಶದ ಕುಡಿಯಂದದಿ ಬೀಗುತ್ತಾರೆ. 1994ರಲ್ಲಿ ವಾರ್ವಿಕ್‌ಷೈರ್ ಪರವಾಗಿ ದುರ್ಹಮ್ ತಂಡದ ವಿರುದ್ಧ ಲಾರಾ 501 ರನ್ ಹೊಡೆದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಾದ ಅತಿ ಹೆಚ್ಚು ರನ್‌ಗಳು ಅವು. ಆ ದಾಖಲೆಯನ್ನು ಯಾರೂ ಅಳಿಸಲು ಆಗಿಲ್ಲ. ಅದಾದ ಮೇಲೆ ಇನ್ನೂ ಒಂದೂವರೆ ದಶಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದರು. ಐದಡಿ ಎಂಟು ಇಂಚು ಎತ್ತರದ ಲಾರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 34 ಶತಕಗಳನ್ನು ಒಳಗೊಂಡ 11,953 ರನ್‌ಗಳನ್ನು ಸೇರಿಸಿದವರು. 52.88ರ ಸರಾಸರಿಯಲ್ಲಿ ಅಷ್ಟೊಂದು ರನ್ ಗಳಿಸುವುದೆಂದರೆ ಹೆಮ್ಮೆಯ ವಿಷಯ. ಗೇಲ್ ವಯಸ್ಸಿನಲ್ಲಿ ಲಾರಾ ಅವರಿಗಿಂತ ಹತ್ತು ವರ್ಷ ಚಿಕ್ಕವರು. ಈಗ 41ರ ಹರೆಯ. ಟ್ವೆಂಟಿ20 ಕ್ರಿಕೆಟ್‌ನಲ್ಲಿ ತಾವು ಯಾಕೆ ಬಾಸ್ ಎನ್ನುವುದನ್ನು ಸಾರುವಂತೆ ಇವತ್ತೂ ಅವರು ಸಿಕ್ಸರ್ ಹೊಡೆಯುತ್ತಿದ್ದಾರೆ. ಲಾರಾ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ಹೊಡೆದದ್ದು ಟೆಸ್ಟ್‌ನಲ್ಲಿ 88 ಹಾಗೂ ಏಕದಿನದ ಪಂದ್ಯಗಳಲ್ಲಿ 133 ಸಿಕ್ಸರ್‌ಗಳನ್ನು. ಅವರಿಗಿಂತ 28 ಕಡಿಮೆ ಟೆಸ್ಟ್ ಪಂದ್ಯಗಳಲ್ಲೇ ಗೇಲ್ 98 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಲಾರಾ ಅವರಿಗಿಂತ ಒಂದೇ ಒಂದು ಹೆಚ್ಚು ಏಕದಿನದ ಪಂದ್ಯಗಳನ್ನು ಆಡಿರುವ ದೈತ್ಯ 331 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನೂ ಸೇರಿಸಿಕೊಂಡರೆ ಅಕ್ಟೋಬರ್ 20ರ ವರೆಗೆ ಒಟ್ಟು 869 ಸಿಕ್ಸರ್‌ಗಳನ್ನು ಅವರು ಹೊಡೆದಿರುವುದನ್ನು ನೋಡಿ ಕಣ್ಣರಳಿಸಲೇಬೇಕು. ಬೌಂಡರಿಗಳನ್ನು ಲೆಕ್ಕ ಹಾಕಿದರೆ ಕಣ್ಣುಗಳು ಮತ್ತಷ್ಟು ಅಗಲಗೊಂಡಾವು. ಎಲ್ಲಾ ಪ್ರಕಾರದ ಕ್ರಿಕೆಟ್‌ಗಳಿಂದ 2678 ಬೌಂಡರಿಗಳು ಗೇಲ್‌ ಬ್ಯಾಟ್‌ನಿಂದ ಹರಿದಿವೆ. ಅವರ ವೃತ್ತಿಪರ ಕ್ರಿಕೆಟ್‌ ಬದುಕಿನ ಇದುವರೆಗಿನ ಒಟ್ಟು ರನ್‌ ಗಳಿಕೆ 23,912. ಅದರಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳಿಂದ ಜಮೆಯಾಗಿರುವ ಮೊತ್ತ 15,926. ಅಂದರೆ 7986 ರನ್‌ಗಳನ್ನಷ್ಟೇ ಅವರು ಓಡಿ ಗಳಿಸಿರುವುದು. ಹಾಗೆ ನೋಡಿದರೆ ಲಾರಾ ಬೌಂಡರಿ ಗಳಿಕೆಯಲ್ಲಿ ಗೇಲ್‌ ಅವರಿಗಿಂತ ಮುಂದು. ಯಾಕೆಂದರೆ, ಬರೀ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ಅವರು 2594 ಬೌಂಡರಿಗಳನ್ನು ಹೆಕ್ಕಿದ್ದಾರೆ.

ಅಂಕಿಸಂಖ್ಯೆಗೂ ‘ಬಾಸ್‌’ ಆಗುವುದಕ್ಕೂ ಸಂಬಂಧ ಇರುತ್ತದೆ. ಲಾರಾ, ಗೇಲ್ ಇಬ್ಬರೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದವರು. ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು. ತಾಂತ್ರಿಕವಾಗಿ ಕಣ್ಣಿಗೆ ಹಿತವೆನ್ನಿಸುವ ಆಟವನ್ನು ಲಾರಾ ಆಡಿದರೆ, ಎದುರಾಳಿಗಳ ಧೂಳೀಪಟ ಮಾಡುವಂತೆ ಗೇಲ್ ಸಿಕ್ಸರ್‌ಗಳನ್ನು ಹೊಡೆಯುತ್ತಾರೆ. ಫಿಟ್‌ನೆಸ್ ವಿಷಯದಲ್ಲಿ ಲಾರಾಗೆ ಹೆಚ್ಚು ಅಂಕ ಸಲ್ಲುತ್ತದೆ. ಗೇಲ್ ಆರೋಗ್ಯ ಪದೇ ಪದೇ ಕೈಕೊಟ್ಟಿದೆ. ಅದಕ್ಕೆ ತಾಜಾ ಉದಾಹರಣೆ ಈ ಸಲ ಐಪಿಎಲ್ ಆಡಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಅವರು ಸೇರಿಕೊಂಡ ಮೇಲೂ ಫುಡ್ ಪಾಯ್ಸನಿಂಗ್‌ನಿಂದ ಬಳಲಿದ್ದರು. ಲಾರಾ ನಡೆ–ನೋಟ–ನಿಲುವಿನಲ್ಲಿ ವಿನಯ ಕಾಣುತ್ತದೆ. ಗೇಲ್ ಇವತ್ತಿಗೂ ತುಡುಗು ಹುಡುಗನಂತೆ ಭಾಸವಾಗುತ್ತಾರೆ. ಅವರ ವೇಷಭೂಷಣವೂ ಹಾಗೆಯೇ ಇದೆ. ಸಂಕೋಚವನ್ನು ದೂರದಲ್ಲೆಲ್ಲೋ ಇಟ್ಟುಬಂದಂತೆ ಅವರು ನಗಬಲ್ಲರು. ಭುಜಬಲ ತೋರಿಸಿ, ನಿಧಾನಕ್ಕೆ ಕೈಕಾಲು ಆಡಿಸಿ ನಗಿಸಲೂ ಬಲ್ಲರು.

ಇಪ್ಪತ್ತು ವರ್ಷಗಳ ಹಿಂದೆ ಗೇಲ್ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ಲಾರಾ ಇನ್ನೂ ಒಳ್ಳೆಯ ಫಾರ್ಮ್‌ನಲ್ಲಿ ಇದ್ದರು. ಅವರಿಂದ ಗೇಲ್ ಅದೇನನ್ನು ಕಲಿತರೋ ಗೊತ್ತಿಲ್ಲ. ಆದರೆ, ಟೆಸ್ಟ್ ಕ್ರಿಕೆಟ್ ಮೇಲಿನ ಪ್ರೀತಿಯನ್ನಂತೂ ಉಳಿಸಿಕೊಂಡರು. ಇಂದಿಗೂ ಅವರು ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿಲ್ಲ. ಅವಕಾಶ ಸಿಕ್ಕರೆ ಮತ್ತೊಮ್ಮೆ ಆಡಲು ಸೈ ಎನ್ನುತ್ತಾರೆ. ಸರ್ ಡಾನ್ ಬ್ರಾಡ್‌ಮನ್, ಬ್ರಯಾನ್ ಲಾರಾ, ವೀರೇಂದ್ರ ಸೆಹ್ವಾಗ್ ಇವರೆಲ್ಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕಗಳ ಸರದಾರರೆನ್ನಿಸಿಕೊಂಡಿದ್ದರು. ಆ ಪಟ್ಟಿಗೂ ಗೇಲ್ ಸೇರಿಕೊಂಡರು. ಏಕದಿನ ಪಂದ್ಯಗಳಲ್ಲಿ ಅತಿ ವೇಗದ ದ್ವಿಶತಕ ದಾಖಲಾಗಿದ್ದುದು ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿ. ಕ್ಯಾನ್‌ಬೆರಾದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 147 ಎಸೆತಗಳಲ್ಲೇ ಆ ಗಡಿಯನ್ನು ದಾಟಿದ ಗೇಲ್ ಆ ದಾಖಲೆಯನ್ನೂ ಅಳಿಸಿಹಾಕಿದರು. 2015ರಲ್ಲಿ ಆ ಇನಿಂಗ್ಸ್ ಬಂದಾಗ ಗೇಲ್ ವಯಸ್ಸು 36 ವರ್ಷ. ವಿಂಡೀಸ್ ಪರವಾಗಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರೂ ಅವರೇ (10,480).

ಗೇಲ್‌ ವೇಗವಾಗಿ ಓಡಲಾರರು. ಅವರ ಯೌವನದ ದಿನಗಳಲ್ಲೂ ಪರಿಸ್ಥಿತಿ ಹಾಗೆಯೇ ಇತ್ತು. ಅದಕ್ಕೇ ಅವರು ಹಾರ್ಡ್ ಹಿಟಿಂಗ್ ಅನ್ನೇ ತಮ್ಮ ಆಟದ ಶೈಲಿಯಾಗಿಸಿಕೊಂಡದ್ದು. ಟೆಸ್ಟ್‌ ಪಂದ್ಯದ ಮೊದಲ ಎಸೆತವನ್ನು ವಿಶ್ವದ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಸಿಕ್ಸರ್‌ಗೆ ಅಟ್ಟಿಲ್ಲ. ಯಾವ ಪ್ರಕಾರದ ಆಟವಾಗಲಿ, ಹೊಡಿ–ಬಡಿ ಎನ್ನುವುದೇ ತಮ್ಮ ತಂತ್ರ ಎಂದುಕೊಂಡವರು ಆರಡಿಗೂ ಎತ್ತರದ ಈ ದೈತ್ಯ. 2007ರಲ್ಲಿ ಐಸಿಸಿ ವಿಶ್ವ ಟ್ವೆಂಟಿ20 ಕ್ರಿಕೆಟ್ ಟೂರ್ನಿ ಪ್ರಾರಂಭವಾಯಿತು. ಲಾರಾ ಏಕದಿನ ಪಂದ್ಯಗಳಿಗೆ ಗುಡ್‌ಬೈ ಹೇಳಿದ ವರ್ಷವೂ ಅದೇ. ದಕ್ಷಿಣ ಆಫ್ರಿಕಾ ವಿರುದ್ಧವೇ ವಿಂಡೀಸ್‌ನ ಮೊದಲ ಪಂದ್ಯ. ಗೇಲ್ 57 ಎಸೆತಗಳಲ್ಲಿ 117 ರನ್ ಗಳಿಸಿದರು. ಹತ್ತು ಸಿಕ್ಸರ್‌ಗಳನ್ನು ಆ ಇನಿಂಗ್ಸ್ ಒಳಗೊಂಡಿತ್ತು. ಆಡಿದ ಮೊದಲ ಚುಟುಕು ಪಂದ್ಯದಲ್ಲೇ ಶತಕ ಗಳಿಸಿ, ಅವರು ಇನ್ನೊಂದು ದಾಖಲೆ ಬರೆದರು. ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿ ಶುರುವಾದಾಗ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಅವರನ್ನು ದೊಡ್ಡ ಮೊತ್ತಕ್ಕೆ ಹರಾಜಿನಲ್ಲಿ ಪಡೆದುಕೊಂಡಿತು. ಅಂದುಕೊಂಡಷ್ಟು ಚೆನ್ನಾಗಿ ಅವರು ಆಡಲಿಲ್ಲ. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡ ಮೇಲೆ ಅದೃಷ್ಟ ಬದಲಾಯಿತು. 332 ಎಸೆತಗಳಲ್ಲಿ 608 ರನ್‌ಗಳನ್ನು ಆ ವರ್ಷ ಗೇಲ್ ಕಲೆಹಾಕಿದರು. ಅದರ ನಂತರದ ವರ್ಷ 708 ರನ್ ಜಮೆ ಮಾಡಿ, ಫಾರ್ಮ್ ಮುಂದುವರಿಸಿದರು. 2014ರಲ್ಲಿ ಮತ್ತೆ ವೈಫಲ್ಯ. 2015ರಲ್ಲಿ 491 ರನ್‌ಗಳನ್ನು ಐಪಿಎಲ್‌ನಲ್ಲಿ ಗಳಿಸಿದರು. ಈಗ ಕಿಂಗ್ಸ್ ಇಲೆವೆನ್ ಪಂಜಾಬ್ ಅವರ ಮೇಲೆ ಭರವಸೆ ಇಟ್ಟಿದೆ. ಕಳೆದ ಋತುವಿನಲ್ಲಿ 319 ಎಸೆತಗಳಲ್ಲಿ 490 ರನ್‌ ಗಳಿಸಿ ವಯಸ್ಸಾದಷ್ಟೂ ತಾವು ಪ್ರಭಾವಿ ಎನ್ನುವುದನ್ನು ಗೇಲ್ ಸಾಬೀತುಪಡಿಸಿದ್ದರು. ಎರಡು ಮೂರು ಪಂದ್ಯಗಳಲ್ಲಿ ತಮ್ಮ ತಂಡಕ್ಕೆ ಗೆಲುವನ್ನು ಒಬ್ಬರೇ ನಿಂತು ದಕ್ಕಿಸಿಕೊಟ್ಟಿದ್ದರು.

ಇಂಗ್ಲೆಂಡ್‌ನಲ್ಲಿ ಮೊದಲು ವೃತ್ತಿಪರ ಕ್ರಿಕೆಟ್ ಶುರುವಾದಾಗ 1871ರಲ್ಲಿ ಡಬ್ಲ್ಯುಜಿ ಗ್ರೇಸ್ ತಮ್ಮದೇ ನೆಲದಲ್ಲಿ ಹೆಸರುವಾಸಿಯಾಗಿದ್ದರು. ಯಾಕೆಂದರೆ, 23 ವರ್ಷ ತುಂಬುವಷ್ಟರಲ್ಲಿ ಹತ್ತು ಶತಕಗಳು ಅವರ ಬ್ಯಾಟ್‌ನಿಂದ ಹೊಮ್ಮಿದ್ದವು. ಮೊದಲ 17 ಶತಕಗಳಲ್ಲಿ ಅವರದ್ದೇ ಅಷ್ಟೊಂದು ಎನ್ನುವುದು ಆ ಕಾಲಘಟ್ಟದಲ್ಲಿ ದೊಡ್ಡ ಸುದ್ದಿ. ಸಸೆಕ್ಸ್ ವಿರುದ್ಧ 104 ರನ್ ಗಳಿಸಿ ಗ್ಲೌಸೆಸ್ಟರ್ ತಂಡಕ್ಕೆ ಜೀವಾನಿಲವೆಂಬಂತೆ ಇಂಗ್ಲೆಂಡ್‌ನ ಗ್ರೇಸ್ ಆಡಿದಾಗ 50ನೇ ಶತಕ ಅವರ ಬ್ಯಾಟ್‌ನಿಂದ ದಾಖಲಾಯಿತು. 1876ರ ಹೊತ್ತಿಗೆ ಅಂಥದೊಂದು ಸಾಧನೆಯನ್ನು ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾಡಿದ್ದರು. ಶತಕ ಗಳಿಸುವುದು ಕ್ರಿಕೆಟ್ ಪ್ರಾರಂಭವಾದ ಶತಮಾನದಲ್ಲಿ ಹೆಮ್ಮೆಯ ಸಂಗತಿಯಾಗಿತ್ತು. ಇವತ್ತಿಗೂ ಆ ವಿಷಯದಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಟ್ವೆಂಟಿ20 ಕ್ರಿಕೆಟ್‌ನಲ್ಲಿ ಶತಕ ದಾಖಲಿಸುವುದು ಕಷ್ಟವೇ ಸರಿ. ಗೇಲ್ ಇದುವರೆಗೆ ಐಪಿಎಲ್‌ನಲ್ಲೇ ಆರು ಶತಕಗಳನ್ನು ಕಲೆಹಾಕಿದ್ದಾರೆ. ಗ್ರೇಸ್‌ ಬ್ಯಾಟ್ಸ್‌ಮನ್‌ಷಿಪ್ ರೀತಿಯೂ ಗೇಲ್ ಆಟಕ್ಕೂ ಅಜಗಜಾಂತರ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಬರೀ 31 ಎಸೆತಗಳಲ್ಲಿ ನೂರು ರನ್‌ಗಳ ಗಡಿ ದಾಟಿ, ಆಮೇಲೆ 175ರ ವರೆಗೆ ಮೊತ್ತ ಹಿಗ್ಗಿಸಿ, ಔಟಾಗದೆ ಉಳಿದ ಇನಿಂಗ್ಸ್‌ ಅನ್ನು ಮರೆಯಲಾಗದು. ಆರ್‌ಸಿಬಿ ಕೂಡ ಅದನ್ನು ಮರೆಯುವುದಿಲ್ಲ. 66 ಎಸೆತ, 13 ಬೌಂಡರಿ, 17 ಸಿಕ್ಸರ್–ಇದು ಆ ಇನಿಂಗ್ಸ್‌ನ ವೈಶಿಷ್ಟ್ಯ.

ಈಗ ಕೆ.ಎಲ್. ರಾಹುಲ್ ಕಿಂಗ್ಸ್‌ ಇಲೆವೆನ್ ತಂಡದ ನಾಯಕ. ಅವರ ಆಟ ಕೂಡ ಗ್ರೇಸ್ ಆಡುತ್ತಿದ್ದಂತೆಯೇ ಇದೆ. ವಿರಾಟ್‌ ಕೊಹ್ಲಿ ಹೇಗೆ ಬೌಂಡರಿಗಳನ್ನು ಗಳಿಸುತ್ತಾ, ಆಗೀಗ ಸಿಕ್ಸರ್ ಹೊಡೆಯುವರೋ ಹಾಗೆ. ಇಂತಹ ನಾಯಕ ಸೂಪರ್‌ಓವರ್‌ನಲ್ಲಿ ಮತ್ತೆ ನಲವತ್ತೊಂದರ ಗೇಲ್‌ ಕೈಗೇ ಮೊನ್ನೆ ಮೊನ್ನೆ ಬ್ಯಾಟ್‌ ಕೊಟ್ಟು ಕಳುಹಿಸಬೇಕಾಯಿತು. ಟ್ರೆಂಟ್ ಬೌಲ್ಟ್ ಹಾಕಿದ ಫುಲ್‌ಟಾಸನ್ನು ಸಿಕ್ಸರ್‌ಗೆ ಎತ್ತಿ, ತಂಡವನ್ನು ಗೆಲುವಿನ ಹಳಿ ಮೇಲೆ ತಂದು ನಿಲ್ಲಿಸಿ ಮತ್ತೆ ಈ ದೈತ್ಯ ನಕ್ಕರು. ಅದಕ್ಕೂ ಮೊದಲು ಅವರಿಗೆ ಸಿಟ್ಟು ಬಂದಿತ್ತಂತೆ. ಚೆನ್ನಾಗಿ ಆಡಿಯೂ ಈ ಬಾರಿ ಐಪಿಎಲ್‌ನ ಮೊದಲರ್ಧದಲ್ಲಿ ಸೋಲುಗಳನ್ನೇ ಹೆಚ್ಚಾಗಿ ಕಂಡ ಪಂಜಾಬ್‌ಗೆ ಈಗ ಗೇಲ್ ಇಂಧನದಂತೆ ಕಾಣುತ್ತಿದ್ದಾರೆ. ಮೂರು ಪಂದ್ಯಗಳಲ್ಲಿ ಅವರು 106 ರನ್‌ಗಳನ್ನು ಗಳಿಸಿದ್ದರೂ ಟ್ರೇಡ್‌ ಮಾರ್ಕ್ ಸಿಕ್ಸರ್‌ಗಳು ಕಾಣಸಿಗುತ್ತಿವೆ. ಹಿಂದೊಮ್ಮೆ ಅವರು ಆಸ್ಟ್ರೇಲಿಯಾದ ಬ್ರೆಟ್‌ ಲೀ ಎಸೆತವನ್ನು ಸಿಕ್ಸರ್‌ಗೆ ಎತ್ತಿದಾಗ ಚೆಂಡು ಓವಲ್ ಕ್ರೀಡಾಂಗಣದ ಹೊರಗಿದ್ದ ಲಾರ್ಡ್‌ ಟೆನಿಸನ್ ಸ್ಕೂಲ್‌ ಬಳಿಗೆ ಹೋಗಿ ಬಿದ್ದಿತ್ತು. ಅದಕ್ಕೇ ಮಕ್ಕಳಿಗೆ ಅವರ ಆಟವೆಂದರೆ ಇಷ್ಟ. ಐಪಿಎಲ್‌ನಲ್ಲಿ ಇದುವರೆಗೆ 335 ಸಿಕ್ಸರ್‌ಗಳನ್ನು ಹೊಡೆದಿರುವ ಅವರು ತಮ್ಮನ್ನು ತಾವು ‘ಯೂನಿವರ್ಸ್ ಬಾಸ್’ ಎಂದು ಕರೆದುಕೊಳ್ಳುವುದನ್ನು ನಿರ್ಲಜ್ಜೆಯ ಸಂಕೇತ ಎಂದುಕೊಳ್ಳಲಾಗದು; ಅದು ಆತ್ಮವಿಶ್ವಾಸದ ರುಜು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು