ಗುರುವಾರ , ಸೆಪ್ಟೆಂಬರ್ 19, 2019
22 °C
ಚಿತ್ತಗಾಂಗ್‌: ಏಕೈಕ ಟೆಸ್ಟ್‌ ಪಂದ್ಯ

ಜರ್ದಾನ್‌, ಅಸ್ಗರ್‌ ಅರ್ಧ ಶತಕ; ಅಫ್ಗಾನ್‌ ಬಿಗಿ ಹಿಡಿತ

Published:
Updated:

ಚಿತ್ತಗಾಂಗ್‌, ಬಾಂಗ್ಲಾದೇಶ (ಎಎಫ್‌ಪಿ): ಮಧ್ಯಮ ಕ್ರಮಾಂಕದ ಆಟಗಾರರಾದ ಇಬ್ರಾಹಿಂ ಜರ್ದಾನ್‌ ಮತ್ತು  ಅಸ್ಗರ್‌ ಅಫ್ಗನ್‌ ಅರ್ಧ ಶಕತಗಳನ್ನು ಬಾರಿಸಿದರು. ಇದರಿಂದ ಪ್ರವಾಸಿ ಅಫ್ಗಾನಿಸ್ತಾನ ತಂಡ, ಏಕೈಕ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಶನಿವಾರ ಬಾಂಗ್ಲಾದೇಶ ವಿರುದ್ಧ ಬಿಗಿ ಹಿಡಿತ ಸಾಧಿಸಿತು.

ಕೇವಲ ಮೂರನೇ ಟೆಸ್ಟ್‌ ಆಡುತ್ತಿರುವ ಅಫ್ಗಾನಿಸ್ತಾನ ತಂಡ ದಿನದಾಟ ಮುಗಿದಾಗ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 237 ರನ್‌ ಗಳಿಸಿತು. ಮೊದಲ ಇನಿಂಗ್ಸ್‌ನ 137 ರನ್‌ ಮುನ್ನಡೆ ಸೇರಿ ಪ್ರವಾಸಿ ತಂಡದ ಒಟ್ಟಾರೆ ಲೀಡ್‌ 374 ರನ್‌ಗಳಿಗೆ ಹಿಗ್ಗಿದಂತಾಗಿದೆ.

ಚೊಚ್ಚಲು ಟೆಸ್ಟ್‌ ಆಡುತ್ತಿರುವ ಜರ್ದಾನ್‌ ನಾಲ್ಕು ಸಿಕ್ಸರ್‌, ಆರು ಬೌಂಡರಿಗಳಿದ್ದ 87 ರನ್‌ ಗಳಿಸಿದರು. ಅಫ್ಗನ್‌ ಬರೋಬ್ಬರಿ  50 ರನ್‌ ಹೊಡೆದು ಪಂದ್ಯದಲ್ಲಿ ಎರಡನೇ ಅರ್ಧ ಶತಕ ದಾಖಲಿಸಿದರು. ರಶೀದ್‌ ಖಾನ್‌ (22 ಎಸೆತಗಳಲ್ಲಿ 24) ಮತ್ತು ವಿಕೆಟ್‌ ಕೀಪರ್‌ ಅಫ್ಸರ್‌ ಝಝೈ (ಅಜೇಯ 34) ಅವರು ತಂಡ ಸವಾಲಿನ ಮೊತ್ತದತ್ತ ಸಾಗಲು ಕಾಣಿಕೆ ನೀಡಿದರು.

ಶಕೀಬ್‌ ಅಲ್‌ ಹಸನ್ (53ಕ್ಕೆ3) ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಪಡೆದಿದ್ದರು. ಒಂದು ಹಂತದಲ್ಲಿ 28 ರನ್ನಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಅಫ್ಗಾನಿಸ್ತಾನ ತಂಡ, ಜರ್ದಾನ್‌ ಮತ್ತು ಅಫ್ಗಾನ್‌ ಅವರ 108 ರನ್‌ಗಳ ನಾಲ್ಕನೇ ವಿಕೆಟ್‌ ಜೊತೆಯಾಟದಿಂದ ಚೇತರಿಸಿಕೊಂಡಿತು.

ಇದಕ್ಕೆ ಮೊದಲು, 8 ವಿಕೆಟ್‌ಗೆ 194 ರನ್‌ಗಳೊಡನೆ ಶನಿವಾರ ಆಟ ಆರಂಭಿಸಿದ್ದ ಬಾಂಗ್ಲಾದೇಶ 205 ರನ್‌ಗಳಿಗೆ ಆಲೌಟ್‌ ಆಗಿತ್ತು. ಮೊಸಾದೆಕ್‌ ಹುಸೇನ್‌ 44 ರನ್‌ಗಳೊಡನೆ ಔಟಾಗದೇ ಉಳಿದರು. ರಶೀದ್‌ ಖಾನ್‌ 55 ರನ್ನಿಗೆ 5 ವಿಕೆಟ್‌ ಪಡೆದು ಯಶಸ್ವಿಎನಿಸಿದರು. 

ಸ್ಕೋರುಗಳು

ಅಫ್ಗಾನಿಸ್ತಾನ: 342 ಮತ್ತು 83.4 ಓವರುಗಳಲ್ಲಿ 8 ವಿಕೆಟ್‌ಗೆ 237 (ಇಬ್ರಾಹಿಂ ಜರ್ದಾನ್‌ 87, ಅಸ್ಗರ್‌ ಅಫ್ಗನ್‌ 50. ಅಫ್ಸರ್‌ ಝಝೈ ಬ್ಯಾಟಿಂಗ್‌ 34: ಶಕೀಬ್‌ ಅಲ್‌ ಹಸನ್‌ 53ಕ್ಕೆ3);

ಬಾಂಗ್ಲಾದೇಶ: 70.5 ಓವರುಗಳಲ್ಲಿ 205 (ಮೊಮಿನುಲ್‌ ಹಕ್‌ 52, ಮೊಸಾದೆಕ್‌ ಹುಸೇನ್ ಔಟಾಗದೇ 44; ರಶೀದ್‌ ಖಾನ್‌ 55ಕ್ಕೆ 5).

Post Comments (+)