ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಜಯ: ಶಮಿಗೆ ಹ್ಯಾಟ್ರಿಕ್ ವಿಕೆಟ್, ಆಫ್ಗನ್‌ಗೆ ಸೋಲಿನ ಡಬಲ್ ಹ್ಯಾಟ್ರಿಕ್

ವಿಶ್ವಕಪ್‌ ಕ್ರಿಕೆಟ್
Last Updated 22 ಜೂನ್ 2019, 19:34 IST
ಅಕ್ಷರ ಗಾತ್ರ

ಸೌತಾಂಪ್ಟನ್: ಶನಿವಾರ ಕೊನೆಯ ಓವರ್‌ನಲ್ಲಿ ಮೊಹಮ್ಮದ್ ಶಮಿ ‘ಹ್ಯಾಟ್ರಿಕ್’ ಸಾಧಿಸಿದಾಗಲೇ ಭಾರತದ ಗೆಲುವು ಖಚಿತವಾಯಿತು.

ಕ್ರಿಕೆಟ್‌ ಲೋಕದ ಮನ ಗೆದ್ದ ಅಫ್ಗಾನಿಸ್ತಾನದ ದಿಟ್ಟ ಹೋರಾಟದ ಎದುರು ಭಾರತ ತಂಡವು 11 ರನ್‌ಗಳ ರೋಚಕ ಜಯ ಸಾಧಿಸಿತು. ಆದರೆ, ಕ್ರಿಕೆಟ್‌ ಪ್ರೇಮಿಗಳಿಗೆ ರೋಚಕ ಹೋರಾಟದ ರಸದೌತಣವೂ ಲಭಿಸಿತು.

ಟೂರ್ನಿಯಲ್ಲಿ ಐದು ಸತತ ಸೋಲುಗಳನ್ನು ಅನುಭವಿಸಿದ್ದ ಅಫ್ಗಾನಿಸ್ತಾನ ತಂಡವು ಬಲಿಷ್ಠ ಭಾರತಕ್ಕೆ ಕಠಿಣ ಸವಾಲು ಒಡ್ಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 224 ರನ್‌ಗಳ ಸಾಧಾರಣ ಮೊತ್ತ ಗಳಿಸುವಂತೆ ಅಫ್ಗನ್ ಬೌಲರ್‌ಗಳು ನೋಡಿಕೊಂಡರು. ನಾಯಕ ವಿರಾಟ್ ಕೊಹ್ಲಿ ಮತ್ತು ಕೇದಾರ್ ಜಾಧವ್ ಅವರ ಅರ್ಧಶತಕಗಳ ಬಲದಿಂದಾಗಿ ತಂಡವು ಈ ಮೊತ್ತ ಗಳಿಸಲು ಸಾಧ್ಯವಾಯಿತು. ಬೌಲಿಂಗ್‌ನಲ್ಲಿ ಮಿಂಚಿದ್ದ ಮೊಹಮ್ಮದ್ ನಬಿ (33ಕ್ಕೆ2) ನಂತರ ಬ್ಯಾಟಿಂಗ್‌ನಲ್ಲಿಯೂ ಪರಾಕ್ರಮ ಮೆರೆದರು.

ಅರ್ಧಶತಕ ಗಳಿಸಿದ ನಬಿ (52; 55ಎಸೆತ, 4 ಬೌಂಡರಿ, 1ಸಿಕ್ಸರ್) ಅವರ ದಿಟ್ಟ ಆಟದಿಂದಾಗಿ ಅಫ್ಗನ್ ತಂಡವು ಗೆಲುವಿನ ದಾರಿಯಲ್ಲಿ ಸಾಗಿತ್ತು. ಕೊನೆಯ ಓವರ್‌ನಲ್ಲಿ ತಂಡಕ್ಕೆ 16 ರನ್‌ಗಳ ಅಗತ್ಯವಿತ್ತು. ಶಮಿ ಹಾಕಿದ ಆ ಓವರ್‌ನ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ನಬಿ ಆತಂಕ ಮೂಡಿಸಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತದ ಅಭಿಮಾನಿಗಳು ಕೈಮುಗಿದು ದೇವರಲ್ಲಿ ಪ್ರಾರ್ಥನೆ ಮಾಡಿದರು. ಅವರ ಪ್ರಾರ್ಥನೆ ಫಲಿಸಿತು. ಮೂರನೇ ಎಸೆತದಲ್ಲಿ ನಬಿ ವಿಕೆಟ್ ಕಬಳಿಸಿದ ಶಮಿ ‘ಭುಜಬಲ’ ಪ್ರದರ್ಶಿಸಿದರು.

ನಂತರ ಎರಡೂ ಎಸೆತಗಳಲ್ಲಿ ಕ್ರಮವಾಗಿ ಆಫ್ತಾಬ್ ಆಲಂ ಮತ್ತು ಮುಜೀಬ್ ಉರ್ ರೆಹಮಾನ್ ವಿಕೆಟ್‌ಗಳನ್ನು ಕಬಳಿಸಿದರು. ವಿಶ್ವಕಪ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್‌ ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.

1987ರಲ್ಲಿ ಚೇತನ್ ಶರ್ಮಾ ಅವರು ನಾಗಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಸಾಧಾರಣ ಮೊತ್ತ ಬೆನ್ನಟ್ಟಿದ್ದ ಅಫ್ಗನ್ ತಂಡಕ್ಕೆ ಮೊದಲ ಆಘಾತ ನೀಡಿದ್ದು ಕೂಡ ಶಮಿಯೇ. ಏಳನೇ ಓವರ್‌ನಲ್ಲಿ ಅವರು ಆರಂಭಿಕ ಬ್ಯಾಟ್ಸ್‌ಮನ್ ಹಜರತ್‌ ಉಲ್ಲಾ ಜಜೈ ವಿಕೆಟ್ ಪಡೆದಿದ್ದರು.

ಬೂಮ್ರಾ ನೀಡಿದ ತಿರುವು: ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಿದ್ದ ರೆಹಮತ್ ಶಾ ಮತ್ತು ಹಷ್ಮತ್‌ ಉಲ್ಲಾ ಶಹೀದಿ ಅವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ 42 ರನ್‌ ಗಳಿಸಿದ್ದರು. ಅಪಾರ ತಾಳ್ಮೆಯಿಂದ ತಂಡವನ್ನು ನಿಧಾನವಾಗಿ ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಯಾರ್ಕರ್ ಪರಿಣತ ಜಸ್‌ಪ್ರೀತ್ ಬೂಮ್ರಾ 29ನೇ ಓವರ್‌ನಲ್ಲಿ ತಮ್ಮ ಪ್ರತಾಪ ತೋರಿದರು. ಅದೊಂದೇ ಓವರ್‌ನಲ್ಲಿ ರೆಹಮತ್ ಮತ್ತು ಶಹೀದಿ ಇಬ್ಬರಿಗೂ ಪೆವಿಲಿಯನ್ ದಾರಿ ತೋರಿದರು. ಇದು ಭಾರತದ ಪಾಳೆಯದಲ್ಲಿ ಹೊಸ ಹುರುಪು ಮೂಡಿಸಿತು.

ಧೋನಿ ಮಾಡಿದ ಫೀಲ್ಡಿಂಗ್ ತಂತ್ರಗಳು ಮತ್ತು ಬೌಲರಗಳಿಗೆ ಕೊಟ್ಟ ಸಲಹೆಗಳು ಕ್ಲಿಕ್ ಆದವು. ಅದರಲ್ಲೂ ಚುರುಕಾಗಿ ಬ್ಯಾಟ್ ಬೀಸುತ್ತಿದ್ದ ರಶೀದ್ ಖಾನ್ ಅವರನ್ನು ಧೋನಿ ಮಿಂಚಿನ ಸ್ಪಂಪಿಂಗ್ ಮಾಡಿದರು. ಯಜುವೇಂದ್ರ ಚಾಹಲ್ ವಿಕೆಟ್ ಗಳಿಸಿ ಮಿಂಚಿದರು. ಆದರೆ ಒಂದು ಬದಿಯಲ್ಲಿ ವಿಕೆಟ್ ಬೀಳುತ್ತಿದ್ದರೂ ನಬಿ ಮಾತ್ರ ಗಟ್ಟಿಯಾಗಿ ನಿಂತು ಆಡುತ್ತಿದ್ದರು.

ಕೊನೆಯ ಹಂತದ ಓವರ್‌ಗಳ ಒತ್ತಡದಲ್ಲಿ ಬೂಮ್ರಾ ಮತ್ತು ಶಮಿ ರನ್‌ಗಳನ್ನು ನಿಯಂತ್ರಿಸಿದರು. ಕೊನೆಯ ಓವರ್‌ನಲ್ಲಿ ಶಮಿ ಮಿಂಚಿದರು. ಗಾಯಗೊಂಡಿದ್ದ ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಅವರು ತಂಡದಲ್ಲಿ ಸ್ಥಾನ ಪಡೆದಿದ್ದರು. ಭಾರತವು ಹೀನಾಯ ಸೋಲಿನಿಂದ ತಪ್ಪಿಸಿಕೊಂಡಿತು.

ಈ ಒತ್ತಡದ ನಡುವೆಯೂ ನಾಯಕ ವಿರಾಟ್ ಕೊಹ್ಲಿಯು ಐವರು ಬೌಲರ್‌ಗಳಿಗೆ ಮಾತ್ರ ಅವಕಾಶ ಕೊಟ್ಟರು.ವಿಜಯಶಂಕರ್ ಮತ್ತು ಕೇದಾರ್ ಜಾಧವ್‌ಗೆ ಬೌಲಿಂಗ್ ಕೊಡದೇ ಇರುವುದು ಅಚ್ಚರಿ ಮೂಡಿಸಿತು!

*
ಪಿಚ್‌ನಲ್ಲಿ ಚೆಂಡು ನಿಧಾನವಾಗಿ ಪುಟಿದೇಳುತ್ತಿತ್ತು. ಬೌಲರ್‌ಗಳು ಅದಕ್ಕೆ ತಕ್ಕಂತೆ ಉತ್ತಮವಾಗಿ ಬೌಲಿಂಗ್ ಮಾಡಿದರು. ನಮ್ಮ ಫೀಲ್ಡಿಂಗ್ ಚೆನ್ನಾಗಿತ್ತು.
–ಮೊಹಮ್ಮದ್ ನಬಿ,ಅಫ್ಗನ್ ಬೌಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT