ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಟಿಸಿಗೆ ಹೊಸ ಪಾಯಿಂಟ್ ಪದ್ಧತಿ: ಗೆದ್ದವರಿಗೆಷ್ಟು?

Last Updated 14 ಜುಲೈ 2021, 13:36 IST
ಅಕ್ಷರ ಗಾತ್ರ

ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಎರಡನೇ ಆವೃತ್ತಿಯಿಂದ ಹೊಸ ಪಾಯಿಂಟ್ ಪದ್ಧತಿ ಜಾರಿಗೊಳಿಸುವ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ಮುಂದೆ ಗೆಲ್ಲುವ ತಂಡಕ್ಕೆ 12 ಪಾಯಿಂಟ್‌ಗಳು ಲಭಿಸಲಿವೆ. ಪಂದ್ಯ ಟೈ ಆದರೆ ತಲಾ ಆರು ಮತ್ತು ಡ್ರಾ ಆದರೆ ನಾಲ್ಕು ಪಾಯಿಂಟ್‌ಗಳು ಸಿಗಲಿವೆ.

ಭಾರತ ಮತ್ತು ಇಂಗ್ಲೆಂಡ್‌ ನಡುವೆ ಆಗಸ್ಟ್‌ ನಾಲ್ಕರಿಂದ ನಡೆಯಲಿರುವ ಐದು ಪಂದ್ಯಗಳ ಸರಣಿ ಮೂಲಕ ಮುಂದಿನ ಆವೃತ್ತಿಯ ಚಾಂಪಿಯನ್‌ಷಿಪ್‌ ಆರಂಭವಾಗಲಿದೆ. ಮೊದಲ ಆವೃತ್ತಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ನ್ಯೂಜಿಲೆಂಡ್ ಪ್ರಶಸ್ತಿ ಗೆದ್ದುಕೊಂಡಿತ್ತು.

ಏಕರೂಪದಲ್ಲಿ ಪಾಯಿಂಟ್‌ಗಳ ಹಂಚಿಕೆಯಾಗುವುದಕ್ಕಾಗಿ ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಮುಂದಿನ ಆವೃತ್ತಿಯ ಪಾಯಿಂಟ್ ಪಟ್ಟಿ ಸಿದ್ಧಗೊಳಿಸುವಾಗ ಒಟ್ಟು ಪಾಯಿಂಟ್‌ಗಳ ಶೇಕಡಾವಾರು ಬಳಸಲಾಗುವುದು ಎಂದು ಐಸಿಸಿ ತಿಳಿಸಿದೆ.

ಮೊದಲ ಆವೃತ್ತಿಯಲ್ಲಿ ಪ್ರತಿ ಟೆಸ್ಟ್ ಸರಣಿಯಲ್ಲಿ 120 ಪಾಯಿಂಟ್‌ಗಳನ್ನು ನಿಗದಿ ಮಾಡಲಾಗುತ್ತಿತ್ತು. ಆದರೆ ಇದರಿಂದ ಒಟ್ಟಾರೆ ಗಳಿಕೆಯ ಲೆಕ್ಕ ಹಾಕುವಾಗ ಏಕರೂಪದಲ್ಲಿ ಹಂಚಿಕೆಯಾಗುತ್ತಿರಲಿಲ್ಲ. ಎರಡು ‍ಪಂದ್ಯಗಳ ಸರಣಿಯಲ್ಲಿ ಗೆಲ್ಲುವ ಪ್ರತಿ ಪಂದ್ಯಕ್ಕೆ 60 ಪಾಯಿಂಟ್ ಸಿಗುತ್ತಿದ್ದರೆ ಐದು ಪಂದ್ಯಗಳ ಸರಣಿಯಲ್ಲಿ 24 ಪಾಯಿಂಟ್ ನೀಡಲಾಗುತ್ತಿತ್ತು.

ಮೊದಲ ಆವೃತ್ತಿಯ ಅನುಭವದ ಆಧಾರದಲ್ಲಿ ಪಾಯಿಂಟ್ ವ್ಯವಸ್ಥೆಯನ್ನು ಸುಲಭಗೊಳಿಸುವುದಕ್ಕಾಗಿ ಹೊಸ ಪದ್ಧತಿ ಜಾರಿಗೆ ತರಲಾಗಿದೆ ಎಂದು ಐಸಿಸಿ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಅಲಾರ್ಡಿಸ್ ತಿಳಿಸಿದ್ದಾರೆ.

ಎರಡನೇ ಆವೃತ್ತಿಯ ಪಂದ್ಯಗಳು 2023ರಲ್ಲಿ ಮುಕ್ತಾಯಗೊಳ್ಳಲಿವೆ. ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ಹೊರತುಪಡಿಸಿದರೆ ಈ ವರ್ಷದ ಆ್ಯಷಸ್ ಸರಣಿಯಲ್ಲಿ ಮಾತ್ರ ಐದು ಪಂದ್ಯಗಳು ಇರುತ್ತವೆ. ಆಸ್ಟ್ರೇಲಿಯಾದಭಾರತ ಪ್ರವಾಸದಲ್ಲಿ ಮಾತ್ರ ನಾಲ್ಕು ಪಂದ್ಯಗಳ ಸರಣಿ ಇರುತ್ತದೆ. ಕಳೆದ ಬಾರಿಯಂತೆಯೇ ಒಂಬತ್ತು ತಂಡಗಳು ತಲಾ ಆರು ಸರಣಿಗಳಲ್ಲಿ ಪಾಲ್ಗೊಳ್ಳಲಿವೆ. ಇವುಗಳಲ್ಲಿ ಮೂರು ಸರಣಿ ತವರಿನಲ್ಲಿ ನಡೆಯಲಿದೆ.

*
ಭಾರತ ಬಲಿಷ್ಠ ತಂಡವಾಗಿದ್ದು ನಮ್ಮ ನೆಲದಲ್ಲಿ ವಿರಾಟ್ ಕೊಹ್ಲಿ ಬಳಗವನ್ನು ಎದುರಿಸಲು ಉತ್ಸುಕರಾಗಿದ್ದೇವೆ. ಮೊದಲ ಆವೃತ್ತಿಯಲ್ಲಿ ಕೂದಲೆಳೆ ಅಂತರದಲ್ಲಿ ಫೈನಲ್ ಪ್ರವೇಶ ಕೈತಪ್ಪಿತ್ತು. ಈ ಬಾರಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ.
-ಜೋ ರೂಟ್, ಇಂಗ್ಲೆಂಡ್ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT